ತುಮಕೂರು
ಮಾಯವತಿ ನೇತೃತ್ವದ ಬಿಎಸ್‍ಪಿ ಪಕ್ಷದ ಅಭ್ಯರ್ಥಿಗಳು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಎಸ್‍ಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಬಿಎಸ್‍ಪಿ ಪಕ್ಷವು ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಕರ್ನಾಟಕದ 28 ಕ್ಷೇತ್ರಗಳಲ್ಲಿಯೂ ಬಿಎಸ್‍ಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಎರಡ್ಮೂರು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಜನರ ಸಮಸ್ಯೆಗಳನ್ನು ಪರಿಹರಿಸಲು, ದೇಶದ ಅಭಿವೃದ್ದಿ ಮಾಡಲು ಮಾಯವತಿಯವರು ಪ್ರಧಾನಮಂತ್ರಿಯಾಗ ಬೇಕಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚಿನ ಬೆಂಬಲ ಮಾಯಾವತಿಯವರಿಗಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 70-80 ಸ್ಥಾನಗಳು ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. 80 ಸ್ಥಾನಗಳು ದೊರೆತರೆ ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿಯರವು ಸ್ಪರ್ಧೆ ಮಾಡಲಿದ್ದಾರೆ ಎಂದರು.
ಮುಂದಿನ ತಿಂಗಳ 10ರಂದು ಕರ್ನಾಟಕಕ್ಕೆ ಬಿಎಸ್‍ಪಿ ಅಧ್ಯಕ್ಷರಾದ ಮಾಯಾವತಿಯವರು ಆಗಮಿಸಲಿದ್ದು, ಮೈಸೂರಿನಲ್ಲಿ ಬೃಹತ್ ಮಟ್ಟದ ಸಭೆಯನ್ನು ಆಯೋಜಿಸಲಾಗುತ್ತಿದೆ. ಅಲ್ಲಿ ಸುಮಾರು 1ಲಕ್ಷ ಮಂದಿ ಸೇರುವ ನಿರೀಕ್ಷೆ ಇದ್ದು, ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಂದ 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ ಎಂದರು.
ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಬಡವನಿಗೆ ಶಿಕ್ಷಣ, ಉದ್ಯೋಗ, ವಾಸವಿರಲು ಮನೆ ಇರಬೇಕು. ಆದರೆ ಕಳೆದ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶದ ಲೂಟಿ ಹೊಡೆದಿದೆ. ನಂತರ ಬಂದ ಬಿಜೆಪಿ ಸರ್ಕಾರವು ಕೇವಲ ಬೆರಳಣಿಕೆಯಷ್ಟು ಮಂದಿಯ ಯೋಗ ಕ್ಷೇಮ ನೋಡುತ್ತಿದೆ. ಇಲ್ಲಿ ಬಡವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವವರು ಯಾರೂ ಇಲ್ಲ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ ಚುನಾವಣೆ ವೇಳೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಪ್ಪುಹಣವನ್ನು ತಂದು ಪ್ರತಿಯೊಬ್ಬ ಭಾರತೀಯ ಬ್ಯಾಂಕ್ ಖಾತೆಗೆ 15ಲಕ್ಷ ರೂ. ಹಾಕಲಾಗುವುದು ಎಂದಿದ್ದರು ಆದರೆ ಇಲ್ಲಿಯವರೆಗೆ ಒಂದು ರೂಪಾಯಿ ಕೂಡ ಬಂದಿಲ್ಲ., ಅದೇ ರೀತಿ ವರ್ಷಕ್ಕೆ 2 ಕೋಟಿ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದಿದ್ದರು ಆದರೆ ಐದು ವರ್ಷದಲ್ಲಿ 500 ಮಂದಿಗೂ ಉದ್ಯೋಗ ಕಲ್ಪಿಸಿಲ್ಲ. ಬದಲಿಗೆ ನೋಟ್ ಬ್ಯಾನ್ ಮಾಡುವ ಮೂಲಕ ಅನೇಕ ಬಡವರ ಜೀವ ಹಿಂಡಿ ಸಾವನ್ನಪ್ಪುವಂತೆ ಮಾಡಿದ್ದಾರೆ.
ಇಂತಹ ಸರ್ಕಾರವನ್ನು ತ್ಯಜಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿಭಾಗೀಯ ಉಸ್ತುವಾರಿ ಸೂಲಯ್ಯ, ಜಿಲ್ಲಾಧ್ಯಕ್ಷ ದಾಸಪ್ಪ, ಪ್ರಧಾನ ಕಾರ್ಯದರ್ಶಿ ರಂಗದಾಮಯ್ಯ, ತುಮಕೂರು ನಗರ ಕಮಿಟಿ ಉಸ್ತುವಾರಿ ರುದ್ರಯ್ಯ, ಜಿಲ್ಲಾಕಾರ್ಯದರ್ಶಿ ಗೋಪಾಲ್, ಮಧುಗಿರಿ ತಾಲ್ಲೂಕು ಉಸ್ತುವಾರಿ ಶಿವಣ್ಣ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ