ಬೆಂಗಳೂರು
ತಂಗಿಯನ್ನು ಚುಡಾಯಿಸಿದವನಿಗೆ ಹೊಡೆದು ಬುದ್ಧಿ ಹೇಳಿದ ಅಣ್ಣನನ್ನು ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆಗೈದ ದಂಪತಿ ಸೇರಿ 6 ಮಂದಿ ಆರೋಪಿಗಳು ಬ್ಯಾಟರಾನಪುರ ಪೊಲೀಸರ ಅತಿಥಿಯಾಗಿದ್ದಾರೆ.
ಮಾಗಡಿ ರಸ್ತೆಯ ದೊಡ್ಡಗೊಲ್ಲರಹಟ್ಟಿಯ ಮುರುಗೇಶ್ ಅಲಿಯಾಸ್ ಅಪ್ಸರ್ (33), ಆತನ ಪತ್ನಿ ಸುಧಾಮನಗರದ ಶಶಿಕಲಾ (32), ಕೆಜಿಎಫ್‍ನ ಶ್ರೀನಗರದ ಹರೀಶ್ ಸೂದನ್ ಅಲಿಯಾಸ್ ಹರೀಶ (28), ಲೂರ್ದು ಲೀನಸ್ ಅಲಿಯಾಸ್ ಲೂರ್ದು (27), ಪಂತರಪಾಳ್ಯದ ವಿಜಯಕುಮಾರ್ ಅಲಿಯಾಸ್ ಕುಳಂದೈವೇಲು (22), ಸಚಿನ್ (22) ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಮುಖ ಆರೋಪಿ ಮುರುಗೇಶ್ ಪಂತರಪಾಳ್ಯದ ಮಂಜುನಾಥ ಅಲಿಯಾಸ್ ರೋಮಿಯೊನ ತಂಗಿಯನ್ನು ಚುಡಾಯಿಸಿದ್ದನು. ಈ ವಿಷಯ ತಿಳಿದ ರೋಮಿಯೊ ಗಲಾಟೆ ಮಾಡಿ ಮುರುಗೇಶ್‍ಗೆ ಹೊಡೆದು ಬುದ್ಧಿ ಹೇಳಿದ್ದನು
ಇದೇ ದ್ವೇಷ ಸಾಧಿಸಿ ಪತ್ನಿ ಶಶಿಕಲಾ ಸಹಕಾರದೊಂದಿಗೆ ಇತರ ಆರೋಪಿಗಳ ಜತೆಸೇರಿ ಸಂಚು ರೂಪಿಸಿ ಕಳೆದ ನ. 22 ರಂದು 11.30ರ ವೇಳೆ ನಾಯಂಡನಹಳ್ಳಿಯ ಮಾವ ರಾಜ ಅವರ ಪಂತರಪಾಳ್ಯದ ಅಂಬೇಡ್ಕರ್ ಕ್ವಾಟ್ರಸ್‍ನ ಮನೆಯಲ್ಲಿ ಮಲಗಿದ್ದ ರೋಮಿಯೊನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾನಪುರ ಪೊಲೀಸ್ ಇನ್ಸ್‍ಪೆಕ್ಟರ್ ವೀರೇಂದ್ರ ಪ್ರಸಾದ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
