ಬೆಂಗಳೂರು
ವೇಗವಾಗಿ ಮೇಲ್ಸೇತುವೆ ಹತ್ತುತ್ತಿದ್ದ ಬಿಎಂಟಿಸಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗಿನ ರಸ್ತೆಗೆ ಪಲ್ಟಿ ಹೊಡೆದು 13 ಮಂದಿ ಗಾಯಗೊಂಡಿರುವ ದುರ್ಘಟನೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಗಾಯಗೊಂಡಿರುವ ಸುಶ್ಮಿತಾ (23), ಅಂಬಿಕಾ (30), ಚಿಕ್ಕೇಗೌಡ (45), ಕಮಲ (44), ಜೈಕುಮಾರ್ (45)ನನ್ನು ಕೆಸಿ ಜನರಲ್ ಆಸ್ಪತ್ರೆಗೆ ಬಸ್ ನಿರ್ವಾಹಕ ವಿಜಯಕುಮಾರ್ (52), ಮೋಹನ್ (72), ಆರೋಗ್ಯಸ್ವಾಮಿ (54), ದರ್ಶನ್ (19), ಹರಾನ್ ಮೌಜಿ (62), ಪ್ರಭಾಕರ್ (25) ಹಾಗೂ ಕೃಷ್ಣಮೂರ್ತಿ (50)ಯನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಉರುಳಿ ಬಿದ್ದ ರಭಸಕ್ಕೆ ಬಸ್ ಜಖಂಗೊಂಡಿದ್ದು, ಬಸ್‍ನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಲ್ಲಿ 13 ಮಂದಿ ಗಾಯಗೊಂಡರೆ, ಉಳಿದೆಲ್ಲರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.
ಕಾವಲ್‍ಬೈರಸಂದ್ರದಿಂದ ಮಾಗಡಿ ರಸ್ತೆಯ ಕೆಹೆಚ್‍ಬಿ ಕಾಲೋನಿ ಕಡೆ ಹೋಗುತ್ತಿದ್ದ 180 ಎ ಬಿಎಂಟಿಸಿ ಬಸ್ ಬೆಳಿಗ್ಗೆ 10.40ರ ವೇಳೆ ರಾಜಾಜಿನಗರ ಮೊದಲ ಬ್ಲಾಕ್‍ನ ಮೇಲ್ಸೇತುವೆ ರಸ್ತೆಯನ್ನು ಹತ್ತಲು ವೇಗವಾಗಿ ಹೋಗಿದೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗಿನ ರಸ್ತೆಗೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಕೆಳಗಿನ ರಸ್ತೆಯಲ್ಲಿ ಜನರಾಗಲಿ, ವಾಹನವಾಗಲಿ ಇಲ್ಲದಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಡಿಕ್ಕಿಯ ರಭಸಕ್ಕೆ ರಸ್ತೆ ವಿಭಜಕ ಚೂರುಚೂರಾಗಿದ್ದು, ಉರುಳಿ ಬಿದ್ದ ಬಸ್ ಕೂಡ ಜಖಂಗೊಂಡಿದೆ ಬಸ್‍ನಲ್ಲಿ 25ಕ್ಕೂ ಹೆಚ್ಚು ಮಂದಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದು, ಅವರಲ್ಲಿ 13 ಮಂದಿಯನ್ನು ಬಿಟ್ಟರೆ ಉಳಿದೆಲ್ಲರೂ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಪರಿಹಾರ ಕ್ರಮವನ್ನು ಕೈಗೊಳ್ಳಲಾಗಿದ್ದು, ಚಾಲಕನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸೌಮ್ಯಲತಾ ತಿಳಿಸಿದ್ದಾರೆ. ಮಲ್ಲೇಶ್ವರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ಆಸ್ಪತ್ರೆಗೆ ಧಾವಿಸಿದ ಶಾಸಕ ಗೋಪಾಲಯ್ಯ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








