ರಾಜ್ಯ ಮೈತ್ರಿಯಲ್ಲಿ ಬಿರುಕು : ಸಿಎಂ ಮೇಲೆ ಹೆಚ್ಚಿದ ಒತ್ತಡ

ಬೆಂಗಳೂರು

      ಮೈತ್ರಿ ಧರ್ಮವನ್ನು ಮರೆತು ಹಾದಿಬೀದಿಯಲ್ಲಿ ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿರುವ ಸಿದ್ಧರಾಮಯ್ಯ ಬೆಂಬಲಿಗರ ವರ್ತನೆ ಇದೇ ರೀತಿ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಖ್ಯವನ್ನು ಬಿಟ್ಟು ಬಿಜೆಪಿ ಜತೆ ಸೇರಿ ಪರ್ಯಾಯ ಸರ್ಕಾರ ರಚನೆ ಮಾಡಬೇಕು ಎಂದು ಹಲ ನಾಯಕರು ಸಿಎಂ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿರುವ ಅಂಶ ಬೆಳಕಿಗೆ ಬಂದಿದೆ.

     ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿನ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ ಜೆಡಿಎಸ್‍ನ ಹಲ ನಾಯಕರು, ಕಾಂಗ್ರೆಸ್ ಜತೆಗಿನ ಸಖ್ಯಕ್ಕೆ ಗುಡ್ ಬೈ ಹೇಳಬೇಕು. ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಇಂತಹದೊಂದು ಕಾರ್ಯ ಸಾಧಿತವಾಗಬೇಕು ಎಂದು ಬಿಜೆಪಿಯ ಹಲವು ನಾಯಕರು ಬಯಸಿದ್ದು ತಮ್ಮೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದ್ದಾರೆ. ನೀವು ಗ್ರೀನ್ ಸಿಗ್ನಲ್ ನೀಡಿದರೆ ಅಧಿಕೃತ ಮಾತುಕತೆ ನಡೆಸಬಹುದು ಎಂದು ಈ ನಾಯಕರು ಹೇಳಿದ್ದಾರೆ.

   ಮೈತ್ರಿಕೂಟ ಸರ್ಕಾರದ ಅಸ್ತಿತ್ವ ಲೋಕಸಭಾ ಚುನಾವಣೆಯ ತನಕ. ನಂತರ ಯಾರು ಎಲ್ಲಿಗೆ ಬೇಕಾದರೂ ಹೋಗಿ ಎಂದು ಸಿದ್ಧರಾಮಯ್ಯ ಅವರು ತಮ್ಮ ಆಪ್ತ ಶಾಸಕರಿಗೆ ಹೇಳಿರುವುದು ರಹಸ್ಯವಾಗಿ ಉಳಿದಿಲ್ಲ.

     ಹೀಗಾಗಿ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಇವರು ನಮಗೆ ವಿದ್ಯುಕ್ತವಾಗಿ ಗೇಟ್ ಪಾಸ್ ಕೊಡುತ್ತಾರೆ. ಇಲ್ಲದಿದ್ದರೆ ಸರ್ಕಾರವನ್ನು ದುರ್ಬಲಗೊಳಿಸುವ ಕೆಲಸವನ್ನು ಮುಂದುವರಿಸುತ್ತಾರೆ.ಹೀಗಾಗಿ ನಾವೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಜ್ಜಾಗುವುದು ಒಳ್ಳೆಯದು. ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಮಾತುಕತೆ ಶುರುವಾಗಬೇಕು. ಆ ಮೂಲಕ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಬೇಕು.

    ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವ ಹೆಚ್ಚಿನ ಅವಕಾಶ ಇರುವುದು ಬಿಜೆಪಿಗೇ ಹೊರತು ಕಾಂಗ್ರೆಸ್ ಪಕ್ಷಕ್ಕಲ್ಲ. ಹಾಗೊಂದು ವೇಳೆ ಅದಕ್ಕೆ ಅವಕಾಶ ದಕ್ಕಿದರೂ ತೃತೀಯ ರಂಗದ ಬೆಂಬಲವಿಲ್ಲದೆ ಅದಕ್ಕೆ ದಿಲ್ಲಿ ಗದ್ದುಗೆ ಹಿಡಿಯಲು ಸಾಧ್ಯವೇ ಇಲ್ಲ.

     ಇದು ಪ್ರಧಾನಿ ನರೇಂದ್ರಮೋದಿಯವರಿಗೂ ಗೊತ್ತು. ಹೀಗಾಗಿ ತೃತೀಯ ಶಕ್ತಿಗಳ ಪೈಕಿ ಹಲ ಶಕ್ತಿಗಳು ಬಿಜೆಪಿ ಜತೆ ಬರಲಿ ಎಂದು ಅವರೂ ತವಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇವೇಗೌಡರು ಎನ್.ಡಿ.ಎ ಜತೆ ಹೋಗಲು ಸಜ್ಜಾದರೆ ತೃತೀಯ ಶಕ್ತಿಯ ಹಲವು ಪಕ್ಷಗಳು ಆ ಕಡೆ ವಾಲುತ್ತವೆ.

      ಹಾಗೆ ಮಾಡಿದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಅಧಿಕಾರಕ್ಕೆ ಬರುವುದಲ್ಲದೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರ್ಕಾರ ಬರುವುದು ಸುಲಭವಾಗುತ್ತದೆ ಎಂದು ಈ ನಾಯಕರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.

     ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದ ಕೊನೆಯ ದಿನಗಳಲ್ಲಿ ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ತರಾತುರಿಯಲ್ಲಿ ಮಂಜೂರಾತಿ ನೀಡಿದೆ. ಹೀಗೆ ಮಂಜೂರಾತಿ ನೀಡಿದ ಪರಿಣಾಮವಾಗಿ ಅದಕ್ಕೇನು ಲಾಭವಾಯಿತು ಎಂಬುದು ನಿಮಗೂ ಗೊತ್ತು.

      ನಾಳೆ ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರ ರಚಿಸಿದರೆ, ಅದೇ ರೀತಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ನಡೆದ ಈ ಮಂಜೂರಾತಿ ಎಪಿಸೋಡನ್ನು ಸಿಬಿಐ ತನಿಖೆಗೆ ವಹಿಸಬಹುದು.

       ಹಾಗೆ ಮಾಡಿದರೆ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮುಗಿಸುವ ಆ ಪಕ್ಷದ ನಾಯಕರ ಶಕ್ತಿ ಉಡುಗಿ ಹೋಗುತ್ತದೆ. ಹಾಗೆಯೇ ಜೆಡಿಎಸ್ ಪಕ್ಷದ ಬಲವೂ ವೃದ್ಧಿಯಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ವಿಳಂಬ ಮಾಡುವುದು ಬೇಡ ಎಂದು ಈ ನಾಯಕರು ಸಿಎಂ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.

       ಆದರೆ ಈ ವಿಷಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಅಭಿಪ್ರಾಯವನ್ನು ಪಡೆಯದೆ ತಾವು ಮುಂದಡಿ ಇಡಲು ಸಾಧ್ಯವಿಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುವ ಕುರಿತು ಒಪ್ಪಂದ ಮಾಡಿಕೊಂಡವರು ಅವರು.
ಹೀಗಾಗಿ ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ಆ ತೀರ್ಮಾನಕ್ಕೆ ಬದ್ಧವಾಗಿ ನಾವು ಮುಂದಡಿಯಿಡಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದು, ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಉಂಟು ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap