“ಭ್ರಷ್ಟಾಚಾರದ ಬೇರುಗಳು ಮತ್ತು ಬಿಳಿಲುಗಳು” ಎಂಬ ಕೃತಿಯ ಲೋಕಾರ್ಪಣೆ

ಹೊನ್ನಾಳಿ:

        ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದೂ ಒಂದು ರೀತಿಯ ಭ್ರಷ್ಟಾಚಾರ ಎಂದು ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

      ಇಲ್ಲಿನ ಗುರುಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಜಿ. ರಂಗನಗೌಡ ನಿಲೋಗಲ್ ವಿರಚಿತ “ಭ್ರಷ್ಟಾಚಾರದ ಬೇರುಗಳು ಮತ್ತು ಬಿಳಿಲುಗಳು” ಎಂಬ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಯಾರೇ ಭ್ರಷ್ಟಾಚಾರ ಮಾಡಿದರೂ ಅದು ಸಹ್ಯವಲ್ಲ. ಆದ್ದರಿಂದ, ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಕಂಡುಬಂದರೂ ಅದನ್ನು ಖಂಡಿಸುವ ದಾಷ್ಟ್ರ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

        ಸಮಾಜದ ಆಧಾರ ಸ್ತಂಭಗಳು ಭ್ರಷ್ಟಾಚಾರದ ಭಾರದಿಂದ ಕುಸಿಯಲಾರಂಭಿಸಿವೆಯೇನೋ ಎಂದು ಭಾಸವಾಗುತ್ತಿದೆ. ಈ ಸನ್ನಿವೇಶವನ್ನು ಕೃತಿಯಲ್ಲಿ ವಿವರಿಸುವ ಲೇಖಕರು, ಇದರ ಹೆಚ್ಚಿನ ಪರಿಣಾಮ ಕಾರ್ಯಾಂಗದ ಮೇಲೆ ಆಗಲಿದೆ ಎಂದಿದ್ದಾರೆ.       

       ಭ್ರಷ್ಟಾಚಾರವನ್ನು ಹುಟ್ಟುಹಾಕುವ, ಪೋಷಿಸುವ ಪ್ರವೃತ್ತಿ ಕೂಡ ಭ್ರಷ್ಟಾಚಾರ ಆಗಲಿದೆ ಎಂಬುದಾಗಿ ವಿವರಿಸುತ್ತಾರೆ. ಈ ಪುಸ್ತಕವು ಲೋಕ ಶಿಕ್ಷಣದ ಕೃತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

       ಹರಿಹರದ ಎಸ್‍ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಭ್ರಷ್ಟಾಚಾರ ಇಂದು-ನಿನ್ನೆಯದಲ್ಲ. ಆದಿಕಾಲದಿಂದಲೂ ಇದು ಸಮಾಜವನ್ನು ಬಾಧಿಸುತ್ತಿದೆ. ಕೃತಿ ಬಿಡುಗಡೆಯಾದ ಮೇಲೆ ಲೇಖಕರು ಕೆಲವರ ವಿರೋಧ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಬರವಣಿಗೆಯ ಹೋರಾಟಕ್ಕೆ, ಧೈರ್ಯಕ್ಕೆ ನಾವೆಲ್ಲಾ ಬೆಂಬಲಿಸಿ ಲೇಖಕರ ಆತ್ಮಸ್ಥೈರ್ಯ ಹೆಚ್ಚಿಸೋಣ ಎಂದರು.

      ಕೃತಿಯ ಲೇಖಕ ಜಿ. ರಂಗನಗೌಡ ನಿಲೋಗಲ್ ಮಾತನಾಡಿ, ರಾಷ್ಟದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಾಗುವ ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇನೆ. ಅಂಗನವಾಡಿ ಕೇಂದ್ರಗಳಲ್ಲಿನ ದಿನಸಿ ಪದಾರ್ಥಗಳ ಕಳವಿನಿಂದ ಮೊದಲುಗೊಂಡು ನ್ಯಾಯಾಲಯದ ತೀರ್ಪುಗಳ ಸಂದರ್ಭದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಬಗ್ಗೆ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ಭ್ರಷ್ಟಾಚಾರ ತಡೆಗಟ್ಟಲು ತಾನು ಕೆಲವು ಮಾರ್ಗೋಪಾಯಗಳನ್ನೂ ಸೂಚಿಸಿದ್ದೇನೆ ಎಂದರು.

      ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯಾಧ್ಯಕ್ಷ ಎಂ. ಗುರುಪಾದಯ್ಯ ಮಾತನಾಡಿ, ಮಾಹಿತಿ ಹಕ್ಕು ಕಾರ್ಯಕರ್ತರಿಂದ ಅಭಿವೃದ್ಧಿಗೆ ಅಡೆ-ತಡೆಯಾಗುತ್ತದೆ ಎಂಬ ಜನಪ್ರತಿನಿಧಿಗಳ ಹೇಳಿಕೆಗಳು ಸಾಮಾಜಿಕ ಹೋರಾಟಗಾರರ ಆತ್ಮಸ್ಥೈರ್ಯ ಕುಂದಿಸುವಂತಿವೆ. ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯುವುದರಿಂದ ಅಭಿವೃದ್ಧಿ ಕುಂಠಿತಗೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಜನಪ್ರತಿನಿಧಿಗಳ ಇಂಥ ಅಸಂಬದ್ಧ ಹೇಳಿಕೆಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೃತಿಯ ಬಗ್ಗೆ ಜಿ.ಎಂ.ಆರ್. ಆರಾಧ್ಯ ಆಶಯ ನುಡಿಗಳನ್ನಾಡಿದರು.

      ಡಾ.ಎಚ್.ಎಚ್. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಗೊಲ್ಲರಹಳ್ಳಿ ವರದರಾಜಪ್ಪ, ರೈತ ಮುಖಂಡ ಕುರುವ ಗಣೇಶ್, ರಂಗಪ್ಪ, ಸುರೇಶ್, ಷಣ್ಮುಖಪ್ಪ, ಎ.ಎನ್. ಚಂದ್ರಶೇಖರ, ಶಿಕ್ಷಕ ಪುರುಷೋತ್ತಮ ಇತರರು ಉಪಸ್ಥಿತರಿದ್ದರು. ಭ್ರಷ್ಟಾಚಾರ ವಿರೋಧಿ ವೇದಿಕೆ, ಕುಂಚಶ್ರೀ ಪ್ರಕಾಶನ, ಮಾನವ ಬಂಧುತ್ವ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ