ಬೆಂಗಳೂರು
ತಂಗಿಯನ್ನು ಬಸ್ಸಿಗೆ ಕಳುಹಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದ ಅಣ್ಣನೊಬ್ಬ ವಾಪಸ್ ಯು ಟರ್ನ್ ತೆಗೆದುಕೊಂಡು ರಸ್ತೆ ದಾಟುವಾಗ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಭಾನುವಾರ ಬೆಳಿಗ್ಗೆ ನಗರದ ಹೊರವಲಯದ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾನುಕುಂಟೆಯ ಜಾಲಿಗೆಯ ನಿತೀಶ್(18)ಎಂದು ಮೃತರನ್ನು ಗುರುತಿಸಲಾಗಿದೆ, ದೊಡ್ಡಬಳ್ಳಾಪುರದ ಅರದೇಶನಹಳ್ಳಿ ಗೇಟ್ ಬಳಿ ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಜಾಲಿಗೆ ನಿವಾಸಿ ನಿತೀಶ್ ತನ್ನ ತಂಗಿಯನ್ನು ಬಸ್ಸಿಗೆ ಬಿಡಲೆಂದು ಬೈಕ್‍ನಲ್ಲಿ ಕರೆದುಕೊಂಡು ಬಂದಿದ್ದನು.
ಬಸ್ ನಿಲ್ದಾಣದಲ್ಲಿ ತಂಗಿಯನ್ನು ಬಿಟ್ಟು ವಾಪಸ್ ರಸ್ತೆ ದಾಟುವಾಗ ಗೌರಿಬಿದನೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಕೆಳಗೆ ಸಿಲುಕಿದ್ದಾನೆ. ಬೈಕ್ ಸಮೇತ ನಿತೀಶ್ ಬಸ್ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿತೀಶ್ ಮೃತಪಟ್ಟಿದ್ದಾನೆ.
ಈ ಸಂಬಂಧ ಕೆಎಸ್‍ಆರ್‍ಟಿಸಿ ಬಸ್ ಚಾಲಕನ್ನು ಬಂಧಿಸಿರುವ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ