ದಾವಣಗೆರೆ
2014ರ ಲೋಕಸಭೆಯ ಬಿಜೆಪಿ ಪ್ರಣಾಳಿಕೆಯಲ್ಲಿರುವ ಬಹುತೇಕ ಅಂಶಗಳನ್ನೇ 2019ರ ಬಿಜೆಪಿ ಪ್ರಣಾಳಿಕೆಯಲ್ಲೂ ಅಳವಡಿಸಲಾಗಿದ್ದು, ಬಿಜೆಪಿ ಸಂಕಲ್ಪ ಎಂಬ ಹೆಸರಿನಲ್ಲಿ 75 ಭರವಸೆಗಳನ್ನು ನೀಡಿರುವ ಬಿಜೆಪಿ ಪ್ರಣಾಳಿಕೆಯು ಲೋಕಸಭಾ ಚುನಾವಣೆಯ ಬಿತ್ತಿ ಪತ್ರದಂತೆ ಕಾಣುತ್ತಿದ್ದು, ಇದೊಂದು ಸುಳ್ಳಿನ ಕಂತೆ ಯಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಟೀಕಿಸಿದ್ದಾರೆ.
ಬಿಜೆಪಿ ಪಕ್ಷ ಜನ್ಮತಾಳಿ 39 ವರ್ಷಗಳು ಉರುಳಿವೆ. ಅಂದಿನಿಂದ ಇಂದಿನವರೆಗೂ ಬಿಜೆಪಿಯ ಎಲ್ಲಾ ಪ್ರಣಾಳಿಕೆಗಳಲ್ಲೂ ರಾಮ ಮಂದಿರ ನಿರ್ಮಾಣ, ಏಕರೂಪ ನಾಗರೀಕ ಕಾಯ್ದೆ, 370ನೇ ವಿಧಿ ಅನ್ವಯ, ಜಮ್ಮು ಕಾಶ್ಮೀರಕ್ಕೆ ನೀಡಿರುವ ಸ್ಥಾನಮಾನ ರದ್ದು, ಸಂವಿಧಾನದ 35ಎ ವಿಧಿಯನ್ನು ರದ್ದುಗೊಳಿಸುವ ಬಗ್ಗೆ ಹೇಳುತ್ತಲೇ ಬಂದಿದೆ. ಆದರೆ, ಇದರಲ್ಲಿ ಯಾವೊಂದು ಭರವಸೆಯೂ ಈಡೇರಿಲ್ಲ. ಇದೊಂದು ಮತಗಳಿಕೆಯ ಕುತಂತ್ರವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.
ದೇಶದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕನಿಷ್ಟ ಪಕ್ಷ ಸೌಜನ್ಯಕ್ಕೂ ಅವರ ಬಗ್ಗೆ ಅನುಕಂಪ ತೋರದ, ಲಕ್ಷಾಂತರ ರೈತರು ಅರೆಬೆತ್ತಲೆಯಾಗಿ ದೆಹಲಿ ಚಲೋ ಮಾಡಿ ದೆಹಲಿ ತಲುಪಿದರೂ ಅವರನ್ನು ಕ್ಯಾರೆ ಎನ್ನದ ಪ್ರಧಾನಿ ಮೋದಿಯವರು ಇದೀಗ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರೈತರಿಗಾಗಿ ಮತ್ತೊಮ್ಮೆ ಸುಳ್ಳು ಭರವಸೆಗಳನ್ನು ಘೋಷಿಸುವ ಮೂಲಕ ದೇಶದ ಜನರನ್ನು ಮತ್ತೊಮ್ಮೆ ಮೂರ್ಖರನ್ನಾಗಿಸಲು ಹೊರಟಿದ್ದಾರೆಂದು ಅವರು ಆರೋಪಿಸಿದ್ದಾರೆ.
2014ರಲ್ಲಿ ನೀಡಿದ್ದ ಯಾವುದೇ ಯಾವುದೇ ಭರವಸೆ ಈಡೇರಿಸದ ಮೋದಿ ದೇಶದ ಜನರಿಗೆ ಪುನ: ಬಣ್ಣ ಬಣ್ಣದ ಭರವಸೆಗಳನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಮೂರು ಲಕ್ಷದವರೆಗೆ ಸಾಲ ನೀಡುತ್ತಿದೆ. 3 ಲಕ್ಷದಿಂದ 10 ಲಕ್ಷದ ವರೆಗೆ ಶೇ. 4ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಈ ವಿಚಾರ ಮೋದಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿರುವ ಅವರು, ಮೋದಿ ತಮ್ಮ ಪ್ರಣಾಳಿಕೆಯಲ್ಲಿ ರೈತರಿಗೆ ರು. 1 ಲಕ್ಷ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡುತ್ತೇವೆಂದು ಹೇಳಿರುವುದು ಹಾಸ್ಯಾಸ್ಪದ. ಬಿಜೆಪಿ ಪ್ರಣಾಳಿಕೆಯಲ್ಲಿ ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು, ಕಾರ್ಮಿಕರು, ಯುವಜನರ ಬಗ್ಗೆ ಯಾವುದೇ ಕಾರ್ಯಕ್ರಮಗಳನ್ನು ಘೋಷಿಸದೇ ಕೇವಲ ಮತ ಗಳಿಕೆಗಾಗಿ ಸುಳ್ಳು ಭರವಸೆಗಳನ್ನು ನೀಡಿದ್ದಾರೆಂದು ಆಪಾದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ