ಬೆಂಗಳೂರು
ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಆಂತರಿಕ ಸಮೀಕ್ಷೆ ಬೇರೆಯದ್ದೇ ಕಥೆ ಹೇಳುತ್ತಿದೆ.
ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಗೆ ಗೆಲುವು ಸುಲಭ ಎಂಬ ಆಂತರಿಕ ಸಮೀಕ್ಷೆ ವರದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಚ್ಚುವಂತೆ ಮಾಡಿದೆ.ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡು ಎಲ್ಲರಿಗೂ ಮಂತ್ರಿಗಿರಿ ಆಶ್ವಾಸನೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಈ ಸಮೀಕ್ಷೆಯಂತೆ ಫಲಿತಾಂಶ ಹೊರ ಬಂದರೆ, ಎಲ್ಲರಿಗೂ ಮಂತ್ರಿಗಿರಿ ನೀಡುವುದಿರಲಿ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಅಗತ್ಯ ಸಂಖ್ಯಾಬಲದ ಕೊರತೆ ಎದುರಾಗಲಿದೆ.
ಫಲಿತಾಂಶದ ಬಗ್ಗೆ ವರದಿ ಬಂದ ಬಳಿಕ ಆಪ್ತರೊಡನೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿಗಳು ತಾವೆ ಅಖಾಡಕ್ಕಿಳಿದು ಬಿರುಸಿನ ಪ್ರಚಾರ ಕೈಗೊಳ್ಳುವ ತಂತ್ರ ರೂಪಿಸಿದ್ದಾರೆ.
ಬಿಜೆಪಿಗೆ ಕನಿಷ್ಠ ಎಂಟರಿಂದ ಹತ್ತು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಂತೂ ಇತ್ತು. ಗೋಕಾಕ್, ಹುಣಸೂರು, ಹೊಸಕೋಟೆ, ರಾಣೇಬೆನ್ನೂರು, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಯಶವಂತಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಷ್ಟ ಎಂದು ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. 105 ಸ್ಥಾನ ಹೊಂದಿರುವ ಬಿಜೆಪಿಗೆ ಉಪ ಚುನಾವಣೆಯಲ್ಲಿ ಅಗತ್ಯ ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ. ಹೊಸಕೋಟೆ, ವಿಜಯನಗರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಗಳನ್ನು ಸಂಭಾಳಿಸುವುದರಲ್ಲಿ ವಿಫಲರಾಗಿದ್ದು ಮುಳುವಾಗುವ ಸಾಧ್ಯತೆಯಿದೆ.
ಉಪ ಚುನಾವಣೆಯಲ್ಲಿ ಹತ್ತು ಕ್ಷೇತ್ರ ಗೆಲ್ಲದಿದ್ದರೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರಲಿದೆ ಎಂದು ತಮ್ಮ ಸಮುದಾಯದ ಮುಖಂಡರ ಬಳಿ ಹೇಳಿಕೊಂಡಿದ್ದಾರೆ. ಮಠಾಧೀಶರನ್ನೂ ಸಂಪರ್ಕಿಸಿ ನೆರವಿಗೆ ಧಾವಿಸುವಂತೆ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ. ಇದರ ನಡುವೆ, ಅಥಣಿ, ಕಾಗವಾಡ, ಗೋಕಾಕ್ ಕ್ಷೇತ್ರಗಳು ಪ್ರತಿಷ್ಠೆಯಾಗಿದ್ದು ಇಲ್ಲಿ ಸೋಲು ಉಂಟಾದರೆ ತಲೆದಂಡ ಖಚಿತ ಎಂದು ಸಚಿವ ಜಗದೀಶ್ ಶೆಟ್ಟರ್ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೂ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಆಪ್ತ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ರಾಣೇಬೆನ್ನೂರು ಕ್ಷೇತ್ರದ ಸಂಪೂರ್ಣ ಉಸ್ತುವಾರಿ ವಹಿಸಿ ಚುನಾವಣೆ ಮುಗಿಯುವವರೆಗೆ ಅಲ್ಲೆ ಇರುವಂತೆ ಸೂಚಿಸಿ ಮುರುಗೇಶ್ ನಿರಾಣಿಗೂ ಜೊತೆ ಗೂಡುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ. ಜೊತೆಗೆ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಹಿರೇಕೆರೂರು ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ.ಬೆಂಗಳೂರಿನ ಯಶವಂತಪುರದಲ್ಲಿ ಗೆಲುವು ಸಾಧಿಸಲು ಆರ್.ಆಶೋಕ್, ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ಸಿ.ಟಿ.ರವಿ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ, ಕೆ.ಆರ್. ಪುರಂ ಕ್ಷೇತ್ರದ ಉಸ್ತುವಾರಿ ಅರವಿಂದ ಲಿಂಬಾವಳಿ ಅವರಿಗೆ ವಹಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಮತ್ತು ಸಂತೋಷ್, ಚುನಾವಣಾ ರಣರಂಗಕ್ಕಿಳಿದಿದ್ದು, ಡಿಸೆಂಬರ್ 3 ರವರೆಗೂಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮತ್ತು ತಂತ್ರಗಾರಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ದಕ್ಷಿಣ ಭಾರತದಲ್ಲಿ ಮತ್ತೆ ಖಾತೆ ತೆಗೆದಿರುವ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವರಿಷ್ಠರ ಅಣತಿಯಂತೆ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಚಿಕ್ಕಬಳ್ಳಾಪುರ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇಷ್ಟು ದಿನ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಅವರು ಚುನಾವಣಾ ಅಖಾಡ ಪ್ರವೇಶಿಸಿರುವುದು ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವಿರೋಧ ಪಕ್ಷದ ಮುಖಂಡರು ಸಾರ್ವಜನಿಕ ವಾಗಿ ತಿರುಗೇಟು ನೀಡಲಿ, ಯಾವುದೇ ಕಾರಣಕ್ಕೂ ಕಣದಲ್ಲಿರುವ ಪಕ್ಷದ ಅಭ್ಯರ್ಥಿಗಳು ಪ್ರತಿಪಕ್ಷದ ನಾಯಕರುಗಳ ವಿರುದ್ಧ ಟೀಕೆ ಮಾಡಬಾರದೆಂದು ಕಟ್ಟಾದೇಶ ಹೊರಡಿಸಲಾಗಿದೆ.
ಅಭ್ಯರ್ಥಿಗಳು ಮತದಾರರನ್ನು ಭೇಟಿ ಮಾಡಿ, ಮತ ಕೇಳುವುದಷ್ಟೇ, ಸ್ಥಳೀಯವಾಗಿ ತಂತ್ರಗಾರಿಕೆ ಮಾಡಿಕೊಳ್ಳಲಿ. ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಳ್ಳಬಾರದೆಂದು ಹೈಕಮಾಂಡ್ ಸೂಚನೆ ಕಳಿಸಿದೆ.ಪ್ರಾರಂಭದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ದ ಹರಿಹಾಯ್ದಿದ್ದ ಕೆಲವು ಅಭ್ಯರ್ಥಿಗಳು ಇದೀಗ ಮೌನಕ್ಕೆ ಶರಣಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ