ರಾಜ್ಯದಲ್ಲಿ ಬಿಜೆಪಿಗೆ ಮುಖಭಂಗ ಖಚಿತ : ವಿ ಎಸ್ ಉಗ್ರಪ್ಪ

ಬೆಂಗಳೂರು:

    ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದಂತೆ ಕರ್ನಾಟಕದಲ್ಲಿಯೂ ತೀವ್ರ ಮುಖಭಂಗ ಅನುಭವಿಸಲಿದ್ದು, ಡಿ‌. 9 ರ‌‌ ಬಳಿಕ ರಾಜ್ಯದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಭವಿಷ್ಯ ನುಡಿದಿದ್ದಾರೆ.

    ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದ್ದು ಅನರ್ಹರು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಲೆ ಎದ್ದಿದೆ. ಹದಿನೈದು ಕ್ಷೇತ್ರಗಳಲ್ಲಿ ಗೆದ್ದೇ ಬಿಟ್ಟಿದ್ದೇವೆ ಎಂದು ಯಡಿಯೂರಪ್ಪ ತಿರುಕನ ಕನಸು ಕಾಣುತ್ತಿದ್ದಾರೆ.ಅನರ್ಹರ ತ್ಯಾಗದಿಂದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಅನರ್ಹರ ಹಿತಕಾಪಾಡಿ ಅವರನ್ನು ಸಚಿವರನ್ನಾಗಿಸುತ್ತೇವೆ ಎಂದು ಅವರು ನೀತಿ ಸಂಹಿತೆ ಉಲ್ಲಂಘಿಸಿ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ಚುನಾವಣಾ ಆಯೋಗ ಮೌನ ವಹಿಸಿದ್ದು ಏಕೆ ? ಎಂದು ಉಗ್ರಪ್ಪ ಪುನರ್ ಪ್ರಶ್ನಿಸಿದರು.

    ಮತದಾರರನ್ನು ಓಲೈಸಲು ಹೇಳಿಕೆಗಳ ಮೇಲೆ‌ ಹೇಳಿಕೆ ನೀಡುತ್ತಿದ್ದಾರೆ.ಆದರೂ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯಡಿಯೂರಪ್ಪ ಅವರಿಗೆ ರಾಜ್ಯದ ಅಭಿವೃದ್ಧಿಗಿಂತ ಅನರ್ಹರ ಕ್ಷೇತ್ರಗಳ ಅಭಿವೃದ್ಧಿಯಷ್ಟೇ ಮುಖ್ಯವಾಗಿದೆ. ಇಂತಹ ಹೇಳಿಕೆಗಳನ್ನು ನೋಡಿದರೆ ಗೋಡೆಬರಹದಷ್ಟೆ ಬಿಜೆಪಿಯ ಸೋಲು ಸ್ಪಷ್ಟವಾಗಿದೆ. ಹೀಗಾಗಿ ಸೋಲಿನ ಭಯದಿಂದ ಯಡಿಯೂರಪ್ಪ ಮತದಾರರ ಓಲೈಕೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

    ಬಹುಮತವಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ‌ ರಚನೆ ಮಾಡಿತ್ತು. ಸರ್ಕಾರದ ದುಡ್ಡು ಯಾರಪ್ಪನ ಮನೆ ಆಸ್ತಿ ಅಲ್ಲ, ಅದು ಸಾರ್ವಜನಿಕರ ಆಸ್ತಿ. ಜನರ ತೆರಿಗೆ ಹಣವನ್ನು ರಾಜ್ಯದ ಅಭಿವೃದ್ಧಿಗಾಗಿ ಮಾತ್ರ ವ್ಯಯಿಸಬೇಕು. ಕರ್ನಾಟಕದಲ್ಲಿ ಬಹುಮತವಿಲ್ಲದ ಬಿಜೆಪಿ ವಾಮಮಾರ್ಗದ ಮೂಲಕ ಹಣಕ್ಕಾಗಿ ಸರ್ಕಾರದ ರಚಿಸಿದೆ.

     ಬಿಜೆಪಿ ಎಲ್ಲಿಯೂ ಅಭಿವೃದ್ಧಿ ಕಾರಣಕ್ಕಾಗಿ ಸರ್ಕಾರ ರಚಿಸಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದು ಹೇಗೆ ಮತ್ತು ಏಕೆ? ಬಿಜೆಪಿಮುಕ್ತ ರಾಷ್ಟ್ರವನ್ನು ದೇಶದ ಜನರೇ ಮಾಡಲು ಹೊರಟಿದ್ದಾರೆ.ಗೋವಾ ಮತ್ತು ಹರಿಯಾಣ, ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಮಾತ್ರ ಬಿಜೆಪಿ ಅಧಿಕಾರ‌ ಹಿಡಿದಿದೆ. ಭ್ರಷ್ಟಾಚಾರ ವಾಮಮಾರ್ಗ ಇಲ್ಲದೇ ಇದ್ದಿದ್ದರೆ ಕರ್ನಾಟಕದಲ್ಲಿಯೂ ಬಿಜೆಪಿಮುಕ್ತ ರಾಜ್ಯವಾಗುತ್ತಿತ್ತು. ಪ್ರಣಾಳಿಕೆಯಲ್ಲಿ ನೀಡಿದ ಯಾವುದೇ ಭರವಸೆ ಬಿಜೆಪಿ ಈಡೇರಿಸಿಲ್ಲ.

    ಜನರ ಖಾತೆಗೆ ಹಣ ಹಾಕಲಿಲ್ಲ,‌ ಉದ್ಯೋಗ ಸೃಷ್ಟಿಯಾಗಿಲ್ಲ,‌ ಬೆಲೆ‌ ನಿಯಂತ್ರಣವಾಗಿಲ್ಲ,‌ ಉಗ್ರರನ್ನು ಹತ್ತಿಕ್ಕಿಲ್ಲ, ಕಪ್ಪುಹಣ ವಾಪಸು ಬಂದಿಲ್ಲ. ಈರುಳ್ಳಿ ಕೆ.ಜಿ.ಒಂದಕ್ಕೆ ನೂರೈವತ್ತು ರೂ.ಆಗಿರುವುದು, ಬೆಲೆ‌ಏರಿಕೆ ಅಚ್ಛೇ ದಿನವೇ ಎಂದು ಉಗ್ರಪ್ಪ ಬಿಜೆಪಿಗರನ್ನು ಕುಟುಕಿದರು.

    ಎಲ್ಲಾ ಧರ್ಮ ಜಾತಿಯ ಅಭಿವೃದ್ಧಿಯೇ ದೇಶದ ನಿಜವಾದ ಅಭಿವೃದ್ಧಿ‌. ಆದರೆ ಬಿಜೆಪಿಗೆ ಬೇಕಾಗಿರುವುದು ಕೆಲವರ ಅಭಿವೃದ್ಧಿಯಷ್ಟೆ. ಸ್ವಾರ್ಥ ರಾಜಕಾರಣ ವಾಮಮಾರ್ಗದ ಮೂಲಕ ಬಿಜೆಪಿಮುಕ್ತ ರಾಷ್ಟ್ರ ನಿರ್ಮಾಣವನ್ನು ಆ ಪಕ್ಷದ ನಾಯಕರು ತಡೆಯುತ್ತಿದ್ದಾರಷ್ಟೆ ಎಂದರು.

     ರಾಜ್ಯದಲ್ಲಿ ಆಗುತ್ತಿರುವುದು ಬಿಜೆಪಿಯ ವೈಯಕ್ತಿಕ ಅಭಿವೃದ್ಧಿಯೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ಅನರ್ಹರನ್ನು ಶಾಶ್ವತವಾಗಿ ಅನರ್ಹರನ್ನಾಗಿ ಮಾಡುವ ಗಾಳಿ ರಾಜ್ಯದಲ್ಲಿ ಎದ್ದಿದ್ದು ಉಪಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲುವುದು ಖಚಿತ.ನೆರೆ ಪರಿಹಾರ ಕೊಟ್ಟಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಬಿಜೆಪಿ ಇರುವುದು ರಾಜ್ಯದ ಅಭಿವೃದ್ಧಿಗಲ್ಲ ಎಂಬುದು ಜನರಿಗೆ ಸ್ಪಷ್ಟವಾಗಿದೆ ಎಂದರು.

     ಜೆಡಿಎಸ್ ಜೊತೆ ಚುನಾವಣಾ ಮೈತ್ರಿ ಇಲ್ಲ. ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವತಂತ್ರವಾಗಿ ಸೆಣಸಾಡುತ್ತಿದೆ. ಪಕ್ಷದಲ್ಲಿ ಯಾವುದೇ‌ ಭಿನ್ನಾಭಿಪ್ರಾಯವಿಲ್ಲ. ತಮ್ಮನ್ನೂ ಸೇರಿದಂತೆ‌ ಎಲ್ಲಾ ಹಿರಿಯ ಕಿರಿಯ ನಾಯಕರು ತಮಗೆ ಸೂಚಿಸಿದ ಕ್ಷೇತ್ರಗಳಲ್ಲಿ ಪ್ರಚಾರ‌ದಲ್ಲಿ ತೊಡಗಿದ್ದಾರೆ.ಕಾಂಗ್ರೆಸ್‌ನ ಎಐಸಿಸಿ ನಾಯಕರು ಪ್ರಚಾರದಲ್ಲಿ ಭಾಗವಹಿಸಿಲ್ಲ ಎಂದು ಆರೋಪಿಸುವ ರಾಜ್ಯ ಬಿಜೆಪಿ ನಾಯಕರ ಜೊತೆ ಅಮಿತ್ ಷಾ‌, ನರೇಂದ್ರ ಮೋದಿ‌ ಏಕೆ ಪ್ರಚಾರದಲ್ಲಿ ಭಾಗವಹಿಸಲಿಲ್ಲ ಎಂದು ಎಂದು ಉಗ್ರಪ್ಪ ತಿರುಗೇಟು ನೀಡಿದರು.

     ಉಪಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಇತರೆ ಜಾತ್ಯತೀತ ಪಕ್ಷಗಳ ಜೊತೆ ಸೇರಬೇಕೇ ಎಂಬ ಬಗ್ಗೆ ರಾಷ್ಟ್ರೀಯ ನಾಯಕರು ಚರ್ಚೆ ನಡೆಸಲಿದ್ದಾರೆ ಎಂದರು.ಆದಾಯ ತೆರಿಗೆ ಇಲಾಖೆ ಒಂದೂ ದಿವಸವೂ ಪುರುಸೊತ್ತು ಇಲ್ಲದಂತೆ ಪಕ್ಷದ ಮುಖಂಡ ಡಿ.ಕೆ.ಶಿವಕುಮಾರ್‌ಗೆ ಮೇಲಿಂದ ಮೇಲೆ ಇಂದೇ ವಿಚಾರಣೆಗೆ ಹಾಜರಾಗಬೇಕೆಂದು ಒತ್ತಡ ಹೇರಿ ನೊಟೀಸ್ ನೀಡುತ್ತಿದೆ.

    ಶಿವಕುಮಾರ್ ಚುನಾವಣಾ ಪ್ರಚಾರದಲ್ಲಿ ತೊಡಗದಂತೆ ಮಾಡಲು ಸರ್ಕಾರಿ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೋಲಿನ ಹತಾಶೆಯಿಂದ ಮತ್ತೆ ಬಿಜೆಪಿ ಇಂತಹ ಕೃತ್ಯಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಮೇಲ್ಮನೆ ಸದಸ್ಯ ಪ್ರಕಾಶ್‌ ರಾಥೋಡ್‌ ಮಾತನಾಡಿ, ಹೊಸಪೇಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತದಾರರಿಗೆ ಹಣ ಹಂಚುತ್ತಿರುವ ದೃಶ್ಯವನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಿದರು. ಇನ್ನೂ ಮೂರು ದಿನಗಳವರೆಗೆ ಹೀಗೆಯೇ ಹಣದ ಹೊಳೆ ಹರಿಸಲಿದ್ದು, ಅದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಮೋಹನ್‌ ಕೊಂಡಜ್ಜಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link