ಕುಸಿಯುತ್ತಿರುವ ಅಂತರ್ಜಲ:ಕೊಳವೆ ಬಾವಿ ಕೊರೆಯುವುದನ್ನು ನಿಲ್ಲಿಸಲು ಶಿಫಾರಸ್ಸು

ಬೆಂಗಳೂರು

        ನಗರದಲ್ಲಿ ಅಂತರ್ಜಲ ದಿನೇ ದಿನೇ ಕುಸಿಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಪರಿಸರ ತಜ್ಞರು ಕಾವೇರಿ ನೀರು ಲಭ್ಯವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯುವುದನ್ನು ನಿಲ್ಲಿಸಬೇಕೆಂದುರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

     ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ವರದಿಯಂತೆ ಬೋರ್‍ವೆಲ್‍ಗಳ ಸಂಖ್ಯೆ 3.5 ಲಕ್ಷ ದಾಟಿದ್ದು ಕಳೆದ 2012ರಲ್ಲಿ 1.5 ಲಕ್ಷ ಬೋರ್‍ವೆಲ್‍ಗಳು 6 ವರ್ಷಗಳಲ್ಲಿ ದುಪ್ಪಟ್ಟುಗೊಂಡಿರುವುದು ಅಂತರ್ಜಲ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

      ಜಲಮಂಡಳಿಯ ಮಾಹಿತಿಯನ್ವಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಸಾರ್ವಜನಿಕ ಕೊಳವೆಬಾವಿ ಸೇರಿದಂತೆ ಒಟ್ಟು 3.61 ಲಕ್ಷ ಕೊಳವೆ ಬಾವಿಗಳಿದೆ.ಒಂದು ಕೊಳವೆಬಾವಿಯಿಂದ ಮತ್ತೊಂದು ಕೊಳವೆ ಬಾವಿಗೆ ತಜ್ಞರ ಸಲಹೆಯನ್ವಯ ಕನಿಷ್ಟಾಂತರ ಕಾಯ್ದುಕೊಳ್ಳಬೇಕಿದೆ. ಆದರೆ, ಈ ಸಲಹೆ ಉಲ್ಲಂಘಿಸಿ ಸಿಕ್ಕ ಸಿಕ್ಕ ಜಾಗಗಳಲ್ಲಿ ಕೊಳವೆ ಬಾವಿ ಕೊರೆಯುತ್ತಿರುವುದು ಅಂತರ್ಜಲ ಕಡಿತಕ್ಕೆ ಪ್ರಮುಖ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

    ಜಲಮಂಡಳಿಯಿಂದ ಅನುಮತಿಯನ್ನೂ ಪಡೆಯದೆ ಸಾವಿರಾರು ಸಂಖ್ಯೆಯ ಬೋರ್‍ವೆಲ್‍ಗಳನ್ನು ಕೊರೆಯಲಾಗಿದೆ. ಮನೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಕೊಳವೆ ಬಾವಿಗಳನ್ನು ಕೊರೆಯುವ ವೇಳೆ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಉಳಿದಂತೆ ನಗರ ವ್ಯಾಪ್ತಿಯಲ್ಲಿ ಆರಂಭವಾಗಿರುವ ಕಾಂಕ್ರಿಟ್‍ಗಳ ರಸ್ತೆ ನಿರ್ಮಾಣದಿಂದ ನೀರು ಭೂಮಿಯ ಒಳಭಾಗಕ್ಕೆ ಇಳಿಯುತ್ತಿಲ್ಲ. ಮತ್ತೊಂದೆಡೆ ಲಕ್ಷಾಂತರ ಕೊಳವೆ ಬಾವಿಗಳ ಮೂಲಕ ಬಹಳ ಆಳದಿಂದ ನೀರನ್ನು ಎತ್ತಿ ನಿರಂತರವಾಗಿ ಬಳಕೆ ಮಾಡಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

      ನಗರದ ಕೇಂದ್ರ ಭಾಗದ ಬೇರೆ ಬೇರೆ ಪ್ರದೇಶಗಳಲ್ಲಿ 1200 ಅಡಿ ಹಾಗೂ ಕೆಆರ್ ಪುರ ಸೇರಿದಂತೆ ಸುತ್ತಮುತ್ತಲಿನ ಹೊರ ವಲಯಗಳಲ್ಲಿ 1400 ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆ ಅಂತರ್ಜಲ ಸಂರಕ್ಷಣೆಗಾಗಿ ಕಾವೇರಿ ನೀರು ಸರಬರಾಜಾಗುವ ಬೆಂಗಳೂರು ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯನ್ನು ಕೊರೆಯಲು ಜಲಮಂಡಳಿ ಅವಕಾಶ ನೀಡಬಾರದೆಂದು ತಜ್ಞರು ಮುಂಜಾಗ್ರತಾ ಸಲಹೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link