ಹಿರಿಯೂರು :
ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠದಾನವಾಗಿದ್ದು, 60 ವರ್ಷಗಳ ಒಳಗಿನ ಆರೋಗ್ಯವಂತ ಸ್ತ್ರೀ-ಪುರುಷರು ತಪ್ಪದೆ ರಕ್ತದಾನ ಮಾಡಬಹುದು. ರಕ್ತದಾನ ಮತ್ತೊಬ್ಬರ ಜೀವ ರಕ್ಷಣೆಗೆ ಸಹಾಯಕಾರಿಗಬಲ್ಲದು ಅಲ್ಲದೆ ಆರೋಗ್ಯವಂತರು ರಕ್ತದಾನ ಮಾಡಿದರೆ ದೇಹಕ್ಕೆ ಒಳ್ಳೆಯದು ಮತ್ತು ದೇಹಕ್ಕೆ ಯಾವುದೆ ಅಡ್ಡ ಪರಿಣಾಮ ಆಗುವುದಿಲ್ಲಾ, ಆದ್ದರಿಂದ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂಬುದಾಗಿ ಹೆಚ್.ಡಿ.ಎಫ್.ಸಿ. ಬ್ಯಾಂಕ್, ವ್ಯವಸ್ಥಾಪಕರಾದ ಅನಿಲ್‍ರವರು ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ರೋಟರಿಕ್ಲಬ್, ಹೆಚ್.ಡಿ.ಎಫ್.ಸಿ. ಬ್ಯಾಂಕ್, ರೆಡ್‍ಕ್ರಾಸ್ ಸಂಸ್ಥೆ, ಇನ್ನರ್‍ವೀಲ್, ಹಾಗೂ ಬಸವರಾಜ ಎಜುಕೇಷನಲ್ ಟ್ರಸ್ಟ್, ಮತ್ತು ಜಿಲ್ಲಾ ರಕ್ತ ನಿಧಿ ಕೇಂದ್ರ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗು ಉಚಿತ ನೇತ್ರಾ ಪರೀಕ್ಷಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರರವರು ಮಾತನಾಡಿ, ಒಬ್ಬ ವ್ಯಕ್ತಿಯ ರಕ್ತ ಮತ್ತೊಬ್ಬ ವ್ಯಕ್ತಿಯ ಜೀವವಾಗಿದೆ, ಹಾಗಾಗಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ರಕ್ತದಾನದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಸಂಘಸಂಸ್ಥೆಗಳು ಮಾಡಬೇಕು ಎಂಬುದಾಗಿ ಹೇಳಿದರು.
ರೆಡ್‍ಕ್ರಾಸ್ ಉಪಾಧ್ಯಕ್ಷರಾದ ಹೆಚ್.ಎಸ್.ಸುಂದರರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಶಿಬಿರದಲ್ಲಿ 20 ಜನ ತಮ್ಮ ರಕ್ತದಾನ ಮಾಡಿದರು ಮತ್ತು 70 ಜನರಿಗೆ ನೇತ್ರ ಪರೀಕ್ಷೆ ನಡೆಸಲಾಯಿತು. ಅದರಲ್ಲಿ 26 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಗೌವರ್ನರ್ ಬಿ.ಎಸ್.ನವಾಬ್‍ಸಾಬ್, ಡಾ|| ರೂಪ, ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್, ಎ.ರಾಘವೇಂದ್ರ, ಆರ್.ಶಿವಕುಮಾರ್ ಇನ್ನು ಮುಂತಾದವರು ಭಾಗವಹಿಸಿದ್ದರು. ಶ್ರೀಮತಿ ಸೌಭಾಗ್ಯವತಿ ದೇವರು ಸ್ವಾಗತಿಸಿದರು, ಜೋಗಪ್ಪ ಕರ್ಯಕ್ರಮ ನಿರೂಪಿಸಿದರು.