ಚಿತ್ರದುರ್ಗ:
ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ.ಗೆದ್ದು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಬದಲಾವಣೆ ಮಾಡುತ್ತಾರೆಂದು ಕಾಂಗ್ರೆಸ್‍ನವರು ಅಪಪ್ರಚಾರ ಮಾಡುತ್ತಿರುವುದಕ್ಕೆ ಕಿವಿಗೊಡದೆ ಬಿಜೆಪಿ.ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರಮೋದಿರವರನ್ನು ಮತ್ತೆ ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ಬಿಜೆಪಿ. ಎಸ್.ಸಿ.ಮೋರ್ಚ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಲ್ಲಿ ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮನವಿ ಮಾಡಿದರು.
ಬಿಜೆಪಿ.ಕಚೇರಿಯಲ್ಲಿ ಬುಧವಾರ ನಡೆದ ಎಸ್.ಸಿ.ಮೋರ್ಚ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ.ಎಸ್.ನವೀನ್ ದೇಶದ ಪ್ರಧಾನಿ ನರೇಂದ್ರಮೋದಿ ದಲಿತರ ಮೀಸಲಾತಿಯನ್ನು ಕಿತ್ತು ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿಯನ್ನು ನೀಡಿದ್ದಾರೆಂದು ಕಾಂಗ್ರೆಸ್‍ನವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಮೋದಿರವರು ದಲಿತರ ಮೀಸಲಾತಿಗೆ ಕೈಹಾಕದೆ ಪ್ರತ್ಯೇಕವಾಗಿ ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿಯನ್ನು ನೀಡಿದ್ದಾರೆಂದು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ತಿಳಿಸಿ ಈ ಬಾರಿಯ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ.ಅಭ್ಯರ್ಥಿಯನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಬಿಜೆಪಿ.ಸೋತಿರುವುದರಿಂದ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಎಸ್.ಸಿ.ಮೋರ್ಚ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪರಿಶಿಷ್ಟ ಜಾತಿಯ ಮತಗಳನ್ನು ಬಿಜೆಪಿ.ಮತಗಳನ್ನಾಗಿ ಪರಿವರ್ತಿಸಿ ಸಮರ್ಥ ನಾಯಕನನ್ನು ದೆಹಲಿಗೆ ಕಳಿಸಿಕೊಡಿ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಲಕ್ಷ ಪರಿಶಿಷ್ಟ ಜಾತಿಯ ಮತಗಳಿವೆ. ಪ್ರಧಾನಿ ನರೇಂದ್ರಮೋದಿರವರನ್ನು ಸೋಲಿಸಲು ಎಲ್ಲಾ ಪಕ್ಷಗಳು ಘಟಬಂಧನ್ ಹೆಸರಿನಲ್ಲಿ ಒಂದಾಗುತ್ತಿವೆ.
ಆದರೆ ಮೋದಿರವರು ಕಾರ್ಯಕರ್ತರ ಮೇಲೆ ವಿಶ್ವಾಸವಿಟ್ಟು ಚುನಾವಣೆಗೆ ತಯಾರಾಗುತ್ತಿದ್ದಾರೆ. ಕಳೆದ ಅರವತ್ತು ವರ್ಷಗಳಲ್ಲಿ ಯಾವ ಬದಲಾವಣೆಯನ್ನು ಕಾಣದ ಭಾರತದಲ್ಲಿ ಕಳೆದ ನಾಲ್ಕುವರೆ ವರ್ಷಗಳಲ್ಲಿ ಅನೇಕ ಮಹತ್ತರ ಯೋಜನೆಗಳನ್ನು ಪ್ರಧಾನಿ ನರೇಂದ್ರಮೋದಿ ಅನುಷ್ಟಾನಕ್ಕೆ ತಂದಿದ್ದಾರೆ.ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿ ತುಳಿತಕ್ಕೊಳಗಾಗಿರುವ ಧಮನಿತರು, ದಲಿತರು, ಹಿಂದುಳಿದವರನ್ನು ಮೇಲಕ್ಕೆತ್ತುವ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಕನಸನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಅನುಷ್ಟಾನಕ್ಕೆ ತಂದವರು ನರೇಂದ್ರಮೋದಿರವರು ಎನ್ನುವುದನ್ನು ಚುನಾವಣೆಯಲ್ಲಿ ದಲಿತ ಮತದಾರರಿಗೆ ಮುಟ್ಟಿಸುವ ಕೆಲಸವನ್ನು ಎಸ್.ಸಿ.ಮೋರ್ಚ ಪದಾಧಿಕಾರಿಗಳು ಮಾಡಬೇಕಿದೆ ಎಂದು ಸೂಚಿಸಿದರು.
ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಎಸ್.ಸಿ.ಗಳನ್ನು ಕೇವಲ ಮತಗಳಿಗಷ್ಟೆ ಸೀಮಿತಗೊಳಿಸಿದೆ. ಅದೇ ಕೇಂದ್ರ ಬಿಜೆಪಿ.ಸರ್ಕಾರ ಕಳೆದ ನಾಲ್ಕುವರೆ ವರ್ಷಗಳಲ್ಲಿ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿಸಿ ಮಧ್ಯವರ್ತಿಗಳ, ಅಧಿಕಾರಿಗಳ ಭ್ರಷ್ಟಾಚಾರವನ್ನು ತಪ್ಪಿಸಿದೆ. ದೇಶದಲ್ಲಿಯೇ ಅತಿ ಹೆಚ್ಚು ದಲಿತ ಸಂಸದರು ಹಾಗೂ ದಲಿತ ಶಾಸಕರುಗಳನ್ನು ಹೊಂದಿರುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ.ಮಾತ್ರ ಎನ್ನುವುದನ್ನು ವಿರೋಧಿಗಳು ಮೊದಲು ಅರ್ಥಮಾಡಿಕೊಳ್ಳಲಿ.
ಬಿಜೆಪಿ.ಮುಸ್ಲಿಂ ವಿರೋಧಿಗಳು ಎಂದು ಕಾಂಗ್ರೆಸ್‍ನವರು ಬೊಬ್ಬೆ ಹೊಡೆಯುತ್ತಿದ್ದಾರೆ. ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಬ್ದುಲ್ ಕಲಾಂಗೆ ನೀಡಿದ ಬಿಜೆಪಿ. ಈಗ ರಾಮನಾಥ್ ಕೋವಿಂದರ್‍ನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಅಂಬೇಡ್ಕರ್ ಓದಿದ, ಸ್ಥಳ, ಸಂವಿಧಾನ ಬರೆದ ಮನೆ, ಲಂಡನ್‍ನಲ್ಲಿ ಶಿಕ್ಷಣ ಪಡೆದ ಮನೆ, ಅಂತ್ಯಸಂಸ್ಕಾರದ ಸ್ಥಳ, ಲೈಬ್ರರಿಯನ್ನು ಪಂಚತೀರ್ಥ ಸ್ಥಳವನ್ನಾಗಿ ಮಾಡಿ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿರುವ ಬಿಜೆಪಿ. ಎಂದಿಗೂ ದಲಿತ, ಮುಸಲ್ಮಾನರ ವಿರೋಧಿಯಲ್ಲ ಎನ್ನುವುದನ್ನು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಾರಿ ಸಾರಿ ಹೇಳಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರಮೋದಿ ವಿರುದ್ದ ಕಾಂಗ್ರೆಸ್‍ನವರು ದಲಿತ ಸಂಘಟನೆಗಳನ್ನು ಎತ್ತಿ ಕಟ್ಟುತ್ತಿದ್ದಾರೆ. ನರೇಂದ್ರಮೋದಿರವರ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಬಿಜೆಪಿ.ಗೆಲ್ಲಬೇಕು. ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ.ಗೆ ಮತ ಹಾಕಿದ್ದರಿಂದಲೇ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ.ಗೆಲ್ಲಲು ಸಾಧ್ಯವಾಯಿತು. ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ.ಅಭ್ಯರ್ಥಿಯನ್ನು ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲಿಸಿ ದೇಶದ ಅಭಿವೃದ್ದಿಗೆ ಕೈಜೋಡಿಸಿ ಎಂದು ವಿನಂತಿಸಿದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಲಿ ಗೆಲ್ಲಿಸಿಕೊಂಡು ಮತ್ತೊಮ್ಮೆ ನರೇಂದ್ರಮೋದಿರವನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ ಎಂದು ಬಿಜೆಪಿ. ಎಸ್.ಸಿ.ಮೋರ್ಚ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಹೆದ್ದಾರಿ ಅಗಲೀಕರಣವಾಗುತ್ತಿರುವುದರಿಂದ ಸಾವಿರಾರು ನಿರುದ್ಯೋಗಿಗಳಿಗೆ ಬಿಜೆಪಿ ಕೆಲಸ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್.ಸಮ್ಮಿಶ್ರ ಸರ್ಕಾರವಿರುವುದರಿಂದ ಬಿಜೆಪಿ.ಯೋಜನೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರದಲ್ಲಿದ್ದರೆ ಸಾಕಷ್ಟು ಅಭಿವೃದ್ದಿಗಳಾಗುತ್ತದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಇನ್ನು ಸಮ್ಮಿಶ್ರ ಸರ್ಕಾರಕ್ಕೆ ಅಗುತ್ತಿಲ್ಲ. ತ್ವರಿತಗತಿಯಲ್ಲಿ ಜಾರಿಯಾಗಬೇಕಾದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಬಿಜೆಪಿ.ಯನ್ನು ಗೆಲ್ಲಿಸಬೇಕಾಗಿದೆ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಬಿಜೆಪಿ.ನಗರ ಮಂಡಲ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡುತ್ತ ಎರಡು ಬಾರಿ ಅಂಬೇಡ್ಕರ್‍ರವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‍ನವರು ಅಂಬೇಡ್ಕರ್ ಫೋಟೋ ಇಟ್ಟುಕೊಂಡು ದಲಿತರ ಮತಗಳನ್ನು ಕಬಳಿಸುವ ಕುತಂತ್ರ ನಡೆಸುತ್ತಿರುವುದರ ವಿರುದ್ದ ಎಸ್.ಸಿ.ಮತದಾರರು ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಇನ್ನು ದಲಿತರಿಗೆ ಮೂಲಸೌಲಭ್ಯ ನೀಡುವಲ್ಲಿ ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲರಿಗೂ ಸಮಾನತೆ ಒದಗಿಸುತ್ತಿರುವ ಪ್ರಧಾನಿ ನರೇಂದ್ರಮೋದಿರವರನ್ನು ಮತ್ತೆ ದೇಶದ ಪ್ರಧಾನಿಯನ್ನಾಗಿ ಮಾಡಿದರೆ ದೇಶದಲ್ಲಿ ನಿರುದ್ಯೋಗ ಸಮಸ್ಯೆಯೇ ಇರುವುದಿಲ್ಲ ಎಂದು ಹೇಳಿದರು.
ರಾಹುಲ್‍ಗಾಂಧಿ ಜೋಕರ್ ಇದ್ದಂತೆ ಕಾಂಗ್ರೆಸ್ ಮಾಡಿದ ಸಾಲವನ್ನು ಬಿಜೆಪಿ.ತೀರಿಸುತ್ತಿದೆ. ಚಳ್ಳಕೆರೆಯಲ್ಲಿ ಡಿ.ಆರ್.ಡಿ.ಓ. ತಂದಿರುವುದರಿಂದ ವಿಶ್ವದಲ್ಲಿಯೇ ಭಾರತ ನಂ.1 ನೇ ಸ್ಥಾನದಲ್ಲಿದೆ. ಬೇರೆ ಜಿಲ್ಲೆಯಿಂದ ಬಂದು ಇಲ್ಲಿ ಚುನಾವಣೆಗೆ ನಿಲ್ಲುವವರನ್ನು ಸೋಲಿಸಿ ಉತ್ತಮರನ್ನು ಆರಿಸಿ ಪಾರ್ಲಿಮೆಂಟ್‍ಗೆ ಕಳಿಸಬೇಕಾಗಿರುವುದರಿಂದ ಬಿಜೆಪಿ.ಎಸ್.ಮೋರ್ಚ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯರಿತು ಕೆಲಸ ಮಾಡಬೇಕು ಎಂದರು.
ಬಿಜೆಪಿ. ಎಸ್.ಸಿ.ಮೋರ್ಚ ಜಿಲ್ಲಾಧ್ಯಕ್ಷ ಮಾಜಿ ಶಾಸಕ ರಾಮಯ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಂಗಪ್ಪ, ವಿಸ್ತಾರಕ ವೀರೇಂದ್ರಪಾಟೀಲ್, ಪ್ರದೀಪ್‍ಕುಮಾರ್, ಜಯಣ್ಣ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.ಜಿಲ್ಲೆಯ ಆರು ತಾಲೂಕಿನ ಪದಾಧಿಕಾರಿಗಳು ಹಾಜರಿದ್ದರು.