ಬೆಂಗಳೂರು
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಬಿಜೆಪಿಯವರು ಡೇ ಅಂಡ್ ನೈಟ್ ಕೆಲಸ ಮಾಡಿದರೂ ಸರ್ಕಾರ ಉರುಳುವುದಿಲ್ಲ.ಐದು ವರ್ಷ ಇದು ಅಧಿಕಾರದಲ್ಲಿರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು,ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಮೂವತ್ತು ಕೋಟಿ ರೂಗಳ ಆಮಿಷವೊಡ್ಡಿದೆ ಎಂಬ ಸಿದ್ಧರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿ,ಬಿಜೆಪಿಯವರು ಏನು ಮಾಡಿದರೂ ಸರ್ಕಾರ ಬೀಳಿಸಲು ಅಗುವುದಿಲ್ಲ ಎಂದರು.
ಅವರು ಮೂವತ್ತು ಕೋಟಿ ಕೊಡುವುದಲ್ಲ,ಡೇ ಅಂಡ್ ನೈಟ್ ಕೆಲಸಮಾಡಲಿ.ಆದರೂ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ.ಬೇಕಿದ್ದರೆ ಇದನ್ನೇ ಭವಿಷ್ಯ ಎಂದು ತಿಳಿದುಕೊಳ್ಳಿ ಎಂದು ಹೇಳಿದರು.
ಮೈತ್ರಿಧರ್ಮವನ್ನು ಪಾಲಿಸದಿದ್ದರೆ ಸರ್ಕಾರ ಉಳಿಯುವುದು ಕಷ್ಟ ಎಂಬ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಉತ್ತರಿಸಲು ನಿರಾಕರಿಸಿದ ಅವರು,ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೀಡಿರುವ ಹೇಳಿಕೆಗೆ ನಾನು ಉತ್ತರಿಸುವುದು ಸರಿಯಲ್ಲ.ಏನೇನಾಗುತ್ತದೆ ಎಂಬ ಕುರಿತು ಅಅವರೇ ಹೇಳುತ್ತಾರೆ ಎಂದು ನುಡಿದರು.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಬಗ್ಗೆ ತಾವಾಡಿದ ನುಡಿಗಳ ಕುರಿತು ಸ್ಪಷ್ಟೀಕರಣ ನೀಡಿದ ರೇವಣ್ಣ ಅವರು,ನಾನು ಪರಮೇಶ್ವರ್ ಅವರನ್ನು ಗೃಹ ಖಾತೆಯಿಂದ ತೆಗೆಯಬಾರದಿತ್ತು ಎಂದು ಹೇಳಿದ್ದು ನಿಜ.ಒಬ್ಬ ಪರಿಶಿಷ್ಟ ಸಮಾಜದ ನಾಯಕರಾಗಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು ಎಂದು ಹೇಳಿದೆನಷ್ಟೇ.
ಆದರೆ ಖಾತೆ ಅವರ ಪಕ್ಷಕ್ಕೆ ಸೇರಿದ್ದು.ಅವರು ಯಾರಿಗೆ ಹಂಚಿಕೆ ಮಾಡಬೇಕೋ?ಮಾಡಿದ್ದಾರೆ.ನಾನು ನನ್ನ ವೈಯಕ್ತಿಕ ಅಭಿಪ್ರಾಯ ಹೇಳಿದರೆ ಸಚಿವ ತಿಮ್ಮಾಪೂರ್,ಜೆಡಿಎಸ್ ಪಕ್ಷದ ವತಿಯಿಂದ ಎಷ್ಟು ಮಂದಿ ದಲಿತರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ?ಎಂದು ಕೇಳುತ್ತಾರೆ.
ಈ ರಾಜ್ಯದಲ್ಲಿ ಮಹಿಳೆಯರಿಗೆ ಮೂವತ್ಮೂರು ಪರ್ಸೆಂಟ್ ಮೀಸಲಾತಿ ನೀಡಿದ್ದು ದೇವೇಗೌಡರು.ಅಲ್ಪಸಂಖ್ಯಾತರಿಗೆ ಶೇಕಡಾ ಐದರಷ್ಟು ಮೀಸಲಾತಿಯನ್ನು ದೇಶದಲ್ಲೇ ಮೊದಲ ಬಾರಿ ಒದಗಿಸಿದವರು ದೇವೇಗೌಡರು.ಕೆಪಿಎಸ್‍ಸಿಗೆ ಗೋನಾಳ್ ಭೀಮಪ್ಪ ಎಂಬ ಪರಿಶಿಷ್ಟ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದವರು ದೇವೇಗೌಡರು.
ಇದನ್ನೆಲ್ಲ ಅವರು ಮಾಡುವಾಗ ತಿಮ್ಮಾಪೂರ್ ಅವರು ಎಲ್ಲಿದ್ದರು?ಅವರು ಇತಿಹಾಸ ಗೊತ್ತಿಲ್ಲದೆ ಏನೇನೋ ಮಾತನಾಡಬಾರದು.ಸಮ್ಮಿಶ್ರ ಸರ್ಕಾರ ಎಂದಾಗ ನಾವು ಪ್ರಾತಿನಿಧ್ಯ ನೀಡಿದರೂ ಕಾಂಗ್ರೆಸ್ ಪ್ರಾತಿನಿಧ್ಯ ನೀಡಿದಂತೆ,ಕಾಂಗ್ರೆಸ್‍ನವರು ಪ್ರಾತಿನಿಧ್ಯ ನೀಡಿದರೆ ಅದು ಜೆಡಿಎಸ್ಸೂ ಪ್ರಾತಿನಿಧ್ಯ ನೀಡಿದಂತೆ ಎಂದು ವಿವರಿಸಿದರು.
ಇನ್ನು ದೇಶಪಾಂಡೆಯವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ.ಅವರು ಹಿರಿಯರು,ನನ್ನ ತಂದೆಯ ಜತೆ ಕೆಲಸ ಮಾಡಿದವರು.ಯಾವ ಕಾರಣಕ್ಕಾಗಿ ಆ ರೀತಿ ಹೇಳಿಕೆ ನೀಡಿದ್ದಾರೋ?ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ಎಲ್‍ಕೆಜಿಯಿಂದ ಹಿಡಿದು ಎಲ್ಲ ಹಂತಗಳಲ್ಲೂ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಬೇಕು.ಬರೀ ರೇವಣ್ಣ ಅವರ ಮಗನೋ?ಶ್ರೀಮಂತರ ಮಕ್ಕಳೋ?ಓದಿದರೆ ಸಾಲದು ಎಂದು ಅವರು ನುಡಿದರು.
ಇವತ್ತು ರಾಜ್ಯದ ಪ್ರತಿ ತಾಲ್ಲೂಕುಗಳಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿವೆ.ಕೂಲಿ ನಾಲಿ ಮಾಡುವವರೂ ಸಾಲ,ಸೋಲ ಮಾಡಿ ಮಕ್ಕಳನ್ನು ಆ ಶಾಲೆಗೆ ಹಾಕುತ್ತಿದ್ದಾರೆ.ಆಂಗ್ಲ ಮಾಧ್ಯಮ ಶಾಲೆಗಳನ್ನು ಬೇಡ ಎನ್ನುವುದಾದರೆ ಈ ಖಾಸಗಿ ಶಾಲೆಗಳ ಪರವಾನಗಿಯನ್ನೂ ರದ್ದು ಪಡಿಸಲಿ.
ಆಗ ಎಲ್ಲರೂ ಕನ್ನಡದಲ್ಲೇ ವ್ಯಾಸಂಗ ಮಾಡುವಂತಾಗುತ್ತದೆ.ಅದನ್ನು ಹೊರತುಪಡಿಸಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವುದು ಬೇಡ ಎನ್ನುವುದು ಸರಿಯಲ್ಲ.ಬಡವರ ಮಕ್ಕಳೂ ಓದಿ ಜೀವನೋಪಾಯ ಕಂಡುಕೊಳ್ಳಲಿ ಎಂದು ಅವರು ಹೇಳಿದರು.
ಈಗ ಕಾಲ ಬದಲಾಗಿದೆ.ನಮ್ಮ ಭಾಷೆಯ ಮೇಲೆ ಪ್ರೀತಿ ಇರಲಿ,ಆದರೆ ಇಂಗ್ಲೀಷ್ ಭಾಷೆಯಲ್ಲಿ ಎಲ್ಲರೂ ಕಲಿಯುವಂತಾಗಲಿ .ಹೀಗಾಗಿ ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಜತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ