ಬಂಡಾಯ ಶಮನಕ್ಕೆ ಮುಂದಾದ ಯಡಿಯೂರಪ್ಪ..!

ಬೆಂಗಳೂರು

         ಮುಂದಿನ ತಿಂಗಳು 5 ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತಾರೂಢ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಂಡಾಯ ಶಮನಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮುಂದಾಗಿದ್ದು, ಕಳೆದ ಚುನಾವಣೆಯಲ್ಲಿ ಪರಾಜಿತರಾಗಿ ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದವರ ಮನವೊಲಿಸಿ, ಉಪಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗದಂತೆ, ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ.

        ಇಂದು ತಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಉಪಚುನಾವಣೆಗೆ ಕಾರ್ಯತಂತ್ರ ರೂಪಿಸಿದರು.15 ಕ್ಷೇತ್ರಗಳಲ್ಲೂ ಬಂಡಾಯ ಉಂಟಾಗದಂತೆ, ಕ್ಷೇತ್ರಗಳ ಉಸ್ತುವಾರಿ ನಾಯಕರು ಮತ್ತು ಮುಖಂಡರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ.ಇಂದು ಮುಖ್ಯಮಂತ್ರಿಯವರು ಯಾವುದೇ ಕಾರ್ಯಕ್ರಮವನ್ನು ನಿಗದಿಪಡಿಸಿಕೊಂಡಿರಲಿಲ್ಲ. ಬೆಳಗ್ಗಿನಿಂದಲೇ ಮನೆಯಲ್ಲೇ ಕೂತು ಉಪಚುನಾವಣೆ ಗೆಲ್ಲಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಆಪ್ತರ ಬಳಿ ಸಮಾಲೋಚನೆ ನಡೆಸಿದರು.

       ಮೊದಲು ಬೆಳಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಗಮಿಸಿ ತಮಗೆ ಉಸ್ತುವಾರಿ ನೀಡಿರುವ ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಹಾಗೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಮೂರು ಕ್ಷೇತ್ರಗಳಲ್ಲಿ ಕೆಲವು ಸಣ್ಣಪುಟ್ಟ ಗೊಂದಲಗಳಿರುವುದರಿಂದ ಅದನ್ನು ಹೇಗೆ ಪರಿಹರಿಸಬೇಕು ಎಂಬುದರ ಬಗ್ಗೆ ಬಿಎಸ್‍ವೈ ಅವರಿಂದ ಸಲಹೆ ಪಡೆದರು.

      ಸದಾನಂದ ಗೌಡ ಬಿಎಸ್‍ವೈ ಅವರ ಮನೆಯಿಂದ ನಿರ್ಗಮಿಸುತ್ತಿದ್ದಂತೆ ಮಾಜಿ ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ ನಾಯ್ಡು ಹಾಗೂ ಎಸ್.ಟಿ.ಸೋಮಶೇಖರ್ ಆಗಮಿಸಿ ಯಡಿಯೂರಪ್ಪನವರೊಂದಿಗೆ ಚರ್ಚೆ ಮಾಡಿದರು.ಕೆಲವು ಕಡೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ತಮಗೆ ಟಿಕೆಟ್ ನೀಡಿರುವ ಕಾರಣ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಮನವೊಲಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

       ನೀವು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ.ಅಸಮಾಧಾನಗೊಂಡಿರುವವರನ್ನು ಮನವೊಲಿಸುವಂತೆ ನಾನು, ಉಸ್ತುವಾರಿಗಳ ಮತ್ತು ಪಕ್ಷದ ಮುಖಂಡರಿಗೆ ಸೂಚಿಸುತ್ತೇನೆ. ಟಿಕೆಟ್ ಸಿಗದವರು ಅಸಮಾಧಾನಗೊಳ್ಳುವುದು ಸರ್ವೆ ಸಾಮಾನ್ಯ.ಇದಕ್ಕೆ ನೀವು ತಲೆಕೆಡಿಸಿ ಕೊಳ್ಳಬೇಡಿ.

      ಧೈರ್ಯದಿಂದ ಉಪಚುನಾವಣೆಯನ್ನು ಎದುರಿಸಿ ಉಳಿದ ಏನೇ ಸಮಸ್ಯೆಗಳಿದ್ದರೂ ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದರು. ವಿಜಯನಗರದಲ್ಲಿ ಆದಿಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿ ತುಸು ಅಳುಕಿನಿಂದಲೇ ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿದ ಮೂವರು ನಿರಾಳ ಭಾವನೆಯಿಂದ ಹೊರಬಂದರು. ಹೀಗೆ ಯಡಿಯೂರಪ್ಪ ದಿನಪೂರ್ತಿ ವಿವಿಧ ಮುಖಂಡರನ್ನು ತಮ್ಮ ನಿವಾಸದಲ್ಲೇ ಭೇಟಿ ಮಾಡಿ ಉಪಚುನಾವಣೆಯಲ್ಲಿ ಗೆಲ್ಲಲು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದ್ದಾರೆ.

       ಸೋಮವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಹಿನ್ನೆಲೆಯಲ್ಲಿ ಬುಧವಾರದ ನಂತರ ಪ್ರಚಾರಕ್ಕೆ ಧುಮುಕಲಿರುವ ಯಡಿಯೂರಪ್ಪ ಪ್ರತಿದಿನ ಕನಿಷ್ಠ 2ರಿಂದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ನಡೆಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link