ದೇಹ ದಾನವೂ ವಿದ್ಯಾದಾನದಷ್ಟೇ ಶ್ರೇಷ್ಠ

ದಾವಣಗೆರೆ :

      ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆ ಹಗೂ ಸಂಶೋಧನೆಗಾಗಿ ಮಾನವನ ದೇಹಗಳ ಅವಶ್ಯಕತೆ ಇದೆ. ಹೀಗಾಗಿ ದೇಹವನ್ನು ದಾನ ಮಾಡುವುದು ವಿದ್ಯಾದಾನದಷ್ಟೇ ಶ್ರೇಷ್ಠವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ಪ್ರತಿಪಾದಿಸಿದರು.

          ನಗರದ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ದೇಹದಾನ ಸಂಸ್ಥೆಯ 7ನೇ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ನದಾನವು ಕ್ಷಣಿಕ ತೃಪ್ತಿ ನೀಡಿದರೆ, ವಿದ್ಯಾದಾನವೂ ಜೀವನ ಪರ್ಯಂತ ಉಪಯೋಗಕ್ಕೆ ಬರಲಿದೆ. ವೈದ್ಯಕೀಯ ಶಿಕ್ಷಣ ಪಡೆಯಲು ದೇಹಗಳ ಅವಶ್ಯಕತೆ ಇದೆ. ಆದ್ದರಿಂದ ದೇಹದಾನ ಮಾಡುವುದು ಸಹ ವಿದ್ಯಾದಾನದಷ್ಟೇ ಶ್ರೇಷ್ಟವಾಗಿದೆ ಎಂದರು.

          ಶರೀರ ಅಂಗರಚನೆಯ ಪ್ರಾಯೋಗಿಕ ಜ್ಞಾನ ಪಡೆಯಲು ದೇಹಗಳು ಅತ್ಯವಶ್ಯವಾಗಿದೆ. ಆದ್ದರಿಂದ ವೈದ್ಯಕೀಯ ಕಲಿಕೆಯಲ್ಲಿ ದೇಹದಾನಿಗಳ ಪಾತ್ರ ಅತ್ಯಂತ ಮಹತ್ವದಿಂದ ಕೂಡಿದೆ. ಫಲಾಪೇಕ್ಷೆ ಇಲ್ಲದೇ ದೇಹದಾನ ಮಾಡುವುದರಿಂದ ಸಮಾಜಕ್ಕೆ ಉತ್ತಮ ವೈದ್ಯರನ್ನು ಕೊಟ್ಟಂತಾಗಲಿದೆ ಎಂದು ಹೇಳಿದರು.

         ಉತ್ತಮ ಆರೋಗ್ಯಕ್ಕಾಗಿ ಉತ್ತಮ ಪ್ರಕೃತಿ ಹಾಗೂ ನುರಿತ ವೈದ್ಯರು ಅವಶ್ಯಕತೆ ಇದೆ. ಸಮಾಜದಲ್ಲಿ ವೈದ್ಯರನ್ನು ಸಾರ್ವಜನಿರಕು ದೇವರೆಂದೇ ಭಾವಿಸುತ್ತಾರೆ. ಆದ್ದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಶ್ರದ್ಧೆಯಿಂದ ವೈದ್ಯಕೀಯ ಶಿಕ್ಷಣ ಪಡೆದು, ಉತ್ತಮ ವೈದ್ಯರಾಗಿ ಹೊರಹೊಮ್ಮುವ ಮೂಲಕ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಟ್ಟರೆ ದೇಹದಾನ ಮಾಡಿದ್ದಕ್ಕೂ ಸಾರ್ಥಕತೆ ಆಗಲಿದೆ ಎಂದು ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ನಾವೆಲ್ಲಾ ಅನ್ನದಾನ, ವಿದ್ಯಾದಾನದ ಬಗ್ಗೆ ಕೇಳಿದ್ದೇವೆ.

            ಆದರೆ, ಇತ್ತೀಚಿನ ದಿನಗಳಲ್ಲಿ ದಾನಗಳ ಪಟ್ಟಿಯಲ್ಲಿ ಅಂಗಾಂಗ ದಾನವು ಸಹ ಸೇರಿಕೊಂಡಿದೆ. ಕಳೆದ ಏಳೆಂಟು ವರ್ಷಗಳಿಂದ ದೇಹದಾನಕ್ಕೆ ಪ್ರಾಮುಖ್ಯತೆ ಬಂದಿದೆ. ಸತ್ತ ಮೇಲೂ ಉಪಯೋಗವಾಗಬಲ್ಲ ದೇಹದಾನವು ಅತ್ಯಂತ ಶ್ರೇಷ್ಠದಾನವಾಗಿದೆ. ದೇಹದಾನ ಮಾಡುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತ್ತದೆ. ವೈದ್ಯಕೀಯ ರಂಗದಲ್ಲಿ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

            ಹಿಂದೆ ಸಂಶೋಧನೆಗೆ ದೇಹಗಳು ಸಿಗುತ್ತಿರಲಿಲ್ಲ. ಈಗೀಗ ಜನರಲ್ಲಿ ಜಾಗೃತಿ ಮೂಡುತ್ತಿರುವ ಕಾರಣ ಈ ಕಾಲೇಜೊಂದರಲ್ಲೇ 558 ಮಂದಿ ದೇಹದಾನಕ್ಕೆ ಹೆಸರು ನೋಂದಾಯಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಮೌಢ್ಯದಿಂದ ಹೊರ ಬಂದು, ತಪ್ಪು ತಿಳುವಳಿಕೆ ಕೈಬಿಟ್ಟು ಪ್ರತಿಯೊಬ್ಬರೂ ದೇಹದಾನ ಮಾಡಬೇಕು. ಬಂಧು-ಮಿತ್ರರಿಗೂ ದೇಹದಾನ ಮಾಡುವುದರಿಂದ ಸಮಾಜಕ್ಕೆ ಆಗುವ ಉಪಯೋಗದ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಅವರಿಗೂ ದೇಹದಾನ ಮಾಡಲು ಪ್ರೇರೇಪಿಸಬೇಕೆಂದು ಕಿವಿಮಾತು ಹೇಳಿದರು.
ಸಮಾವೇಶದ ಪ್ರಯುಕ್ತ ಬಾಪೂಜಿ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ದೇಹದಾನಿಗಳಿಗೆ ಉಚಿತ ಆರೋಗ್ಯ ತಪಾಸಣೆ ಸಹ ನಡೆಯಿತು.

              ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ, ಬಾಪೂಜಿ ವಿದ್ಯಾಸಂಸ್ಥೆ ಗೌರವಾಧ್ಯಕ್ಷ ರಾಜನಹಳ್ಳಿ ರಮಾನಂದ್, ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಕಾಲೇಜಿನ ರಿಸರ್ಚ್ ಡೆವಲಪ್‍ಮೆಂಟ್ ಡೀನ್ ಡಾ.ಮಂಜುನಾಥ ಆಲೂರು, ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್.ಬಿ.ಮಂಜುನಾಥ, ಅನಾಟಮಿ ವಿಭಾಗದ ಮುಖ್ಯಸ್ಥೆ ಡಾ.ಡಿ.ನಿರ್ಮಲಾ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link