ನಿಶ್ಚಿತ ಪೆನ್ಷನ್ ಸ್ಕೀಂಗಾಗಿ ನೌಕರರ ಆಗ್ರಹ

ದಾವಣಗೆರೆ:

      ನೂತನ ಪಿಂಚಣಿ(ಎನ್‍ಪಿಎಸ್) ಯೋಜನೆಯನ್ನು ರದ್ದುಪಡಿಸಿ, ಹಿಂದಿನ ನಿಶ್ಚಿತ ಪೆನ್ಷನ್ ಸ್ಕೀಂ ಜಾರಿಗೆ ತರಬೇಕೆಂದು ಆಗ್ರಹಿಸಿ, ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ನೌಕರರು “ರಕ್ತ ಕೊಟ್ಟೆವು ಪಿಂಚಣಿ ಬಿಡೆವು” ಘೋಷಣೆಯಡಿಯಲ್ಲಿ ನಗರದಲ್ಲಿ ಬುಧವಾರ ರಕ್ತದಾನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

       ನಗರದ ಪ್ರೌಢಶಾಲಾ ಮೈದಾನದಲ್ಲಿ ಜಮಾಯಿಸಿದ ರಾಜ್ಯ ಸರ್ಕಾರಿ ನೌಕರರು “ರಕ್ತ ಕೊಟ್ಟೆವು, ಪಿಂಚಣಿ ಬಿಡೆವು” ಎಂಬ ಘೋಷಣೆಯೊಂದಿಗೆ ರಾಜ್ಯ ಸರ್ಕಾರದ ನೂತನ ಪಿಂಚಣಿ ಯೋಜನೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

     ನೌಕರರ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಚಾಲನೆ ನೀಡಿದರು. ಬಳಿಕ ಪ್ರೌಢ ಶಾಲಾ ಮೈದಾನದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಿಬಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ತಲಿಪಿದರು ನಂತರ ಡಿಸಿ ಕಚೇರಿ ಎದುರು ಧರಣಿ ನಡೆಸಿ, ಸುಮಾರು 177 ಜನ ನೌಕರರು ರಕ್ತದಾನ ಮಾಡಿ, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಹೆಚ್.ಆರ್, ಸರ್ಕಾರಿ ನೂತನವಾಗಿ ಆರಂಭಿಸಿರುವ ಎನ್‍ಪಿಎಸ್ ಯೋಜನೆಯು ಷೇರು ಮಾರುಕಟ್ಟೆಯನ್ನು ಆಧರಿಸಿದೆ. ಆದ್ದರಿಂದ ನೌಕರರಿಗೆ ನಿವೃತ್ತಿಯ ನಂತರ ನಿಗದಿತ ಪಿಂಚಣಿ ಸಿಗುವ ಯಾವುದೇ ಭರವಸೆಗಳಿಲ್ಲ. ಎನ್‍ಪಿಎಸ್ ನೌಕರರು ಮರಣ ಹೊಂದಿದ ಸಂದರ್ಭ ಆರ್ಥಿಕ ಭದ್ರತೆ ನೀಡುವ ಯಾವುದೇ ಅಂಶವನ್ನು ಈ ಕಾಯ್ದೆ ಒಳಗೊಂಡಿಲ್ಲ. ಹೀಗಾಗಿ ನೌಕರರಿಗೆ ಅಭದ್ರತೆ ಕಾಡುತ್ತಿದೆ ಎಂದು ಅಲವತ್ತುಕೊಂಡರು.

       ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರ ವೇತನದ ಶೇ. 10ರಷ್ಟು ವಂತಿಕೆ ನೀಡಬೇಕಾಗುತ್ತದೆ. ಇದರಿಂದ ಒಟ್ಟು ಪಡೆಯಬೇಕಾದ ವೇತನ ಕಡಿಮೆಯಾಗುತ್ತದೆ. ಇದು ರಾಜ್ಯ ಸರ್ಕಾರಿ ನೌಕರರ ಮಧ್ಯೆಯೇ ತಾರತಮ್ಯ ಮಾಡಲಾಗುತ್ತಿದೆ. ಇದು ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಗೆ ವಿರುದ್ಧವಾಗಿದೆ. ಎನ್‍ಪಿಎಸ್ ಯೋಜನೆಯಲ್ಲಿ ಸಾಮಾನ್ಯ ಭವಿಷ್ಯ ನಿಧಿಯಲ್ಲಿದ್ದಂತೆ. ನೌಕರರು ತಮ್ಮ ಸಾಮಾಜಿಕ ಅಗತ್ಯಗಳ ಅನುಗುಣವಾಗಿ ಹಣ ಹಿಂಪಡೆಯಲು ಅವಕಾಶವಿಲ್ಲ ಎಂದು ಆರೋಪಿಸಿದರು.

         ನಿಶ್ಚಿತ ಪೆನ್ಷನ್ ಪದ್ಧತಿಯಲ್ಲಿ ಸರ್ಕಾರವು ಬೆಲೆ ಏರಿಕೆ ಆಧರಿಸಿ ನೀಡುವ ತುಟ್ಟಿಭತ್ಯೆಯು ನಿವೃತ್ತಿ ಹೊಂದುವ ಎನ್‍ಪಿಎಸ್ ನೌಕರರಿಗೆ ಅನ್ವಯಿಸಿಲ್ಲ. ವೇತನ ಆಯೋಗವು ಎನ್‍ಪಿಎಸ್ ಅಡಿಯಲ್ಲಿ ಪೆನ್ಷನ್ ಪರಿಷ್ಕರಿಸುವ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಭರವಸೆ ನೀಡಿಲ್ಲ. ನೌಕರರು ಮತ್ತು ಸರ್ಕಾರ ತಲಾ ಶೇ.10 ರಷ್ಟು ವಂತಿಗೆ ನೀಡಿದರೂ ನೌಕರರನ್ನು ನಿವೃತ್ತಿ ಸಮಯದಲ್ಲಿ ಪಡೆಯುವ ವೇತನದ ಶೇ. 50ರಷ್ಟು ಪೆನ್ಷನ್ ಪಡೆಯುವ ಬಗ್ಗೆ ಕಾಯ್ದೆಯಲ್ಲಿ ಯಾವುದೇ ಭರವಸೆ ಇಲ್ಲ. ಆದ್ದರಿಂದ ಈ ಅವೈಜ್ಞಾನಿಕ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೇಯ ನಿಶ್ಚಿತ ಪೆನ್ಷನ್ ಸ್ಕೀಂ ಮುಂದುವರೆಸಬೇಕೆಂದು ಆಗ್ರಹಿಸಿದರು.

       ರಾಜ್ಯ ಸರ್ಕಾರಿ ನೌಕರರ ಸಂಘ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಸಂಘ, ನೌಕರರ ಒಕ್ಕೂಟ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪದವೀಧರರ ಸಂಘ, ಎಜಿಟಿ ಶಿಕ್ಷಕರ ಸಂಘ, ವಾಹನ ಚಾಲಕ ಹಾಗೂ ಗ್ರೂಪ್ ಡಿ ಸಂಘ, ಬೆಸ್ಕಾಂ ನೌಕರರ ಒಕ್ಕೂಟ, ಪಾಲಿಕೆ ನೌಕರರ ಸಂಘದ ಕಾರ್ಯಕರ್ತರು ಪ್ರಭಟನೆಗೆಗೆ ಬೆಂಬಲ ಸೂಚಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.

      ಪ್ರತಿಭಟನೆಯಲ್ಲಿ ಹಾಲೇಶಪ್ಪ, ಕೆ.ಎಸ್.ಗೋವಿಂದರಾಜ್, ನಿರಂಜನ್, ಸಿದ್ದಪ್ಪ ಸಂಗಣ್ಣ, ಮಂಜಪ್ಪ, ಜೆ.ಬಿ.ಶಿವಕುಮಾರ್, ಶಿವರಾಜ್ ಪಾಟೀಲ್, ಪರಶುರಾಮ್, ಪೀರು ನಾಯ್ಕ್, ನಾಗರಾಜ್, ಬಿ.ಆರ್.ಶಿವಕುಮಾರ್, ನಾಗರಾಜ್ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap