ಬೆಂಗಳೂರು
ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಲಾಭಕ್ಕೆ ಪ್ರತಿಪಕ್ಷ ಬಿಜೆಪಿ ಮುಂದಾಗಿದ್ದು, ಅತೃಪ್ತರಿಗೆ ಗಾಳ ಹಾಕಲು ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ.
ಈ ಹಿಂದೆ ಆಪರೇಷನ್ ಕಮಲಕ್ಕೆ ಯತ್ನಿಸಿ ಕೈ ಸುಟ್ಟುಕೊಂಡಿರುವ ಬಿಜೆಪಿ ಈ ಬಾರಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಬಾರಿ ಗುಪ್ತವಾಗಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೂಲಕ ರಾಮಲಿಂಗಾರೆಡ್ಡಿ ಅವರನ್ನು ಸೆಳೆಯಲು ಬಿಜೆಪಿ ಚಿಂತನೆ ನಡೆಸಿದೆ.
ಎಸ್‍ಎಂಕೆ ಮುಖ್ಯಮಂತ್ರಿ ಆಗಿದ್ದ ವೇಳೆ ರಾಮಲಿಂಗಾರೆಡ್ಡಿ ಸಂಪುಟ ಸದಸ್ಯರಾಗಿದ್ದರು. ರಾಮಲಿಂಗಾರೆಡ್ಡಿ ಈವರೆಗೂ ಕೃಷ್ಣ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ.ಹೀಗಾಗಿ ಎಸ್‍ಎಂಕೆ ಮೂಲಕ ರಾಮಲಿಂಗಾರೆಡ್ಡಿಯನ್ನು ಕರೆ ತರಲು ಸ್ಕೆಚ್ ಹಾಕಲಾಗಿದೆ. ರಾಮಲಿಂಗಾರೆಡ್ಡಿ ಬಂದರೆ ಅವರ ಜೊತೆ ಪುತ್ರಿ, ಜಯನಗರ ಶಾಸಕಿ ಸೌಮ್ಯರೆಡ್ಡಿ ಕೂಡ ಬಲಿದ್ದಾರೆ ಎನ್ನುವ ಲೆಕ್ಕಾಚಾರ ಹಾಕಲಾಗಿದೆ.
ಸಚಿವ ಸ್ಥಾನ ವಂಚಿತ ರಮೇಶ್ ಜಾರಕಿಹೊಳಿ ಕಡೆಯೂ ಬಿಜೆಪಿ ನಿರೀಕ್ಷೆ ಇಟ್ಟುಕೊಂಡಿದ್ದು, ಅವರಿಂದ ಬರುವ ಹೇಳಿಕೆಯನ್ನೇ ಎದುರು ನೋಡುತ್ತಿದೆ. ಇನ್ನು ಬಿ.ಸಿ.ಪಾಟೀಲ್ ಹಾಗೂ ಶಿವರಾಮ್ ಹೆಬ್ಬಾರ್‍ಗೆ ಬಿಜೆಪಿ ಈ ಹಿಂದೆಯೇ ಆಫರ್ ನೀಡಿತ್ತು ಎನ್ನಲಾದ ಆಡಿಯೋ ಯಡಿಯೂರಪ್ಪ ಬಹುಮತ ಸಾಬೀತುಪಡಿಸುವ ವೇಳೆ ಬಹಿರಂಗಗೊಂಡು ಸಾಕಷ್ಟು ಸಂಚಲನ ಮೂಡಿಸಿತ್ತು. ಈಗ ಮತ್ತೆ ಅವರನ್ನು ಸಂಪರ್ಕಿಸಬೇಕೆ ಎನ್ನುವ ಕುರಿತು ಒಂದು ಬಣ ಚರ್ಚೆ ನಡೆಸುತ್ತಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಆನಂದ್ ಸಿಂಗ್ ಅವರನ್ನು ಮತ್ತೆ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ನಿರತವಾಗಿದೆ. ಜೊತೆಗೆ ಪಕ್ಷೇತರ ಶಾಸಕ ಶಂಕರ್‍ರನ್ನು ಸಂಪುಟದಿಂದ ಕೈಬಿಟ್ಟಿದ್ದು ಅವರನ್ನೂ ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಂದಾಗಿದೆ .ಅತೃಪ್ತರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಮಹಾಂತೇಶ್ ಕೌಜಲಗಿ, ನಾರಾಯಣರಾವ್, ಬಸವನಗೌಡ ದದ್ದಲ್, ಪ್ರತಾಪ್ ಗೌಡ ಪಾಟೀಲ್, ಗಣೇಶ್, ಬಿ.ಕೆ.ಸಂಗಮೇಶ್, ಭೀಮಾ ನಾಯ್ಕ್, ಉಮೇಶ್ ಜಾಧವ್‍ರ ನಡೆಯನ್ನು ಕಾದು ನೋಡಿ ಮುಂದಿನ ಆಪರೇಷನ್‍ಗೆ ಬಿಜೆಪಿ ಚಿಂತನೆ ನಡೆಸಿದೆಯಂತೆ.
ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ತಲೆದೋರುವ ಅಸಮಾಧಾನ ಯಾವ ಹಂತ ತಲುಪಲಿದೆ ಎನ್ನುವ ಆಧಾರದಲ್ಲಿ ಆಪರೇಷನ್ ಕಮಲ ಮಾಡಬೇಕೇ ಬೇಡವೇ ಎನ್ನುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಈ ಹಿಂದೆ ಆಪರೇಷನ್ ಕಮಲದ ಮಾಹಿತಿ ಸೋರಿಕೆಯಾಗಿ ಹಿನ್ನಡೆ ಅನುಭವಿಸಿದ್ದ ಯಡಿಯೂರಪ್ಪ ಈ ಬಾರಿ ಮಾತ್ರ ಎಲ್ಲವನ್ನೂ ಅತ್ಯಂತ ವ್ಯವಸ್ಥಿತವಾಗಿ ಮಾಡಲು ಹೊರಟಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಆಪರೇಷನ್ ಮಾಡುವ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಮಾಹಿತಿಯನ್ನೂ ಗುಪ್ತವಾಗಿಟ್ಟಿದ್ದು, ರಾಜಕೀಯದ ಹೊಸ ದಾಳ ಉರುಳಿಸಲು ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕಾಂಗ್ರೆಸ್‍ನಲ್ಲಿ ಅಸಮಾಧಾನ ಸ್ಫೋಟಗೊಂಡು ಬಿಕ್ಕಟ್ಟು ಸೃಷ್ಟಿಯಾದರೆ ಬಿಜೆಪಿ ಅದರ ಪೂರ್ಣ ಲಾಭ ಪಡೆಯಲು ಸಿದ್ಧವಾಗಿ ಕುಳಿತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ