ಬಿಜೆಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ

ತುರುವೇಕೆರೆ

        ಒಕ್ಕಲಿಗ ಸಮುದಾಯದ ಹೆಚ್.ಡಿ.ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದು ನನಗೂ ವೈಯಕ್ತಿಕವಾಗಿ ಸಂತೋಷವಿದೆ. ಅವರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿ, ಆದರೆ ಜಿಲ್ಲೆಯ ಹೇಮಾವತಿ ನೀರಿಗೆ ತೊಂದರೆ ಮಾಡಿ ಇದೀಗ ನಮ್ಮ ಜಿಲ್ಲೆಯಲ್ಲೆ ಸ್ಪರ್ಧಿಸುತ್ತಿರುವ ಹೆಚ್.ಡಿ.ದೇವೇಗೌಡರಿಗೆ ಜನರು ಮತವನ್ನು ಹಾಕಬೇಡಿ ಎಂದು ಮಾಜಿ ಶಾಸಕ ಸುರೇಶ್‍ಗೌಡ ವಿನಂತಿ ಮಾಡಿದರು.

         ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತುಮಕೂರು ಲೋಕಸಭಾ ಚುನಾವಣೆ ನಿಮಿತ್ತ ಸೋಮವಾರ ತಾಲ್ಲೂಕು ಬಿಜೆಪಿ ವತಿಯಿಂದ ಬಿಜೆಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ, ಹಾಸನಗಳಿಗೆ ಸಾವಿರಾರು ಕೋಟಿ ಕೊಡುವ ಗೌಡರ ಕುಟುಂಬ ತುಮಕೂರಿನಲ್ಲಿ ಸ್ಪರ್ಧಿಸುವ ಮುಂಚೆ ನಮ್ಮ ಜಿಲ್ಲೆಗೆ ಯಾಕೆ ಕೊಡಲಿಲ್ಲ.

         ಹೇಮಾವತಿ ನೀರಿಗೆ ಅಡ್ಡಗಾಲಾಕುವ ಗೌಡರ ಸ್ಪರ್ಧೆ ತುಮಕೂರಿನಲ್ಲಿ ನಿಲ್ಲುತ್ತಿರುವುದು ಎಷ್ಟು ಸರಿ, ದೇವೇಗೌಡ ಹಾಗೂ ಕುಮಾರಸ್ವಾಮಿ ಎದುರು ಸತ್ಯ ಹೇಳುವಂತಿಲ್ಲ, ಒಂದೊಮ್ಮೆ ಅವರ ವಿರುದ್ಧ ಮಾತನಾಡಿದರೆ ಜಾತಿ ಲಾಬಿ ಮಾಡುತ್ತಾರೆ ಎಂದು ಆರೋಪಿಸುತ್ತಾರೆ. ಯಾಕೆ? ನಾನು ಒಕ್ಕಲಿಗನಲ್ಲವೆ, ಮುದ್ದಹನುಮೇಗೌಡ ಒಕ್ಕಲಿಗನಲ್ಲವೆ, ಅವರಿಗೆ ಯಾಕೆ ಟಿಕೆಟ್ ನೀಡಲಿಲ್ಲ? ಎಂದು ಪ್ರಶ್ನಿಸಿದರು.

         ಡಿ.ಸಿ.ಎಂ.ಪರಮೇಶ್ವರ್ ಅಧಿಕಾರದಾಸೆಗೆ ಪಕ್ಷದಲ್ಲಿನ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿಸಿದ್ದಾರೆ. ಹಾಲಿ ಸಂಸದರನ್ನು ಭಿಕಾರಿಮಾಡಿದ್ದು ಇಂದು ಕಾಂಗ್ರೆಸ್ ಮುಕ್ತ ತುಮಕೂರು ಮಾಡಲು ಡಾ. ಜಿ.ಪರಮೇಶ್ವರ್ ಹೊರಟಿದ್ದಾರೆ. ಅವರಿಗೆ ತಿಳಿದಿರಲಿಕ್ಕಿಲ್ಲ, ಒಂದು ವೇಳೆ ದೇವೇಗೌಡರೇನಾದರೂ ಈ ಭಾರಿ ಗೆದ್ದರೆ ಪರಮೇಶ್ವರ್ ಹೆಸರ ಮುಂದೆ ಮಾಜಿ ಎನ್ನುವ ಪಟ್ಟ ಕಾಯಂ ಆಗಿಬಿಡುತ್ತದೆ ಎಂದು ಎಚ್ಚರಿಸಿದರು.

        ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರಿಗೆ ವಂಚಿಸಿರುವವರು ಯಾವ ನೈತಿಕತೆಯಲ್ಲಿ ಇಂದು ತುಮಕೂರು ಜನತೆಯ ಮುಂದೆ ಮತ ಯಾಚಿಸುತ್ತಿದ್ದಾರೆ ತಿಳಿಯುತ್ತಿಲ್ಲ.

          ಒಂದು ವೇಳೆ ತುಮಕೂರು ಜನತೆ ದೇವೇಗೌಡರನ್ನು ಬೆಂಬಲಿಸಿದರೆ ತುಮಕೂರು ಜಿಲ್ಲೆಯನ್ನು ಮರಳುಗಾಡು ಮಾಡುತ್ತಾರೆ. ದೇವೇಗೌಡರ ಕುಟುಂಬ ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿನ ರೈತರ ಕಣ್ಣಲ್ಲಿ ರಕ್ತ ಸುರಿಸಿದ್ದಾರೆ, ಹೇಮಾವತಿ ನಾಲೆಗೆ ಮಣ್ಣು ಸುರಿದು ನೀರನ್ನು ತಡೆದಿರುವುದನ್ನು ನಮ್ಮ ತುಮಕೂರು ಜನತೆ ಇನ್ನೂ ಮರೆತಿಲ್ಲ, ಈ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದ್ದು ತುಮಕೂರಿನ ಮತದಾರರು ಪ್ರಜ್ನಾವಂತರಿದ್ದು ಸರಿಯಾದ ಆಯ್ಕೆ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದರು.

           ಲೋಕಸಭೆಗೆ ನಾನು ನಾಲ್ಕುಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ, ಜಿಲ್ಲೆಗೆ ನಾನು ಮಾಡಿರುವ ಕೆಲಸಗಳನ್ನು ಶ್ವೇತಪತ್ರದ ಮೂಲಕ ಜನರಿಗೆ ತಿಳಿಸುತ್ತೇನೆ, ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವ ನರೇಂದ್ರ ಮೋದಿಯವರನ್ನು ಎದುರಿಸಲು ಪ್ರತಿಪಕ್ಷಗಳು ಘಟಬಂಧನ್ ಮಾಡಿಕೊಂಡಿದ್ದಾರೆ. ಆದರೆ ಅದ್ಯಾವುದೂ ನಡೆಯುವುದಿಲ್ಲ. ವಿಶ್ವಮಟ್ಟದಲ್ಲಿ ಭಾರತದ ಹೆಸರನ್ನು ಮುಂಚೂಣಿಗೆ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆಯ್ಕೆ ಮತ್ತೊಮ್ಮೆ ಅವಶ್ಯಕತೆಯಿದೆ ಎಂದರು.

          ಶಾಸಕ ಮಸಾಲಾಜಯರಾಮ್ ಮಾತನಾಡಿ, ದೇವೇಗೌಡರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ ರಾಜಕೀಯವಾಗಿ ಒಕ್ಕಲಿಗರ ಸ್ವಾಭಿಮಾನವನ್ನು ಪರೀಕ್ಷಿಸುವ ಕೆಲಸ ದೇವೇಗೌಡರ ಕುಟುಂಬ ಮಾಡುತ್ತಿದೆ. ಹಾಸನದಲ್ಲಿ, ಮಂಡ್ಯದಲ್ಲಿ, ತುಮಕೂರಿನಲ್ಲಿ, ಲೋಕಸಭೆಗೆ ಸ್ಪರ್ಧಿಸಬಲ್ಲ ಒಕ್ಕಲಿಗ ಮುಖಂಡರಿಲ್ಲವೆ. ಇವರ ಕುಟುಂಬ ರಾಜಕಾರಣವನ್ನು ನೋಡುತ್ತಿದ್ದರೆ ಒಕ್ಕಲಿಗನಾದ ನನಗೆ ಅಸಹ್ಯ ಹುಟ್ಟುತ್ತದೆ.

          ತುಮಕೂರು ಲೋಕಸಭಾ ಒಕ್ಕಲಿಗ ಸಮುದಾಯದವರ ಸ್ವಾಭಿಮಾನದ ಪ್ರಶ್ನೆ. ಈ ಭಾರಿ ದೇವೇಗೌಡರನ್ನು ಸೋಲಿಸಿ ಜಿ.ಎಸ್.ಬಸವರಾಜುರವರನ್ನು ಗೆಲ್ಲಿಸುವುದರ ಮೂಲಕ ನಮ್ಮ ಆತ್ಮಾಭಿಮಾನವನ್ನು ಕಾಪಾಡಿಕೊಳ್ಳುತ್ತೇವೆ. ನಮ್ಮ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದವರು ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂಬ ನಂಬಿಕೆಯಿದ್ದು ಮೇ 23 ರ ನಂತರ ಮೈತ್ರಿ ಸರ್ಕಾರ ಪತನವಾಗಲಿದ್ದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

           ಕಾರ್ಯಕ್ರಮದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ, ಮಾಜಿ ಶಾಸಕ ನರೇಂದ್ರಬಾಬು, ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

            ಬಿಜೆಪಿ ಪಕ್ಷದ ಅಧ್ಯಕ್ಷ ದುಂಡರೇಣುಕಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ.ಪಂ.ಅಧ್ಯಕ್ಷ ಲಚ್ಚಿಬಾಬು, ರಮೇಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿಜಯ್‍ಕುಮಾರ್, ನಾಗರಾಜು, ಡಿ.ಟಿ.ಆರ್, ಶಿವಯ್ಯ, ಡಿ.ಆರ್.ಬಿ., ವಿ.ಬಿ.ಸುರೇಶ್, ವಿ.ಟಿ.ವೆಂಕಟರಾಮ್, ಹೆಡಗಿಹಳ್ಳಿವಿಶ್ವನಾಥ್, ಕಾಳಂಜಿಹಳ್ಳಿ ಸೋಮಣ್ಣ, ಪ್ರಕಾಶ್, ಮೈನ್ಸ್‍ರಾಜು, ಪದ್ಮಾ, ಜಯಶೀಲ, ಉಮರಾಜ್, ಅನಿತಾ, ಚಿದಾನಂದ್ ಸೇರಿದಂತೆ ಅನೇಕ ಪದಾಧಿಕಾರಿಗಳು, ಮುಖಂಡರುಗಳು ಹಾಗೂ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap