ಬಿಆರ್‍ಸಿ ಕಚೇರಿಯ ಕಟ್ಟಡಕ್ಕೆ ಕಾಯಕಲ್ಪ..!!

ಹೊನ್ನಾಳಿ:

     ಶೈಕ್ಷಣಿಕ ಚಟುವಟಿಕೆಗಳಿಗೆ ಇಂಬು ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಪಟ್ಟಣದ ಟಿ.ಬಿ. ವೃತ್ತದ ಬಿಆರ್‍ಸಿ ಕಚೇರಿಯ ಕಟ್ಟಡ ನವೀಕರಣಗೊಂಡಿದ್ದು, ಶಿಕ್ಷಣ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಬಿಆರ್‍ಸಿ ಕಚೇರಿಯ ಕಟ್ಟಡಕ್ಕೆ ಕಾಯಕಲ್ಪ ನೀಡಿ, ದಾರಿಹೋಕರು ಒಂದು ಬಾರಿ ಕಟ್ಟಡದ ಕಡೆಗೆ ಕಣ್ಣು ಹಾಯಿಸುವಂತೆ ಮಾಡಿದ್ದಾರೆ ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್.

    ಈ ಹಿಂದೆ ಬಿಆರ್‍ಸಿ ಕಟ್ಟಡ ಸುಣ್ಣ, ಬಣ್ಣ ಹಾಗೂ ಮೂಲಭೂತ ಸೌಲಭ್ಯ ಇಲ್ಲದೇ ದುಸ್ಥಿತಿಯಲ್ಲಿತ್ತು. ಕತ್ತಿಗೆ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಎಸ್. ಉಮಾಶಂಕರ್ ಬಿಆರ್‍ಸಿ ಕೇಂದ್ರದ ಅಧಿಕಾರಿಯಾಗಿ ಬಂದ ನಂತರ ಕಟ್ಟಡದ ಪುನರುಜ್ಜೀವನಕ್ಕೆ ರೂಪುರೇಷೆ ಹಾಕಿಕೊಂಡು ಕಾರ್ಯೋನ್ಮುಖರಾದರು.

     ಸರಕಾರದಿಂದ ಅನುದಾನವಿಲ್ಲದೇ ಸುಣ್ಣ, ಬಣ್ಣ, ಗೋಡೆ ಬರಹ, ಫ್ಯಾನ್‍ಗಳು, ಟ್ಯೂಬ್‍ಲೈಟ್‍ಗಳು, ನೆಲಹಾಸು ಮುಂತಾದವುಗಳಿಗೆ ಬೇಕಾದ ಹಣ ಹೊಂದಿಸುವುದು ಹೇಗೆ ಎಂದು ಚಿಂತಿಸಿ, ದೇಣಿಗೆ ನೀಡಲು ಸರಕಾರಿ ಪ್ರಾಥಮಿಕ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಾಟ್ಸ್‍ಆಪ್ ಮೂಲಕ ಮನವಿ ಮಾಡಿದರು.

      “ಕೋರಿದ ಕೈ ಸ್ವಚ್ಛವಾಗಿದ್ದರೆ ಕೊಡುಗೈ ದಾನಿಗಳಿಗೆ ಬರ ಇಲ್ಲ” ಎನ್ನುವಂತೆ ಶಿಕ್ಷಕರು ನಾ ಮುಂದು, ತಾ ಮುಂದು ಎಂದು ನೂರು ರೂ.ಗಳಿಂದ ಸಾವಿರ ರೂ.ಗಳವರೆಗೂ ದೇಣಿಗೆ ನೀಡಿದರು. ಈ ಹಣದಿಂದ ಬಿಆರ್‍ಸಿ ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿ, ಶಿಕ್ಷಣಕ್ಕೆ ಪೂರಕವಾದ ಉಕ್ತಿಗಳಾದ “ಬಾಲ ಕಾರ್ಮಿಕ ಪದ್ಧತಿ ತೊಲಗಿಸಿ ಶಿಕ್ಷಣ ಆರಂಭಿಸಿ”, “ಶಿಕ್ಷಣವೇ ಶಕ್ತಿ” ಸೇರಿದಂತೆ ಹಲವಾರು ಚಿತ್ತಾಕರ್ಷಕ ಚಿತ್ರ, ಬರಹಗಳನ್ನು ಬರೆಸಲಾಯಿತು.

      ಕಟ್ಟಡ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಶಿಕ್ಷಣ ಇಲಾಖೆಯ ವರ್ಗೀಕರಣದ ಮಾಹಿತಿ ಬರೆಸಲಾಗಿದೆ. ಇದರಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮಂತ್ರಿಯಿಂದ ಪ್ರಾರಂಭವಾಗಿ ಕೊನೆಯ ಹಂತದ ಪ್ರಾಥಮಿಕ ಶಾಲಾ ಶಿಕ್ಷಣದವರೆಗೆ ಮಾಹಿತಿ ಇದೆ. ಈ ಬರವಣಿಗೆಗೆ ತಾಲೂಕಿನ ಚಿತ್ರಕಲಾ ಶಿಕ್ಷಕರನ್ನು ಬಿಡುವಿನ ವೇಳೆಯಲ್ಲಿ ಬಳಸಿಕೊಳ್ಳಲಾಗಿದೆ.

      ಒಳಗೋಡೆಗಳ ಮೇಲೆ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿವರ ಮತ್ತು ಮಕ್ಕಳ ಸಂಖ್ಯೆಯನ್ನು ಬರೆಸುವ ಮೂಲಕ ತಾಲೂಕಿನ ಶಾಲೆಗಳ ಸಮಗ್ರ ಚಿತ್ರಣ ಲಭಿಸುವಂತೆ ನಿಗಾವಹಿಸಲಾಗಿದೆ. ಮಹಾತ್ಮರು, ದಾರ್ಶನಿಕರು, ಶಿಕ್ಷಣ ತಜ್ಞರ ಚಿತ್ರಗಳನ್ನು ಬರೆಸಲಾಗಿದೆ. ಕಚೇರಿಯಲ್ಲಿ ನೀರಿನ ವ್ಯವಸ್ಥೆ, ಫ್ಯಾನ್, ಟ್ಯೂಬ್‍ಲೈಟ್‍ಗಳ ವ್ಯವಸ್ಥೆ ಮಾಡಿರುವುದು ಪ್ರಶಂಸನೀಯವಾಗಿದೆ.

      ಈ ಎಲ್ಲಾ ಕೆಲಸ ಕಾರ್ಯಗಳಿಗೆ ಖರ್ಚಾದ ಹಣ ಸುಮಾರು 1.70 ಲಕ್ಷ ರೂ.ಗಳಾಗಿದೆ. ತಾಲೂಕಿನ ಶಿಕ್ಷಕರು, ಶಾಲೆಗಳು ಕೈಜೋಡಿಸಿದ್ದರಿಂದ ಬಿಆರ್‍ಸಿ ಕಚೇರಿ ಈಗ ಒಂದು ಸುಂದರ ಕಚೇರಿಯಾಗಿ ಮಾರ್ಪಟ್ಟಿದೆ. ನವೀಕೃತ ಬಿಆರ್‍ಸಿ ಕಚೇರಿಯ ಲೋಕಾರ್ಪಣೆ ಸಮಾರಂಭ ಏ.5ರಂದು ನಡೆಯಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link