252 ಕೋಟಿ ಲಾಭ ಗಳಿಸಿದ ಬ್ಯಾಂಕ್ ಆಫ್ ಇಂಡಿಯಾ..!!

ಮುಂಬಯಿ:

       ಸಾರ್ವಜನಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಬ್ಯಾಂಕ್‌ ಆಫ್‌ ಇಂಡಿಯಾ ನಷ್ಟದಿಂದ ಹೊರಬಂದು ಮತ್ತೆ ಲಾಭದ ಕಡೆ ಸಾಗುತ್ತಿದೆ.2019ರ ಮಾರ್ಚ್‌ 31ರಂದು ಪೂರ್ಣಗೊಂಡ 4ನೇ ತ್ತೈಮಾಸಿಕದ ವೇಳೆ  ಬಿಓಐ 252 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ. ಒಂದು ವರ್ಷ ಹಿಂದೆ ಇದೇ ತ್ತೈಮಾಸಿಕದಲ್ಲಿ ಬ್ಯಾಂಕ್‌ 3,969 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿತ್ತು. ಎನ್‌ಪಿಎಯಲ್ಲಿ ಇಳಿಕೆಯೊಂದಿಗೆ ಅದಕ್ಕೆ ಬದಲಿಗೆ ಮಾಡಲಾಗುವ ನಿಬಂಧನೆಗಳು ಕೂಡ ಕಡಿಮೆಯಾಗಿವೆ.

      ಬ್ಯಾಂಕ್‌ ಆಫ್‌ ಇಂಡಿಯಾ ಇದರ ಆಡಳಿತ ನಿರ್ದೇಶಕ ಮತ್ತು ಸಿಇಒ ದೀನಬಂಧು ಮಹಾಪಾತ್ರ ಅವರು ವಾರ್ಷಿಕ ಫಲಿತಾಂಶವನ್ನು ಮಂಡಿಸಿದರು. ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು ಅದನ್ನು ಸರ್ವಾನುಮತದಿಂದ ಅಂಗೀಕರಿಸಿತು. ಬ್ಯಾಂಕ್‌ನ ಜಾಗತಿಕ ವ್ಯವಹಾರವು 2018ರ ಮಾ.31ರ ಅವಧಿಯಲ್ಲಿ 8,96,850 ಕೋಟಿ ರೂ.ಗಳ ತುಲನೆಯಲ್ಲಿ ಶೇ.0.77ರಷ್ಟು ವೃದ್ಧಿಯೊಂದಿಗೆ 2019ರ ಮಾ.31ರ ವೇಳೆಗೆ 9,03,722 ಕೋಟಿ ರೂ.ಗಳಿಗೆ ತಲುಪಿದೆ. ದೇಶೀಯ ವ್ಯವಹಾರವು 2018ರ ತುಲನೆಯಲ್ಲಿ 2019ರ ಮಾ.31ರ ವೇಳೆಗೆ ಶೇ. 4.93ರಷ್ಟು ವೃದ್ಧಿಗೆ ಸಾಕ್ಷಿಯಾಗಿದೆ.

       4ನೇ ತ್ತೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ಆದಾಯವು 2018ರ ಮಾರ್ಚ್‌ 31ರ 9,597 ಕೋಟಿ ರೂ.ಗಳ ತುಲನೆಯಲ್ಲಿ 12,417 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದಾಗ್ಯೂ, ಇಡೀ ವಿತ್ತ ವರ್ಷ 2018-19ರಲ್ಲಿ ಬ್ಯಾಂಕ್‌ಗೆ 5,547 ಕೋಟಿ ರೂ.ಗಳ  ನಷ್ಟವಾಗಿದೆ. ಅದೇ, 2018-19ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನ ಒಟ್ಟು ಆದಾಯ 43,805 ಕೋಟಿ ರೂ.ಗಳಿಂದ 45,900 ಕೋಟಿ ರೂ.ಗಳಿಗೆ ಏರಿಕೆ ಆಗಿದೆ ಎಂದು ಬಿಓಐ ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ