ಚಿತ್ರದುರ್ಗ:
ಲೋಕಸಭಾ ಚುನಾವಣೆಯಲ್ಲಿ ದೃಷ್ಟಿ ವಿಶೇಷಚೇತನರಿಗೆ ಮತಗಟ್ಟೆಗಳತ್ತ ಸೆಳೆಯಲು ಚುನಾವಣಾ ಆಯೋಗ ಮುಂದಾಗಿದ್ದು, ಮತದಾನ ಜಾಗೃತಿಗಾಗಿ ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿರುವ ಜಾಗೃತಿ ಸಂದೇಶದ ಪತ್ರವನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸಾಂಕೇತಿಕವಾಗಿ ದೃಷ್ಟಿ ವಿಶೇಷ ಚೇತನರಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ವಿತರಣೆ ಮಾಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಎಲ್ಲ ಬಗೆಯ ಮತದಾರರಿಗೂ ನೈತಿಕ ಮತದಾನದ ಸಂದೇಶ ತಲುಪಿಸಲು ಜಿಲ್ಲಾ ಸ್ವೀಪ್ ಸಮಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಜಿಲ್ಲೆಯ ಎಲ್ಲ ದೃಷ್ಟಿ ವಿಶೇಷಚೇತನ ಮತದಾರರಿಗೂ ಮತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಮತ ಜಾಗೃತಿ ಸಂದೇಶವನ್ನು ಬೈಲ್ ಲಿಪಿಯಲ್ಲಿ ತಯಾರಿಸಿ, ದೃಷ್ಟಿ ವಿಶೇಷಚೇತನ ಮತದಾರರಿಗೆ ತಲುಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 450 ದೃಷ್ಟಿ ವಿಶೇಷ ಚೇತನ ಮತದಾರರನ್ನು ಈಗಾಗಲೆ ಗುರುತಿಸಲಾಗಿದ್ದು, ಈ ಎಲ್ಲ ಮತದಾರರಿಗೂ ಬ್ರೈಲ್ ಲಿಪಿಯಲ್ಲಿ ಸಿದ್ಧಪಡಿಸಿರುವ ಮತ ಜಾಗೃತಿ ಸಂದೇಶವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು
ವಿಕಲಚೇತನರಿಗೆ ಚುನಾವಣೆಯಲ್ಲಿ ವಿಶೇಷ ಆದ್ಯತೆ ನೀಡಿರುವ ಆಯೋಗ, ಈ ಬಾರಿ ವಿಕಲಚೇತನರಿಗೆ ಮತದಾನ ಮಾಡುವ ಸಲುವಾಗಿ ವಾಹನದ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು ಪ್ರಶಂಸೆಗೆ ಅರ್ಹವಾಗಿದೆ.
ದೃಷ್ಟಿಹೀನ ಮತದಾರರಿಗೆ ಮತದಾನದ ಮಹತ್ವ ಸಾರುವ ಸಂದೇಶ, ಮತದಾನ ದಿನಾಂಕ, ಚುನಾವಣಾ ಸಹಾಯವಾಣಿ, ಮತದಾನ ದಿನದಂದು ಅವರಿಗೆ ನೀಡಲಾಗುವ ಸೌಲಭ್ಯ ಸೇರಿದಂತೆ ಸಮಗ್ರ ಮಾಹಿತಿಯುಳ್ಳ ಸಂದೇಶವನ್ನು ಬೈಲ್ ಲಿಪಿಯಲ್ಲಿ ಸಿದ್ಧಪಡಿಸಿ, ದೃಷ್ಟಿ ವಿಶೇಷಚೇತನ ಮತದಾರರಿಗೆ ತಲುಪಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಅಂಧ ಮತದಾರರ ಉಪಯೋಗಕ್ಕಾಗಿ ಬ್ರೈಲ್ ಲಿಪಿಯಲ್ಲಿ ಕರಪತ್ರ, ಚುನಾವಣಾ ಕೈಪಿಡಿ ಹಾಗೂ ಪೋಸ್ಟರ್‍ಗಳನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ಒಟ್ಟಾರೆ ವಿಶೇಷ ಚೇತನರು ಹಾಗೂ ಎಲ್ಲ ಮತದಾರರೂ ತಪ್ಪದೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ ಅವರು ಮಾಹಿತಿ ನೀಡಿ, ವಿಕಲಚೇತನರನ್ನು ಒಳಗೊಳ್ಳುವ ಸುಗಮ ಮತದಾನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಿಕಲಚೇತನರಿಗೆ ಮತ ಕೇಂದ್ರಗಳಲ್ಲಿನ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಹೀಗಾಗಿ ಅಂಧ ಮತದಾರರ ಉಪಯೋಗಕ್ಕಾಗಿ ಬ್ರೈಲ್ ಲಿಪಿಯಲ್ಲಿಯೇ ಕರಪತ್ರ, ಕೈಪಿಡಿ ಹಾಗೂ ಪೋಸ್ಟರ್‍ಗಳನ್ನು ಚುನಾವಣಾ ಆಯೋಗದ ವತಿಯಿಂದ ಮುದ್ರಿಸಿ ನೀಡಲಾಗಿದೆ ಎಂದರು
ಈ ಕರಪತ್ರ, ಪೋಸ್ಟರ್‍ಗಳನ್ನು ಜಿಲ್ಲೆಯ ಎಲ್ಲ ಅಂಧ ಮತದಾರರಿಗೆ ಪ್ರತಿಯೊಂದು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಒಂದರಂತೆ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಮೂಲಕ ತಲುಪಿಸಲಾಗುವುದು. ಅಲ್ಲದೆ ಈ ಪೋಸ್ಟರ್‍ಗಳನ್ನು ಎಲ್ಲ ಮತಕೇಂದ್ರಗಳಲ್ಲಿಯೂ ಪ್ರದರ್ಶಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಅವರು ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಧ ಮತದಾರರಿಗೆ ಬ್ರೈಲ್ ಲಿಪಿಯ ಮತ ಜಾಗೃತಿ ಸಂದೇಶದ ಪತ್ರವನ್ನು ವಿತರಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ದೃಷ್ಟಿ ವಿಶೇಷ ಚೇತನ ಮತದಾರರು ಬ್ರೈಲ್ ಲಿಪಿಯ ಮತ ಜಾಗೃತಿ ಸಂದೇಶದ ಕರಪತ್ರಗಳನ್ನು ಇದೇ ಸಂದರ್ಭದಲ್ಲಿ ಸ್ವೀಕರಿಸಿ, ನೈತಿಕ ಮತದಾನ ಮಾಡುವುದಾಗಿ ಘೋಷಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
