ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಮೇವು, ನೀರು ವಿತರಣೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ಒಂದು ಹಸು ನಿತ್ರಾಣಗೊಂಡು ಮರಣ ಹೊಂದಿದ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಆಡಳಿತ ದೇವರ ಎತ್ತುಗಳ ಸಂರಕ್ಷಣೆಗೆ ಮುಂದಾಗಿದೆ.
ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಭಾನುವಾರ ಮಧ್ಯಾಹ್ನ ಒಂದು ಲೋಡ್ ಭತ್ತದ ಹುಲ್ಲನ್ನು ತಾವೇ ನೇರವಾಗಿ ಸ್ವತಃ ಬೊಮ್ಮದೇವರ ಹಟ್ಟಿಗೆ ತೆಗೆದುಕೊಂಡು ಹೋಗಿ ಕಿಲಾರಿಗಳ ವಶಕ್ಕೆ ನೀಡಿದಲ್ಲದೆ.
ಅಲ್ಲಿಂದ ಎಲ್ಲಾ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಚಗೊಳಿಸಿ ಸುಣ್ಣ ಹೊಡೆಸಿ, ಗುಣಮಟ್ಟದ ನೀರನ್ನು ಜಾನುವಾರುಗಳಿಗೆ ಕುಡಿಯಲು ನೀಡಿದರು. ಬೊಮ್ಮದೇವರಹಟ್ಟಿಯ ದೇವರ ಎತ್ತುಗಳ ಸಂರಕ್ಷಣೆ ಕುರಿತಂತೆ ಮಾತನಾಡಿದ ಅವರು, ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಈ ಬಗ್ಗೆ ವರದಿ ನೀಡಿದ್ದು, ಚುನಾವಣಾ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು.
ಇಲ್ಲಿನ ಜಾನುವಾರುಗಳ ಆರೋಗ್ಯ ಸುಧಾರಣೆ ಹಾಗೂ ರಕ್ಷಣೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು, ಜಾನುವಾರುಗಳ ಆರೋಗ್ಯ ತಪಾಸಣೆ ಸಹ ನಿರಂತರವಾಗಿ ನಡೆಯುತ್ತಿದ್ದು, ಪಶುವೈದ್ಯ ಇಲಾಖೆಯ ವೈದ್ಯರು ಇಲ್ಲೇ ಬೀಡುಬಿಟ್ಟು ಈಗಾಗಲೇ ಎಲ್ಲಾ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ.
ಕಳೆದ ಶುಕ್ರವಾರದಿಂದ ನಿತ್ರಾಣಗೊಂಡಿದ್ದ ಎರಡೂ ಜಾನುವಾರುಗಳು ವೈದ್ಯರ ಪರಿಶ್ರಮದ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದು, ಈಗಾಗಲೇ ಲವಲವಿಕೆಯಿಂದ ಮೇಲೇಳತೊಡಗಿವೆ. ಆದರೆ, ಒಂದು ಹಸು ಮಾತ್ರ ಮರಣ ಹೊಂದಿದ್ದನ್ನು ಬಿಟ್ಟರೆ ಇನ್ನೂ ಯಾವುದೇ ಪ್ರಾಣಾಪಾಯ ಉಂಟಾಗುವುದಿಲ್ಲವೆಂದು ಆಶಾಭಾವನೆ ನಮ್ಮದು. ಇದಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಎಲ್ಲಾ ಕಿಲಾರಿಗಳಿಗೆ ಮಾಹಿತಿ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಜಾನುವಾರುಗಳಿಗೆ ಸಂಬಂಧಪಟ್ಟ ಸಮಸ್ಯೆ ಇದ್ದಲ್ಲಿ ತಕ್ಷಣವೇ ಮಾಹಿತಿ ನೀಡಿದಲ್ಲಿ ನಾನೇ ನೇರವಾಗಿ ಬೊಮ್ಮದೇವರಹಟ್ಟಿಗೆ ಭೇಟಿ ನೀಡಿ ಜಾನುವಾರುಗಳ ಯೋಗಕ್ಷೇಮ ಹಾಗೂ ಇನ್ನಿತರ ಸೌಲಭ್ಯಗಳನ್ನು ಕುರಿತು ಇಲ್ಲಿನ ಕಿಲಾರಿಗಳೊಂದಿಗೆ ಮುಕ್ತವಾಗಿ ಚರ್ಚೆಸುವೆ ಎಂದಿದ್ಧಾರೆ.
ಕಿಲಾರಿ ಪರವಾಗಿ ಮಾತನಾಡಿದ ಪಾಲಯ್ಯ, ಜಿಲ್ಲಾಡಳಿತ ಈ ಮೊದಲೇ ಜಾಗೃತಿಗೊಂಡು ಇಂದು ಸ್ವಂದಿಸಿದ ರೀತಿಯಲ್ಲೇ ಈ ಹಿಂದೆಯೇ ಸ್ಪಂದಿಸಿದ್ದರೆ ಹಸು ಮೃತಪಡುತ್ತಿರಲಿಲ್ಲ. ಕಾರಣ, ಇಲ್ಲಿನ ಎಲ್ಲಾ ಕಿಲಾರಿಗಳು ಜಾನುವಾರುಗಳ ವಿಷಯದಲ್ಲಿ ಮಾತ್ರ ಹೆಚ್ಚು ಗಂಭಿರವಾಗಿ ಚಿಂತನೆ ನಡೆಸುತ್ತಾರೆ.
ತಮ್ಮ ಮನೆಗಳನ್ನು ತೊರೆದು ಅಡವಿಯಲ್ಲಿಯೇ ಜಾನುವಾರುಗಳೊಂದಿಗೆ ತಮ್ಮ ನಿತ್ಯದ ಬದುಕನ್ನು ನಡೆಸುತ್ತಿದ್ದು, ಹಸುವಿನ ಮರಳ ಎಲ್ಲರಿಗೂ ತುಂಬಾ ನೋವುಂಟು ಮಾಡಿದೆ ಎಂದರು. ಜಿಲ್ಲಾಡಳಿತ ಎಚ್ಚೆತ್ತುಕೊಂಡ ಬಗ್ಗೆ ಸಂತಸವಿದ್ದರೂ ಇದು ಹೀಗೆಯೇ ಮುಂದುವರೆಯಬೇಕು. ಇಲ್ಲವಾದಲ್ಲಿ ಮತ್ತೆ ಜಾನುವಾರುಗಳು ತಮ್ಮ ಬದಕಿನ ಪಯಣವನ್ನು ಮುಗಿಸುವ ಸಂದರ್ಭ ಒದಗಿಬರಬಹುದು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ