ಸಹಕಾರ ಇಲಾಖೆಯಿಂದ ಸರ್ಕಾರದ ಸಾಧನೆಗಳ ಹೊತ್ತಿಗೆ ಬಿಡುಗಡೆ

ಬೆಂಗಳೂರು

    ರಾಜ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ವತಿಯಿಂದ ಸಹಕಾರದ ಪ್ರಗತಿ  2020 ಸಾಧನೆಗಳ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಭಾನುವಾರ ಬಿಡುಗಡೆಗೊಳಿಸಿದರು. ಮುಂದಿನ ವರ್ಷದ ಗುರಿ 30 ಲಕ್ಷ ರೈತರಿಗೆ 20 ಸಾವಿರ ಕೋಟಿ ರೂಪಾಯಿ ಕೃಷಿ ಸಾಲವನ್ನು ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೂಚಿಸಿದರು.

      ಪ್ರಸಕ್ತ ಸಾಲಿನಲ್ಲಿ ರೈತರಿಗೆ 14500 ಕೋಟಿ ರೂಪಾಯಿ ಕೃಷಿ ಸಾಲ ನೀಡುವ ಗುರಿ ಇದೆ. ಈಗಾಗಲೇ 8,50,000 ರೈತರಿಗೆ ರೂ.5,600 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಕೃಷಿ ಚಟುವಟಿಕೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

     ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಉಪಸ್ಥಿತರಿದ್ದರು.ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮುಖ್ಯಮಂತ್ರಿಗಳ ಒಂದು ವರ್ಷದ ಸಾಧನೆ ಜೊತೆಗೆ ತಾವು ನಮ್ಮ ಸಹಕಾರ ಇಲಾಖೆಯಿಂದ 3 ತಿಂಗಳ ಅವಧಿಗೆ ಏನು ಸಾಧನೆ ಮಾಡಿದ್ದೇನೆ ಎಂಬುದರ ಕಿರುಹೊತ್ತಿಗೆಯನ್ನು ಹೊರತಂದಿದ್ದು, ಅದನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ, ಸಚಿವನಾಗಿ ನಾನು ನಿರ್ವಹಿಸಿದ ಜವಾಬ್ದಾರಿ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

    ನನ್ನ ಕಾರ್ಯವೈಖರಿ ಬಗ್ಗೆ ಸಹ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೂ ಸಹ ಇದೇ ಮಾದರಿಯಲ್ಲಿ ಕಾರ್ಯನಿರ್ವಹಣೆ ಮಾಡಿ ಎಂದು ಮುಖ್ಯಮಂತ್ರಿಗಳು ಸಲಹೆ ಹಾಗೂ ಮಾರ್ಗದರ್ಶನ ಮಾಡಿದ್ದಾರೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

    ನಾನು ಈಗಾಗಲೇ 25 ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಅರಿತಿದ್ದೇನೆ. ಪ್ರತಿ ಭೇಟಿ ವೇಳೆಯೂ ರೈತರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಪ್ರಸಕ್ತ ಬಾರಿ ರೈತರಿಗೆ ಮಧ್ಯಮಾವಧಿ, ಅಲ್ಪಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವಾಗಿ 14500 ಕೋಟಿ ರೂಪಾಯಿ ಸಾಲ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಚಾಲನೆ ನೀಡಲಾಗಿದ್ದು, ಈಗಾಗಲೇ 8,50,000 ರೈತರಿಗೆ ರೂ.5,600 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

     ಕೋವಿಡ್ 19 ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಎಪಿಎಂಸಿ ಹಾಗೂ ಸಹಕಾರ ಇಲಾಖೆ ವತಿಯಿಂದ 53 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿಯಾದ ನಂತರ ಶೇಕಡಾ 1 ಕ್ಕೆ ಸೆಸ್ ಇಳಿಸಲಾಗಿತ್ತು. ಬಳಿಕ ಇನ್ನೂ ಇಳಿಕೆ ಮಾಡುವ ಸಂಬಂಧ ಕೂಗು ಕೇಳಿಬಂದಿದ್ದರಿಂದ ಸಂಪುಟ ಸಭೆಯಲ್ಲಿ ಚರ್ಚಿಸಿ ಶೇ. 35ಕ್ಕೆ ಸೆಸ್ ಇಳಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

     ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ 12.75 ಕೋಟಿ ರೂಪಾಯಿಯನ್ನು ಇಲಾಖೆ ವತಿಯಿಂದ ನೀಡಲಾಗುತ್ತಿದ್ದು, ಈಗಾಗಲೇ 32 ಸಾವಿರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲಾಗಿದೆ. ಉಳಿದ 10 ಸಾವಿರ ಆಶಾ ಕಾರ್ಯಕರ್ತೆಯರಿಗೆ ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಸವಾಲಿನ ಜೊತೆಯಲ್ಲೇ ಬಂದವರಾಗಿದ್ದಾರೆ. ಪ್ರವಾಹದಂತಹ ಸಂದರ್ಭದಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವೆಲ್ಲರೂ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

       ಯಡಿಯೂರಪ್ಪ ಅವರು ಯಾವಾಗ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗಲೆಲ್ಲ ಸವಾಲುಗಳೇ ಬರುತ್ತವೆ. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂಪಾಯಿಯನ್ನು ನಮ್ಮ ಸರ್ಕಾರ ಕೊಟ್ಟಿದೆ. ಜೊತೆಗೆ ಕಾರ್ಮಿಕರಿಗೆ, ಬಡವರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿದ್ದಾರೆ ಎಂದು ಕಂದಾಯ ಸಚಿವರಾದ ಆರ್. ಅಶೋಕ್ ತಿಳಿಸಿದರು.

      ಸಹಕಾರ ಸಚಿವರಾದ ಸೋಮಶೇಖರ್ ಅವರು ಚಟುವಟಿಕೆಯಿಂದ ಅನುಭವಿ ಮಂತ್ರಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಚಟುವಟಿಕೆ ಬಗ್ಗೆ ನನಗೆ ಖುಷಿ ಹಾಗೂ ಹೆಮ್ಮೆ ಇದೆ ಎಂದು ಸಚಿವರಾದ ಅಶೋಕ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link