ತುಮಕೂರು
ದಲಿತ ಸಂಘರ್ಷ ಸಮಿತಿಯ ಬಿ.ಕೃಷ್ಣಪ್ಪ ಬಣದಿಂದ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಸಂಚಾಲಕರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದು, ಜೆಡಿಎಸ್‍ನ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ತಿಳಿಸಿದರು.
ನಗರದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಪ್ರಚಾರ ಸಮಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ವಿರೋಧಿಯಾದ ಆರ್‍ಎಸ್‍ಎಸ್‍ನ ನೇತೃತ್ವದ ಬಿಜೆಪಿ ಸರ್ಕಾರದಿಂದ ದಲಿತರ ಹಾಗೂ ಹಿಂದುಳಿದ ವರ್ಗದವರು ಹೀನಾಯ ಸ್ಥಿತಿಗೆ ತಲುಪಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷವನ್ನು ಬದಿಗಿಟ್ಟು ಜಾತ್ಯಾತೀತದ ಅಭ್ಯರ್ಥಿಯಾದ ದೇವೇಗೌಡರಿಗೆ ಮತ ನೀಡಲು ತೀರ್ಮಾನಿಸಿದ್ದು, ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ದೇಶದಲ್ಲಿ ಅಸಹಿಷ್ಣುತೆ, ಕೋಮುವಾದ ಹೆಚ್ಚಾಗಿದ್ದು, ದಲಿತರ ಹಕ್ಕುಗಳನ್ನು ಕಸಿದುಕೊಳ್ಳುವ ಹಿಂದುತ್ವವವಾದಿಗಳು ಹೆಚ್ಚಾಗಿದ್ದಾರೆ. ನಮ್ಮ ನಡುವೆ ಗೋಡೆಯನ್ನು ನಿರ್ಮಿಸಿ, ಉಸಿರುಗಟ್ಟು ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಸೆರೆಮನೆ ವಾಸ ಅನುಭವಿಸಿದ್ದೆವು. ಆದರೆ ಇದೀಗ ಅಘೋಷಿತ ತುರ್ತು ಪರಿಸ್ಥಿತಿ ತಂದೊಡ್ಡಿದ್ದಾರೆ. ಈ ಸ್ಥಿತಿಯಲ್ಲಿ ಮನುಷ್ಯರ ನಡುವೆ ಕೋಮುವಾದ ಹೆಚ್ಚಾಗಿದೆ ಎಂದರು.
ಈಗಾಗಲೆ ಕಳೆದ ಬಾರಿ ಜಯಶೀಲರಾಗಿರುವ ಬಿಜೆಪಿ ಸಂಸದರಾದ ಅನಂತಕುಮಾರ್‍ಹೆಗಡೆ, ಪ್ರತಾಪ್‍ಸಿಂಹ ಹಾಗೂ ಗೋ.ಮಧುಸೂಧನ್ ಅವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಹೇಳುತ್ತಾರೆ. ಅದಕ್ಕೆ ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಇನ್ನೊಂದು ಕಡೆ ಅನಂತಕುಮಾರ್ ಹೆಗಡೆ ಅವರು ದಲಿತ ಸಂಘಟನೆಗಳನ್ನು ಪ್ರಾಣಿಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ದಲಿತ ವಿರೋಧಿ ಶಕ್ತಿಯ ಬಿಜೆಪಿ ಪಕ್ಷವನ್ನು ಸೋಲಿಸದೇ ಹೋದರೆ ಈ ರಾಷ್ಟ್ರಕ್ಕೆ ದೊಡ್ಡ ಗಂಡಾಂತರ ಕಾದಿದೆ. ಈ ನಿಟ್ಟಿನಲ್ಲಿ ಬಿಜೆಪಿಯನ್ನು ಸೋಲಿಸುವುದೇ ಪ್ರಮುಖ ಉದ್ದೇಶವಾಗಿದ್ದು, ಎಲ್ಲರೂ ಇದನ್ನು ತಿಳಿದು ಬಿಜೆಪಿಗೆ ಮತ ನೀಡದಂತೆ ಜೆಡಿಎಸ್‍ಗೆ ಮತ ಜಾತ್ಯಾತೀತ ಶಕ್ತಿಗೆ ಮತ ನೀಡಿ ಎಂದು ಮನವಿ ಮಾಡಿದರಲ್ಲದೆ, ರೈತ, ಬಡವರ ಪರವಾದ ಸಮರ್ಥ ನಾಯಕ ದೇವೇಗೌಡರು ತುಮಕೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಮಾಜಿ ಪ್ರಧಾನಿಗೆ ಮತ ನೀಡುವ ಸೌಭಾಗ್ಯ ನಮಗೆ ದೊರಕಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್‍ಎಸ್ ಸಂಘಟನಾ ಸಂಚಾಲಕರಾದ ಶಿವಶಂಕರ್, ತಿಪಟೂರು ತಾಲ್ಲೂಕು ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ, ತುರುವೇಕೆರೆ ತಾಲ್ಲೂಕು ಸಂಚಾಲಕ ಡಾ.ಚಂದ್ರು, ತುರುವೇಕೆರೆ ಸಂಘಟನಾ ಸಂಚಾಲಕ ಕುಮಾರ್ ಉಪಸ್ಥಿತರಿದ್ದರು.