ಕಾರ್ಯಕ್ರಮ ಮೊಟಕು: ಬಿ.ಎಸ್.ವೈ ವಾಪಸ್

ತುಮಕೂರು

      ಪೂರ್ವ ಯೋಜಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನತ್ತ ದೌಡಾಯಿಸಿದರು. ಭಾನುವಾರ ಬೆಳಗಿನಿಂದ ಸಂಜೆಯವರೆಗೂ ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಂತೆ ಬೆಳಗ್ಗೆ ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಅವರು, ಶ್ರೀಗಳ ಗದ್ದುಗೆ ದರ್ಶನ ಪಡೆದು ನಂತರ ತಿಪಟೂರಿಗೆ ತೆರಳಿದರು.ಶಾಸಕ ಬಿ.ಸಿ.ನಾಗೇಶ್ ನಿವಾಸದಲ್ಲಿ ಹಲವು ಮುಖಂಡರುಗಳೊಂದಿಗೆ ಕೆಲ ಹೊತ್ತು ಸಭೆ ನಡೆಸಿದರು.

      ನಂತರ ಅಲ್ಲಿಂದ ಬಾಗೂರು ನವಿಲೆ ಸುರಂಗ ಪ್ರದೇಶಕ್ಕೆ ತೆರಳಿ ಕೆಲ ಕಾಲ ವೀಕ್ಷಣೆ ನಡೆಸಿ ನಂತರ ನೇರವಾಗಿ ಯಡಿಯೂರು ಸಿದ್ಧಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದರು. ಅಲ್ಲಿಂದ ದೇವರ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ಸಾದರು. ಭಾನುವಾರ ಸಂಜೆ ಸಿದ್ಧಗಂಗಾ ಮಠದಲ್ಲಿ ಜಲಶಕ್ತಿ ಜನಾಂದೋಲನಾ ಕಾರ್ಯಕ್ರಮ ಏರ್ಪಾಟಾಗಿತ್ತು. ಇದರಲ್ಲಿ ಯಡಿಯೂರಪ್ಪ ಭಾಗವಹಿಸಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದವು.

      ಆದರೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಯಡಿಯೂರಪ್ಪ ಅವರು ಹೇಮಾವತಿ ನಾಲೆ ವೀಕ್ಷಣೆ ಸೇರಿದಂತೆ ಜಲಶಕ್ತಿ ಜನಾಂದೋಲನ ಕಾರ್ಯಕ್ರಮಗಳಲ್ಲಿ ಇಡೀ ದಿನ ಭಾಗವಹಿಸಲು ಸಾಧ್ಯವಾಗದೆ ರಾಜಧಾನಿಗೆ ದೌಡಾಯಿಸಿದರು.

ನಾವೇನು ಸನ್ಯಾಸಿಗಳಲ್ಲ:

        ನಾವೇನು ಸನ್ಯಾಸಿಗಳಲ್ಲ, ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಅವಕಾಶ ಬಂದರೆ ಸರ್ಕಾರ ರಚನೆಗೆ ಸಿದ್ಧ ಎಂಬ ಇಂಗಿತವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರ ಹಾಕಿದರು.ಸಿದ್ಧಗಂಗಾ ಮಠಕ್ಕೆ ಆಗಮಿಸುವ ಮುನ್ನ ಟೋಲ್‍ಗೇಟ್ ಬಳಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೈತ್ರಿ ಸರ್ಕಾರ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಸರ್ಕಾರ ನಡೆಸುವ ಅರ್ಹತೆ ಅವರಿಗಿಲ್ಲ.

      ಹಲವು ಶಾಸಕರು ರಾಜೀನಾಮೆ ನೀಡಿರುವ ವಿಷಯ ನಿಮ್ಮ ಮಾಧ್ಯಮಗಳಿಂದಲೇ ಎಲ್ಲವೂ ಗೊತ್ತಾಗಿದೆ. ಮಂಗಳವಾರದವರೆಗೆ ಸ್ಪೀಕರ್ ನಿರ್ಧಾರಕ್ಕೆ ಕಾಯುತ್ತೇವೆ. ವಿಧಾನಸಭಾಧ್ಯಕ್ಷರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಇವೆಲ್ಲವನ್ನೂ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

       13 ಜನ ಶಾಸಕರು ರಾಜೀನಾಮೆ ನೀಡಿದ ಮೇಲೆ ಈ ಸರ್ಕಾರ ಬಹುಮತ ಕಳೆದುಕೊಂಡಿದೆ. ಸರ್ಕಾರದ ಆಟಾಟೋಪಗಳನ್ನು ಗಮನಿಸುತ್ತಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಬಿ.ಎಸ್.ಯಡಿಯೂರಪ್ಪ ಅವರ ಜೊತೆಯಲ್ಲಿ ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್‍ಗೌಡ, ಡಾ.ಎಂ.ಆರ್.ಹುಲಿನಾಯ್ಕರ್ ಸೇರಿದಂತೆ ವಿವಿಧ ಮು ಖಂಡರುಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap