ಶಿರಾ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಣ್ಣೆ ಸೀಗೆಕಾಯಿಯಂತೆ ಒಬ್ಬರ ಮೇಲೊಬ್ಬರು ಕಟು ಟೀಕೆಯ ಬಾಣಗಳನ್ನು ಬಿಡುತ್ತಾ ಅಬ್ಬರದ ಚುನಾವಣೆ ಮಾಡಿ ಹಾವು-ಮುಂಗುಸಿಯಂತಾಗಿದ್ದ ಹಾಲಿ ಶಾಸಕ ಬಿ.ಸತ್ಯನಾರಾಯಣ್ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರಸ್ಪರ ಅಕ್ಕಪಕ್ಕದಲ್ಲಿಯೇ ಕೂತು ಜಂಟಿ ಸುದ್ದಿಗೋಷ್ಠಿ ನಡೆಸಿ ಮೈತ್ರಿ ಪಕ್ಷದ ಅಭ್ಯರ್ಥಿಯ ಪರ ಮತ ಯಾಚನೆಗೆ ಮುಂದಾದ ಅಪರೂಪದ ಪ್ರಸಂಗ ಶಿರಾದಲ್ಲಿ ಮಂಗಳವಾರ ನಡೆಯಿತು.
ಹೌದು, ಶಾಸಕ ಬಿ.ಸತ್ಯನಾರಾಯಣ್ ಹಾಗೂ ಟಿ.ಬಿ.ಜಯಚಂದ್ರ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳಲ್ಲಿ ಹಾಗೂ ಚುನಾವಣಾ ಸಮರಗಳಲ್ಲಿ ಒಬ್ಬರನ್ನೊಬ್ಬರು ಟೀಕಾಸ್ತ್ರಗಳ ಛೂ ಬಾಣಗಳನ್ನು ಬಿಡುತ್ತಾ ಬಂದಿದ್ದರೇ ಹೊರತು ಪರಸ್ಪರ ಕೂತು ಮಾತನಾಡಿದ ನಿದರ್ಶನಗಳೇ ಅಪರೂಪವಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಸಮ್ಮಿಶ್ರ ಸರ್ಕಾರದ ನಂತರವೂ ಹಾಲಿ ಮಾಜಿಗಳಿಬ್ಬರೂ ಒಂದು ಕಡೆ ಸೇರಿದ್ದ ನಿದರ್ಶನಗಳೂ ಇರಲಿಲ್ಲವಾದರೂ, ಉಭಯ ಪಕ್ಷಗಳ ವರಿಷ್ಠರ ತೀರ್ಮಾನ ಈ ಇಬ್ಬರನ್ನೂ ಒಂದು ಕಡೆ ಕಟ್ಟಿ ಹಾಕುವಂತೆ ಮಾಡಿಬಿಟ್ಟಿದೆ. ರಾಜ್ಯದಲ್ಲಿ ಬಿ.ಜೆ.ಪಿ. ಪಕ್ಷವನ್ನು ಕಟ್ಟಿ ಹಾಕಲು ಉಭಯ ಪಕ್ಷಗಳು ಹೆಣೆದಿರುವ ತಂತ್ರಗಾರಿಕೆ ಹಾಗೂ ಸ್ಪಷ್ಠ ತೀರ್ಮಾನಗಳಿಗೆ ಹಾಲಿ-ಮಾಜಿಗಳಿಬ್ಬರೂ ಒಂದೆಡೆ ಸೇರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಜೆ.ಡಿ.ಎಸ್. ಕಾರ್ಯಕರ್ತರ ಸಭೆ ನಡೆದಾಗ ಆ ಸಭೆಯಲ್ಲಿ ಉಭಯ ಪಕ್ಷಗಳ ಒಮ್ಮತದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಲ ಪ್ರಮುಖರು ಸಮಾರಂಭದಲ್ಲಿ ಹಾಜರಿದ್ದು, ಅಭ್ಯರ್ಥಿಯ ಪರ ಪ್ರಚಾರ ಕೈಗೊಳ್ಳುವಂತೆ ರಣ ಕಹಳೆ ಊದಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತ್ರ ಈ
ಜೆ.ಡಿ.ಎಸ್. ಸಭೆಗೆ ಗೈರಾಗಿದ್ದರು…!
ಅತ್ತ ಮಧ್ಯಾಹ್ನ 3 ಘಂಟೆಗೆ ಟಿ.ಬಿ.ಜೆ. ನಿವಾಸದಲ್ಲಿ ಮಾಜಿ ಸಚಿವ ಜಯಚಂದ್ರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆದಾಗ ಮಾಜಿ ಸಚಿವ ಆಂಜನೇಯ, ಜಯಚಂದ್ರ, ಚಿತ್ರದುರ್ಗ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಯಶೋಧರ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಆದರೆ ಈ ಸಭೆಗೆ ಬಿ.ಸತ್ಯನಾರಾಯಣ್ ಗೈರಾಗಿದ್ದರು….!.
ಚಿತ್ರದುರ್ಗ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಒಬ್ಬರೇ ಅಭ್ಯರ್ಥಿ ಕಣದಲ್ಲಿದ್ದರೂ ಈ ಎರಡೂ ಪಕ್ಷಗಳು ನಡೆಸಿದ ಪ್ರತ್ಯೇಕ ಕಾರ್ಯಕರ್ತರ ಸಭೆ ಅವರದೇ ಪಕ್ಷದ ಕಾರ್ಯಕರ್ತರುಗಳಿಗೆ ಒಂದಿಷ್ಟು ಇರಿಸು ಮುರುಸು ಉಂಟು ಮಾಡಿತಾದರೂ ಪ್ರತ್ಯೇಕ ಸಭೆಗಳ ನಂತರ ಇದೇ ದಿನ ಸಂಜೆ 5 ಗಂಟೆಗೆ ನಗರದ ಶ್ರಾಮ ಕಲ್ಯಾಣ ಮಂಟಪದಲ್ಲಿ ಉಭಯ ಪಕ್ಷಗಳ ಮುಖಂಡರ ಜೆಂಟಿ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಸತ್ಯನಾರಾಯಣ್ ಹಾಗೂ ಟಿ.ಬಿ.ಜಯಚಂದ್ರ ಅಕ್ಕ-ಪಕ್ಕದಲ್ಲಿಯೇ ಕೂತು ಹಸ್ತ ಲಾಘವ ಮಾಡಿ ಲೋಕಸಭಾ ಚುನಾವಣೆಯಲ್ಲಿ ಇಬ್ಬರೂ ಜಂಟಿ ಪ್ರಚಾರ ಮಾಡುವುದಾಗಿ ಘೋಷಿಸಿದ್ದು ಇಲ್ಲಿನ ಉಭಯ ಪಕ್ಷಗಳ ಅಭ್ಯರ್ಥಿ ಚಂದ್ರಪ್ಪ ಅವರಿಗೆ ಹೊಸ ಶಕ್ತಿಯೊಂದನ್ನು ಹುಟ್ಟು ಹಾಕುವಂತೆ ಮಾಡಿದೆ.
ಸುದ್ದಿಗೋಷ್ಠಿಯ ಆರಂಭದಲ್ಲಿ ಸತ್ಯನಾರಾಯಣ್ ಮಾತನಾಡಿ ಜಾತ್ಯತೀತ ಭಾವನೆಗಳನ್ನು ಮೈಗೂಡಿಸಿಕೊಂಡು ಬಂದ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷಗಳು ದೇಶದ ಅಭಿವೃದ್ಧಿಗಾಗಿ ಬಿ.ಜೆ.ಪಿ. ಪಕ್ಷವನ್ನು ಕಟ್ಟಿ ಹಾಕಲು ತೀರ್ಮಾನಿಸಿ ಎರಡೂ ಪಕ್ಷಗಳ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿ ಚುನಾವಣೆ ಎದುರಿಸಬೇಕಾಗಿದೆ. ಇಂತಹ ಸ್ಥಿತಿ ಯಾವತ್ತೂ ಬಂದಿರಲಿಲ್ಲವಾದರೂ ದೇಶದ ಒಳಿತಿಗೆ ಇದು ಅನಿವಾರ್ಯವಾಗಿದೆ ಎಂದರು.
ನಾನು ಹಾಗೂ ಜಯಚಂದ್ರ ಕಳೆದ ಎಲ್ಲಾ ಚುನಾವಣೆಗಳಲ್ಲೂ ಬದ್ಧ ವೈರಿಗಳೆ ಆಗಿದ್ದೆವು. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಟೀಕೆ ಮಾಡಿಕೊಂಡೆ ಚುನಾವಣೆ ನಡೆಸಿದ್ದೇವೆ. ಈಗ ಒಂದಾಗಿ ಉಭಯ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಒಟ್ಟಾಗಿ ಚುನಾವಣೆ ಮಾಡುತ್ತೇವೆ. ಶಿರಾ ಭಾಗದಲ್ಲಿ ಬಿ.ಜೆ.ಪಿ. ಪಕ್ಷ ಮೂರನೆಯ ಸ್ಥಾನದಲ್ಲಿದೆ. ಜೆಡಿಎಸ್ ಮತಗಳು ಹಾಗೂ ಕಾಂಗ್ರೆಸ್ ಮತಗಳು ಒಟ್ಟುಗೂಡಿ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಶಿರಾ ಭಾಗದಲ್ಲಿ ಅಭ್ಯರ್ಥಿ ಚಂದ್ರಪ್ಪ ಪಡೆಯುತ್ತಾರೆ. ಅವರ ಗೆಲುವು ಕೂಡ ಖಚಿತ ಎಂದರು.
ಟಿ.ಬಿ.ಜಯಚಂದ್ರ ಮಾತನಾಡಿ, ನಮ್ಮಲ್ಲಿ ಎಷ್ಟೆ ಭಿನ್ನಾಭಿಪ್ರಾಯಗಳಿದ್ದರೂ ಕೋಮುವಾದಿ ಪಕ್ಷವಾದ ಬಿ.ಜೆ.ಪಿಯನ್ನು ಹೊರಗಟ್ಟಿ ದೇಶವನ್ನು ಬಿ.ಜೆ.ಪಿ.ಯ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ರಾಹುಲ್‍ಗಾಂಧೀಜಿ ಹಾಗೂ ದೇವೇಗೌಡರ ಒಮ್ಮತದ ತೀರ್ಮಾನಕ್ಕೆ ಹಾಗೂ ಎರಡೂ ಪಕ್ಷಗಳ ವರಿಷ್ಢರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಮುಂಬರುವ ಚುನಾವಣೆಗಳನ್ನು ಮುಂದಾಲೋಚನೆ ಮಾಡುವ ಮುನ್ನ ನಾವು ಉಭಯ ಪಕ್ಷಗಳ ಅಭ್ಯರ್ಥಿಗಳನ್ನು ರಾಜ್ಯದಲ್ಲಿ ಆಯ್ಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಉಭಯ ಪಕ್ಷಗಳ ಸಭೆಯನ್ನು ಒಂದೇಕಡೆ ಮಾಡದೇ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಂಗ್ರೆಸ್-ಜೆ.ಡಿ.ಎಸ್. ಕಾರ್ಯಕರ್ತರ ಸಭೆಗಳನ್ನು ಪ್ರತ್ಯೇಕವಾಗಿ ಮಾಡಿದ್ದೀರಿ ಇದರಿಂದ ಪಕ್ಷದ ಕಾರ್ಯರ್ತರಿಗೆ ಗೊಂದಲವಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಸೂಕ್ಷ್ಮವಾಗಿಯೇ ಉತ್ತರಿಸಿದ ಶಾಸಕ ಬಿ.ಸತ್ಯನಾರಾಯಣ್ ಮೊದಲು ನಮ್ಮ ಮನೆ, ಕುಟುಂಬಗಳನ್ನು ಸರಿಪಡಿಸಿಕೊಂಡು ನಂತರ ಇನ್ನಿತರ
ಕುಟುಂಬಗಳನ್ನು ಸರಿ ಮಾಡಲು ಮುಂದಾಗಬೇಕು. ಹೀಗಾಗಿಯೇ ಪ್ರತ್ಯೇಕ ಸಭೆಗಳನ್ನು ನಡೆಸಿ ಮೊದಲು ನಮ್ಮ ಪಕ್ಷದ ಕುಟುಂಬವನ್ನು ಸರಿಪಡಿಸಿಕೊಂಡು ಪಕ್ಷದ ಎರಡೂ ಕುಟುಂಬಗಳು ಒಂದಾಗಿ ಚಂದ್ರಪ್ಪ ಗೆಲುವಿಗೆ ಟೊಂಕಕಟ್ಟಿ ನಿಲ್ಲುತ್ತೇವೆ ಎಂದರು.
ಪ್ರತ್ಯೇಕ ಸಭೆಗಳ ನಂತರ ರಾಜ್ಯದ ಎರಡೂ ಪಕ್ಷಗಳ ವರಿಷ್ಠರನ್ನು ಒಗ್ಗೂಡಿಸಿ ಒಂದೇ ವೇದಿಕೆಯ ಸಭೆಗಳನ್ನು ನಡೆಸುತ್ತೇವೆ. ಕಾಂಗ್ರೆಸ್-ಜೆ.ಡಿ.ಎಸ್. ಎಂಬ ತಾರತಮ್ಯ ಲೋಕಸಭಾ ಚುನಾವಣೆಯಲ್ಲಿ ತಲೆದೋರುವುದಿಲ್ಲ ಎಂದು ಟಿ.ಬಿ.ಜಯಚಂದ್ರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಜೆಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ, ರಾಜ್ಯ ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಎಸ್.ಎನ್.ಕೃಷ್ಣಯ್ಯ, ಬರಗೂರು ನಟರಾಜು, ರಾಮಚಂದ್ರಪ್ಪ, ಚಂಗಾವರ ಮಾರಣ್ಣ, ಅರೆಹಳ್ಳಿ ಬಾಬು, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಸತ್ಯನಾರಾಯಣ್, ಗುರುಮೂರ್ತಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
