ಬೆಂಗಳೂರು
ಬಿಜೆಪಿ ಬಿಡುಗಡೆಗೊಳಿಸಿರುವ ‘ಸಂಕಲ್ಪ್ ಪತ್ರ್ ಪ್ರಣಾಳಿಕೆ ‘ ಕೇವಲ ಕಾಗದದ ತುಂಡು ಮಾತ್ರ. ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ವಿಶ್ವಾಸಾರ್ಹವೂ ಅಲ್ಲ. ಇದಕ್ಕೆ ಯಾವ ಅರ್ಥವೂ ಇಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ 48 ಪುಟಗಳ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಘೋಷವಾಕ್ಯವುಳ್ಳ ‘ಸಂಕಲ್ಪ್ ಪತ್ರ್’ ಹೆಸರಿನ ಪ್ರಣಾಳಿಕೆಯನ್ನು ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಬಿಡುಗಡೆಗೊಳಿಸಿದ್ದಾರೆ.
ಬಿಜೆಪಿಯ ಪ್ರಣಾಳಿಕೆಯನ್ನು ಟೀಕಿಸಿರುವ ಹೆಚ್.ಕೆ.ಪಾಟೀಲ್, ಲೋಕಸಭೆ ಚುನಾವಣೆಯೊಂದೇ ಕಾಂಗ್ರೆಸ್ ಪಕ್ಷದ ಗುರಿಯಲ್ಲ. ದೇಶದಲ್ಲಿ ಅಭಿವೃದ್ಧಿ ಸಾಧಿಸಬೇಕು ಎನ್ನುವುದು ಪಕ್ಷದ ಗುರಿಯಾಗಿದೆ. ಪ್ರಧಾನಿ ಮೋದಿ 2014 ರಲ್ಲಿ ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಗೆ ವಿರುದ್ಧವಾಗಿ ಜನರು ಮೋದಿಯನ್ನು ಪ್ರಶ್ನಿಸಬೇಕು. ಬಡವರ ಖಾತೆಗೆ ನೇರವಾಗಿ ಜಮೆ ಮಾಡುತ್ತೇವೆ ಎಂದಿದ್ದ 15 ಲಕ್ಷ ರೂ. ಏನಾಯಿತು ? ಕೋಟ್ಯಂತರ ಉದ್ಯೋಗ ಸೃಷ್ಟಿ ಏನಾಯಿತು ? ಎಂದು ಜನರು ಧ್ವನಿಯೆತ್ತಬೇಕು ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ 165 ಭರವಸೆಗಳಲ್ಲಿ ಶೇ.95 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿತ್ತು. ನಿಜವಾದ ಪ್ರಣಾಳಿಕೆ ಎಂದರೇನು ಭರವಸೆಯನ್ನು ಹೇಗೆ ಈಡೇರಿಸಬೇಕು ಎನ್ನುವುದನ್ನು ಸಿದ್ದರಾಮಯ್ಯ ರಾಜ್ಯದ ಜನತೆಗೆ ಸಾಬೀತು ಮಾಡಿದ್ದಾರೆ. ಆದರೆ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿರುವ ಪ್ರಣಾಳಿಕೆಗೆ ಯಾವುದೇ ಕಿಮ್ಮತ್ತು ಇಲ್ಲ ಎಂದು ಹೆಚ್.ಕೆ.ಪಾಟೀಲ್ ಕಿಡಿಕಾರಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
