ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಶತಃಸಿದ್ಧ

ದಾವಣಗೆರೆ:

     ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುವುದು ಶತಃಸಿದ್ಧ ಎಂದು ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದರು.

     ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೂರಕ್ಕೆ ನೂರು ಆಡಳಿತ ನಡೆಸಲಿದೆ ಎಂದು ಹೇಳಿದರು.16ನೇ ವಾರ್ಡ್‍ನ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ಬಿಜೆಪಿಯವರು ದುಡ್ಡು ಹಂಚಿ ಗೆದ್ದಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಹಾಗಾದರೆ, ಅವರು ಮೂರು ಬಾರಿ ಅದೇ ವಾರ್ಡ್‍ನಿಂದ ಆಯ್ಕೆಯಾಗಿದ್ದಾಗ ಅವರು ಏನೇನು ಹಂಚಿ ಗೆದ್ದಿದ್ದರು? ಎಂದು ಕಾಂಗ್ರೆಸ್‍ನ ದಿನೇಶ್ ಕೆ. ಶೆಟ್ಟಿ ಹೆಸರು ಪ್ರಸ್ತಾಪಿಸದೇ ತಿರಿಗೇಟು ನೀಡಿದರು.

      ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹೇಳುವಂತೆ ನಮ್ಮವರು (ಬಿಜೆಪಿಯವರು) ದುಡ್ಡು ಹಂಚಿರೋದೆ ನಿಜವಾಗಿದ್ದರೆ, ದೂರು ನೀಡಬೇಕಾಗಿತ್ತು ಎಂದ ಅವರು, ಈ ಹಿಂದೆ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಮ್ಮ ಹಿರಿಯ ಮುಖಂಡ ಎಲ್.ಬಸವರಾಜ್ ಅವರನ್ನು ಕಿಡ್ನಾಪ್ ಮಾಡಿಸಿದ್ರು. ಹಾಗೇ ಅಪಹರಿಸುವ ಸಂಸ್ಕøತಿ ನಮ್ಮದಲ್ಲ. ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿರುವ ಆರು ಜನರನ್ನು ಪಕ್ಷಕ್ಕೆ ಕರೆತಂದು ನಮ್ಮ ಅಧಿಕಾರ ಸ್ಥಾಪಿಸುತ್ತೇವೆ ಎಂದು ಹೇಳಿದರು.

      ಕಳೆದ ಬಾರಿ ಜನತೆ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸಂಪೂರ್ಣ ಬಹುಮತ ನೀಡಿದ್ದರು. 39 ಜನ ಸದಸ್ಯರು, ಇಬ್ಬರು ಶಾಸಕರು ಹಾಗೂ ಮಂತ್ರಿ ಸಹ ಕಾಂಗ್ರೆಸ್‍ನವರೇ ಆಗಿದ್ದರೂ ಸಹ ಸ್ಮಾರ್ಟ್‍ಸಿಟಿ ಯೋಜನೆಯಡಿ ಬಿಡುಗಡೆಯಾಗಿರುವ 900 ಕೋಟಿ ಅನುದಾನದಲ್ಲಿ 100 ಕೋಟಿ ರೂ.ಗಳಲ್ಲಿ ಸಹ ಅಭಿವೃದ್ಧಿ ಕಾಮಗಾರಿ ಮಾಡಲಾಗಿಲ್ಲ ಎಂದರು.

      ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅಭಿವೃದ್ಧಿಯ ಹರಿಕಾರ ಎಂಬುದಾಗಿ ಕರೆಯುತ್ತಾರೆ. ಆದರೆ, ಸ್ಮಾರ್ಟ್‍ಸಿಟಿ ಯೋಜನೆಯಡಿ ಚೌಕಿಪೇಟೆಯಲ್ಲಿ ನಡೆಸಿರುವ ರಸ್ತೆ ಕಾಮಗಾರಿ ನೋಡಿದರೆ ಸಾಕು ಅವರು ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆಂಬುದು ಗೊತ್ತಾಗಲಿದೆ. ಹೀಗಾಗಿ ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ನಡೆಸಬೇಕೆಂಬ ಅಪೇಕ್ಷೆ ಸಾರ್ವಜನಿಕರದ್ದಾಗಿದೆ ಎಂದು ಹೇಳಿದರು.

     ಜಿಲ್ಲೆಯಲ್ಲಿ ನಮ್ಮವರೇ ಸಂಸದರು, 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಜನ ಶಾಸಕರು ನಮ್ಮವರೇ ಇದ್ದಾರೆ. ಆದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ನಗರ ಅಭಿವೃದ್ಧಿ ಗೊಳಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ನಾವೇ ಅಧಿಕಾರ ನಡೆಸುತ್ತೇವೆ ಎಂದರು.

     ಪಕ್ಷಕ್ಕಾಗಿ ದುಡಿದವರು ತಮಗೆ ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿಯಿಂದ ಬಂಡಾಯ ಎದ್ದು ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದರಿಂದ ನಮ್ಮ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಬಂಡಾಯಗಾರರನ್ನು ಪಕ್ಷದಿಂದ ಉಚ್ಛಾಟಿಸಿದ್ದೆವು. ಆದರೆ, ಈಗ ನಮ್ಮ ತಪ್ಪಿನ ಅರಿವಾಗಿದ್ದು, ಆ ಎಲ್ಲರನ್ನೂ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಬೇಕೆಂಬುದಾಗಿ ಪಕ್ಷದ ರಾಜ್ಯಾಧ್ಯಕ್ಷರು ಸೂಚಿಸಿದ ಹಿನ್ನೆಲೆಯಲ್ಲಿ ನಮ್ಮ ಸಂಸದರು, ಶಾಸಕರೊಂದಿಗೆ ಚರ್ಚಿಸಿ ಅವರನ್ನು ಮತ್ತೆ ಪಕ್ಷಕ್ಕೆ ಬರ ಮಾಡಿಕೊಂಡು ಪಕ್ಷ ಸಂಘಟಿಸುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

     ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರುಗಳಾದ ಎಸ್.ಟಿ.ವೀರೇಶ್, ಪ್ರಸನ್ನಕುಮಾರ್.ಕೆ, ಮಂಜುನಾಥ, ಪಕ್ಷದ ದಕ್ಷಿಣ ವಲಯ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉತ್ತರವಲಯ ಅಧ್ಯಕ್ಷ ಸಂಗನಗೌಡ, ಜಿಲ್ಲಾ ಖಜಾಂಚಿ ಕೆ.ಹೇಮಂತಕುಮಾರ್, ಮುಖಂಡರಾದ ದೇವೇಂದ್ರಪ್ಪ, ಮುಕುಂದಪ್ಪ, ಶಿವರಾಜ್ ಪಾಟೀಲ್, ಕೆ.ಎನ್.ಹನುಮಂತಪ್ಪ, ಉಮೇಶ್ ಪಾಟೀಲ್, ಎಂ.ಮನು, ಗುರು, ಕಿರೀಟ್ ಕಲಾಲ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap