ಬೆಂಗಳೂರು
ವಿಶ್ವದಲ್ಲೇ ಅತ್ಯಂತ ಎತ್ತರದ ಯೇಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಲ ನೀಡುತ್ತಿದ್ದಂತೆಯೇ ಬಿಜೆಪಿ ನಾಯಕರು ಅವರ ವಿರುದ್ಧ ಮುಗಿಬಿದ್ದಿದ್ದು,ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯೊಂದಿಗೆ ಅವರು ಸೋನಿಯಾಗಾಂಧಿ ಅವರನ್ನು ಒಲಿಸಲು ಹೊರಟಿದ್ದಾರೆ ಎಂದಿದ್ದಾರೆ.
ಈ ಸಂಬಂಧ ಪ್ರತ್ಯೇಕವಾಗಿ ಟೀಕಾಪ್ರಹಾರ ನಡೆಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ,ಕನ್ನಡ-ಸಂಸ್ಕೃತಿ ಸಚಿವ ಸಿ.ಟಿ.ರವಿ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಸಂಸದ,ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ:ಇದು ಯೇಸು ಭಕ್ರಿಯಲ್ಲ,ಇಟಲಿಯಮ್ಮನ ಮೇಲಿನ ಭಕ್ತಿ ಎಂದಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಡಿಕೆಶಿ ವಿರುದ್ಧ ಧಾಳಿ ನಡೆಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರು,ವಿಶ್ವದಲ್ಲೇ ಅತ್ಯಂತ ಎತ್ತರದ ಯೇಸು ಪ್ರತಿಮೆಯನ್ನು ಸ್ಥಾಪಿಸಲು ಜಾಗ ನೀಡುವ ಮೂಲಕ ಚಾಲನೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗುವುದು ನಿಶ್ಚಿತ ಎಂದಿದ್ದಾರೆ.
ಅವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿರುವ ಅವರು ಇಟಲಿಯಮ್ಮ ಸೋನಿಯಾಗಾಂಧಿ ಅವರನ್ನು ಈ ಮೂಲಕ ಒಲಿಸಿಕೊಳ್ಳುವುದು ಡಿಕೆಶಿ ಗುರಿ ಎಂದು ಹೇಳಿದ್ದಾರೆ.ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಕೂಡಾ ಇದೇ ಟೀಕೆ ಮಾಡಿದ್ದು ಸೋನಿಯಾಗಾಂಧಿ ಅವರನ್ನು ಒಲಿಸಲು ಡಿಕೆಶಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರುವ ತಮ್ಮ ಆಸೆಯನ್ನು ಈ ರೀತಿ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಇಂದು ಸುದ್ದಿಗೋಷ್ಟಿಯಲ್ಲಿ ಡಿಕೆಶಿ ವಿರುದ್ಧ ಹರಿಹಾಯ್ದರಲ್ಲದೆ ಯೇಸುಕ್ರಿಸ್ತನ ಪ್ರತಿಮೆ ಸ್ಥಾಪಿಸುವ ಬದಲು ಬೆಂಗಳೂರು ಕಟ್ಟಿದ ಕೆಂಪೇಗೌಡರದೋ,ನಾಡಿಗೆ ಶಕ್ತಿ ತುಂಬಿದ ಬಾಲಗಂಗಾಧರನಾಥ ಸ್ವಾಮಿಗಳದೋ,ನಡೆದಾಡುವ ದೇವರು ಎಂದೇ ಖ್ಯಾತರಾದ ಸಿದ್ಧಗಂಗಾ ಶ್ರೀಗಳದೋ ಪ್ರತಿಮೆ ಮಾಡಿದ್ದರೆ ಜನ ಮೆಚ್ಚುತ್ತಿದ್ದರು ಎಂದು ಹೇಳಿದರು.
ನಾವು ಯಾವ ಧರ್ಮದ ವಿರೋಧಿಗಳೂ ಅಲ್ಲ.ಆದರೆ ಇವರು ವಿಶ್ವದಲ್ಲೇ ಅತ್ಯಂತ ಎತ್ತರದ ಯೇಸುಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಹೊರಟಿರುವುದು ಯೇಸುಭಕ್ತಿಯಿಂದಲ್ಲ,ಭವಿಷ್ಯದಲ್ಲಿ ಸಿಎಂ ಆಗಬೇಕು ಎಂಬ ಯುಕ್ತಿಯಿಂದ ಎಂದು ಆರೋಪ ಮಾಡಿದರು.
ಡಿಕೆಶಿ ಮಹತ್ವಾಕಾಂಕ್ಷಿ ನಾಯಕ.ಹೀಗಾಗಿ ಈಗ ವಿಶ್ವದಲ್ಲೇ ಅತ್ಯಂತ ಎತ್ತರದ ಯೇಸುಕ್ರಿಸ್ತನ ಪ್ರತಿಮೆಯನ್ನು ಸ್ಥಾಪಿಸಿ ಕೆಪಿಸಿಸಿ ಅಧ್ಯಕ್ಷರಾಗಲು ಹೊರಟಿದ್ದಾರೆ.ಆ ಮೂಲಕ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದಾರೆ ಎಂದು ಹೇಳಿದರು.
ಸಂಸದ ಅನಂತಕುಮಾರ್ ಹೆಗಡೆ ಕೂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಡಿಕೆಶಿ ವಿರುದ್ಧ ವಾಗ್ಧಾಳಿ ನಡೆಸಿದ್ದು ಇದು ಯೇಸುಕೃಪೆಗಾಗಿ ನಿರ್ಮಿಸಲು ಹೊರಟ ಪ್ರತಿಮೆಯಲ್ಲ,ಇಟಾಲಿಯನ್ ಲೇಡಿ ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ನಿರ್ಮಿಸಲಾಗುತ್ತಿರುವ ಪ್ರತಿಮೆ ಎಂದಿದ್ದಾರೆ.