ಸಂಪೂರ್ಣ ಸೆಸ್ ಬಿಡುಗಡೆಗೆ ಬಸವರಾಜ ಬೊಮ್ಮಾಯಿ ಆಗ್ರಹ

ಬೆಂಗಳೂರು

     ರಾಜ್ಯಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟದಿಂದ ಹೊರಬರುವುದಕ್ಕಾಗಿ ಸೆಪ್ಟಂಬರ್ 2020ರವರೆಗೆ ಸಂಗ್ರಹಿಸಲಾಗಿರುವ ಸಂಪೂರ್ಣ ಸೆಸ್ ಮೊತ್ತವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಜಿಎಸ್ ಟಿ ಮಂಡಳಿಯ 42ನೇ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

    ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಸೆಪ್ಟಂಬರ್ 2020ರವೆಗೆ ಸಂಗ್ರಹಿಸಲಾದ ಸುಮಾರು 2500 ಕೋಟಿ ರೂ.ನಷ್ಟ ಪರಿಹಾರ ಸೆಸ್ ಅನ್ನು ರಾಜ್ಯಗಳಿಗೆ ಕೂಡಲೆ ಬಿಡುಗಡೆ ಮಾಡಬೇಕು. ಸೆಪ್ಟಂಬರ್ 2020ರವರೆಗೆ ಸಂಗ್ರಹಿಸಲಾಗಿರುವ ಸೆಸ್ ಮೊತ್ತವನ್ನು ತಕ್ಷಣದಿಂದ ರಾಜ್ಯಗಳಿಗೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕರದ ಕ್ರಮವನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

    ಬಡ್ಡಿಯೂ ಸೇರಿದಂತೆ ರಾಜ್ಯಗಳ ನಷ್ಟ ಪರಿಹಾರದ ಅರ್ಹತೆಗೆ ಸಮನಾದ ಪೂರ್ಣ ಮೊತ್ತವನ್ನು ಎಲ್ಲಾ ರಾಜ್ಯಗಳಿಗೆ ನೀಡುವುದಕ್ಕಾಗಿ 2020ರ ನಂತರವೂ ಸೆಸ್ ಸಂಗ್ರಹಣೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮಾಡಿದ ಸಲಹೆಯನ್ನು ಕರ್ನಾಟಕ ಸ್ವಾಗತಿಸುತ್ತದೆ. ಇದು ಜಿಎಸ್ ಟಿ ಮಂಡಳಿಯ ಹಿಂದಿನ ಸಭೆಯಲ್ಲಿ ಕರ್ನಾಟಕವು ನೀಡಿದ ಸಲಹೆಯಾಗಿತ್ತು ಎಂದು ಬೊಮ್ಮಾಯಿ ಸಭೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯ-1ರ ಅಡಿಯಲ್ಲಿ ಸಾಲದ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ಶೇಕಡಾ 10ರ ವೃದ್ಧಿ ದರವನ್ನು ಹಿಂದಿನ ಪ್ರಸ್ತಾವನೆಯು ಪರಿಗಣಿಸಿತ್ತು.

    ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪರಿಗಣಿಸಿದ ವೃದ್ಧಿ ದರವನ್ನು ಕಡಿಮೆ ಮಾಡಲು ಕರ್ನಾಟಕ ಸಲಹೆ ಮಾಡಿತ್ತು. ಕೇಂದ್ರ ಸರ್ಕಾರವು ಸಾಲದ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ವೃದ್ಧಿ ದರವನ್ನು ಶೇಕಡಾ 7ಕ್ಕೆ ಇಳಿಸಲು ಪ್ರಸ್ತಾಪಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರ ಬೆಂಬಲಿಸುತ್ತದೆ. ಇದರಿಂದಾಗಿ ಎಲ್ಲಾ ರಾಜ್ಯಗಳಿಗೆ ಲಭ್ಯವಿರುವ ಸಾಲದ ಮೊತ್ತವು ಪ್ರಸ್ತುತ 97000 ಕೋಟಿ ರೂ.ಗಳಿಂದ 1.10 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗುತ್ತದೆ. ರಾಜ್ಯಕ್ಕೆ ಪ್ರಸ್ತುತ 11,324 ಕೋಟಿ ರೂ.ಗಳಿಂದ 12,400 ಕೋಟಿಗಳಿಗೆ ಹೆಚ್ಚಳವಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

    ವಿಶೇಷ ಗವಾಕ್ಷಿಯ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳುವಿಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಆಯ್ಕೆ-1 ಅನ್ನು ಕರ್ನಾಟಕ ಸರ್ಕಾರವು ಈಗಾಗಲೇ ಆಯ್ಕೆ ಮಾಡಿಕೊಂಡಿದೆ. ರಾಜ್ಯಗಳಿಗಾಗಿ ವಿಶೇಷ ಕಡಿಮೆ ದರದ ಬಡ್ಡಿಗಾಗಿ ಚೌಕಾಶಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿದರು. ಅವಶ್ಯವಿದ್ದಲ್ಲಿ ಮುಂದಿನ ವರ್ಷಕ್ಕೆ ವಿಸ್ತರಣೆಯಾಗುವುದನ್ನೂ ಒಳಗೊಂಡಂತೆ ರಾಜ್ಯಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲ ಸೌಲಭ್ಯವನ್ನು ಪಡೆಯಲು ಅವಕಾಶ ಮಾಡಿಕೊಡುವಂತೆ ಕೋರಿದರು.

     ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಕರ್ನಾಟಕ ರಾಜ್ಯವು ಕೋವಿಡ್ ಸಾಂಕ್ರಾಮಿಕದಿಂದ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಗುರಿಯಾಗಿದೆ. ಇದರಿಂದಾಗಿ ರಾಜ್ಯವು ಬಂಡವಾಳ ವೆಚ್ಚ ಮತ್ತು ಚಾಲ್ತಿ ವೆಚ್ಚಗಳೆರಡೂ ಪ್ರತಿಕೂಲ ಪರಿಣಾಮಕ್ಕೆ ಒಳಗಾಗಿವೆ. ಆಯವ್ಯಯದಲ್ಲಿ ಪ್ರಸ್ತಾಪಿಸಿದ ಯೋಜನೆಗಳನ್ನು ತಕ್ಷಣದಿಂದ ಜಾರಿಗೆಗೊಳಿಸಬೇಕಾಗಿದ್ದು, ಈಗಾಗಲೇ 6 ತಿಂಗಳ ಅವಧಿಯು ಕಳೆದುಹೋಗಿದೆ. ನಷ್ಟ ಪರಿಹಾರ ಮೊತ್ತವನ್ನು ತಕ್ಷಣದಲ್ಲಿ ಬಿಡುಗಡೆಗೊಳಿಸಿದಲ್ಲಿ ಅದನ್ನು ರಾಜ್ಯಗಳು ವೆಚ್ಚವಾಗಿ ವಿನಿಯೋಗಿಸುವುದರಿಂದ ಸರಕು ಮತ್ತು ಸೇವೆಗಳ ಬೇಡಿಕೆಯು ತಾನಾಗಿಯೇ ಹೆಚ್ಚಾಗುತ್ತದೆ. ಇದು ಪರೋಕ್ಷವಾಗಿ ಸರಕು ಮತ್ತು ಸೇವೆಗಳ ಉಪಭೋಗ ಹೆಚ್ಚಾಗಿಸಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗುವುದಕ್ಕೂ ಕಾರಣವಾಗುತ್ತದೆ. ಆದ್ದರಿಂದ ವೆಚ್ಚಗಳನ್ನು ಹೆಚ್ಚಿಸಲು ನಷ್ಟ ಪರಿಹಾರದ ಮೊತ್ತವನ್ನು ತಕ್ಷಣದಲ್ಲಿ ಪಡೆಯುವುದು ಸಮಯೋಚಿತ ಅವಶ್ಯಕತೆಯಾಗಿದೆ ಎಂದು ಗೃಹ ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿದರು.

     ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ವೈರುಧ್ಯದ ನಿಲುವನ್ನು ತ್ಯಜಿಸಿ, ಸಹಕಾರಿ ಒಕ್ಕೂಟ ವ್ಯವಸ್ಥೆಯ ಹಿತಕ್ಕಾಗಿ ಒಮ್ಮತಕ್ಕೆ ಬಂದು ಆಯ್ಕೆ-1ರ ಅಡಿಯಲ್ಲಿ ಸಾಲದ ರೂಪದಲ್ಲಿ ಧನ ಸಹಾಯವನ್ನು ರಾಜ್ಯಗಳ ಆಯ್ಕೆಗೆ ಅನುಸಾರವಾಗಿ ಒದಗಿಸಬೇಕು. 2017-18ರಲ್ಲಿ ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿಯಾಗಿ ನೀಡಲ್ಪಟ್ಟಿರುವ ನಷ್ಟ ಪರಿಹಾರ ಮೊತ್ತದ ಮರುಪಾವತಿಗೆ ಸಂಬಂಧಿಸಿದಂತೆ ಒಂದೇ ಕಂತಿನಲ್ಲಿ ವಸೂಲಿ ಮಾಡದೆ ಐದು ವರ್ಷಗಳ ನಂತರ ವಸೂಲಿ ಮಾಡಬೇಕು, ಇಲ್ಲವೇ ಹೆಚ್ಚಿನ ಹೊರೆಯಾಗದಂತೆ ಒಂದಕ್ಕಿಂತ ಹೆಚ್ಚು ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬೊಮ್ಮಾಯಿ ಸಭೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link