ಶೋಷಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಬಿಎಸ್‍ಪಿಯಿಂದ ಮಾತ್ರ ಸಾಧ್ಯ.

ಚಳ್ಳಕೆರೆ

         ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶೋಷಿತ ಸಮುದಾಯವಾದ ಮಾದಿಗ ಸಮುದಾಯವೂ ಸೇರಿದಂತೆ ಬಡ ಜನತೆಗೆ ಯಾವುದೇ ಸೌಲಭ್ಯಗಳು ಸಿಗದೆ ವಂಚಿತರಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಈ ಸಮುದಾಯಗಳಿಗೆ ಉತ್ತಮ ನ್ಯಾಯವನ್ನು ದೊರಕಿಸಿಕೊಡುವ ಸಂಕಲ್ಪವನ್ನು ಬಹುಜನ ಸಮಾಜವಾದಿ ಪಕ್ಷದ ಸಂಸ್ಥಾಪಕ, ರಾಷ್ಟ್ರೀಯ ನೇತಾರ ದಿವಂಗತ ಕಾನ್ಷಿರಾಂ ಮಾಡಿದ್ದು, ಪ್ರಸ್ತುತ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್‍ಪಿಯ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಮಾರ್ಗದರ್ಶನದಲ್ಲಿ ಶೋಷಿತ ಕಲ್ಯಾಣಕ್ಕಾಗಿ ಬಿಎಸ್‍ಪಿ ಶ್ರಮಿಸುತ್ತಿದೆ ಎಂದು ಬಿಎಸ್‍ಪಿಯ ರಾಜ್ಯ ಕಾರ್ಯದರ್ಶಿ ಪಾಂಡುರಂಗಪ್ಪ ತಿಳಿಸಿದರು.

      ಅವರು, ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿಎಸ್‍ಪಿ ಸಂಸ್ಥಾಪಕ ದಿವಂಗತ ಕಾನ್ಷಿರಾಂರವರ 12ನೇ ಪರಿನಿಬ್ಬಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಇತರೆ ಭಾಗಗಳಲ್ಲೂ ಸಹ ಬಹುಸಂಖ್ಯಾಯರು ಶೋಷಿತ ಸಮುದಾಯದ ಸಮಸ್ಯೆಗಳ ಕಡೆ ಗಮನಹರಿಸುವಲ್ಲಿ ವಿಫಲರಾಗಿದ್ಧಾರೆ. ರಾಜ್ಯವನ್ನಾಳುವ ಚುನಾಯಿತ ಜನಪ್ರತಿನಿಧಿಗಳು ಸಹ ಈ ಸಮುದಾಯಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಆದರೆ, ಬಿಎಸ್‍ಪಿಯಿಂದ ಮಾತ್ರ ಸಾಮಾಜಿಕ ನ್ಯಾಯವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

      ಹಿರಿಯೂರು ಕ್ಷೇತ್ರದ ಉಸ್ತುವಾರಿ, ದಲಿತ ಸಮುದಾಯದ ಹಿರಿಯ ಮುಖಂಡ ಟಿ.ಡಿ.ರಾಜಗಿರಿ ಮಾತನಾಡಿ, ಪ್ರಚಾರ ಕಾರ್ಯದಲ್ಲಿ ಮಾತ್ರ ಆಡಳಿತ ಪಕ್ಷ ಶೋಷಿತ ಸಮುದಾಯವನ್ನು ಅಭಿವೃದ್ಧಿ ಪಡಿಸುವ ಸೋಗಿನಲ್ಲಿ ಅತಿ ಹೆಚ್ಚು ಪ್ರಚಾರವನ್ನು ಪಡೆಯುತ್ತಿದೆ. ಇಂದಿಗೂ ಸಹ ಈ ರಾಜ್ಯದ ಶೋಷಿತ ಸಮುದಾಯಕ್ಕೆ ಯಾರಿಂದಲೂ ನ್ಯಾಯ ದೊರಕಿಲ್ಲವೆಂದು ವಿಷಾದಿಸಿದರು.

     ರಾಜ್ಯ ವಲಯ ಉಸ್ತುವಾರಿ ಎನ್.ಪ್ರಕಾಶ್ ಮಾತನಾಡಿ, ಅನೇಕ ರಾಜಕೀಯ ಪಕ್ಷಗಳ ನೇತಾರರು ಸ್ವಜನ ಪಕ್ಷಪಾತಕ್ಕೆ ಆದ್ಯತೆ ನೀಡುತ್ತಿದ್ದು, ಇದು ಶೋಷಿತ ಸಮುದಾಯ ಅಭಿವೃದ್ಧಿ ಹೊಂದಲು ಹಿನ್ನಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಸ್‍ಪಿಯನ್ನು ಬಲಪಡಿಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಪಕ್ಷವನ್ನು ಉತ್ತಮವಾಗಿ ಸಂಘಟಿಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಬಿಎಸ್‍ಪಿಯಿಂದ ಮಾತ್ರ ಸಮಸ್ತ ಜನತೆಗೆ ಸಮಾನವಾದ ನ್ಯಾಯಸಿಗಲು ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಹಿರಿಯೂರು ಸಿದ್ದಪ್ಪ, ಜಿಲ್ಲಾ ಉಪಾಧ್ಯಕ್ಷ ಮಹಂತೇಶ್ ಮುಂತಾದವರು ಭಾಗವಹಿಸಿದ್ದರು. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ನಾಗರಾಜು ಸ್ವಾಗತಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link