ಫೆಬ್ರವರಿಯಲ್ಲೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಬಿ ಎಸ್ ವೈ ತಯಾರಿ..!

ಬೆಂಗಳೂರು

    ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬರುವ ಫೆಬ್ರವರಿಯಲ್ಲೇ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಈಗಾಗಲೇ ತಯಾರಿ ನಡೆಸಿದ್ದಾರೆ.ಫೆಬ್ರವರಿ 1ನೇ ತಾರೀಖಿನಂದು ಕೇಂದ್ರದ ಬಜೆಟ್ ಮಂಡಿಸಲು ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಸಿದ್ದತೆ ಆರಂಭಿಸಿರುವ ಬೆನ್ನಲ್ಲೆ ರಾಜ್ಯದಲ್ಲೂ ಫೆಬ್ರವರಿ ತಿಂಗಳಲ್ಲೇ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ತಯಾರಿ ನಡೆಸಿದ್ದಾರೆ.

     ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಸಂಬಂಧ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಸಭೆಯನ್ನು ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪನ್ಮೂಲ ಕ್ರೂಢೀಕರಣ ಎಲ್ಲದರ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆರೆ, ಬರ, ಆರ್ಥಿಕ ಹಿನ್ನಡೆ ಇವುಗಳಿಂದ ತೆರಿಗೆ ಸಂಗ್ರಹ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. ಜತೆಗೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಜಿ.ಎಸ್.ಟಿ. ಪರಿಹಾರ ಮೊತ್ತವೂ ಬಾಕಿ ಇರುವುದರಿಂದ ಬಜೆಟ್‍ಗೆ ಹಣ ಹೊಂದಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ.

     ರಾಜ್ಯ ಸರ್ಕಾರ ಜಿಎಸ್‍ಟಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಆದರೆ ಕೇಂದ್ರ ರಾಜ್ಯ ಸರ್ಕಾರಕ್ಕೆ ನೀಡಬೇಕಾದ ಜಿ.ಎಸ್.ಟಿ. ಪರಿಹಾರ ಮೊತ್ತ ಬಾಕಿ ಉಳಿಸಿಕೊಂಡಿದೆ.

     ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಜಿ.ಎಸ್.ಟಿ. ಪರಿಹಾರ ಮೊತ್ತ ಸುಮಾರು 2,800 ಕೋಟಿಯಷ್ಟಿದ್ದು, ಈ ಮೊತ್ತವನ್ನು ಕೇಂದ್ರ ಇನ್ನು ಪಾವತಿಸಿಲ್ಲ. ಜಿ.ಎಸ್.ಟಿ. ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪರಿಹಾರ ಮೊತ್ತ ಬಿಡುಗಡೆ ಮಾಡಲು ಕೇಂದ್ರ ವಿಳಂಬ ಮಾಡಿದೆ. ಇದರ ಜತೆಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಜಿ.ಎಸ್.ಟಿ. ಪರಿಹಾರ ಮೊತ್ತ ಪಾವತಿಯೂ ವಿಳಂಬವಾಗಿದೆ. ಹಾಗಾಗಿ 4 ತಿಂಗಳಲ್ಲಿ ಸುಮಾರು 7 ಸಾವಿರ ಕೋಟಿ ರೂ. ಆದಾಯ ಕೊರತೆಯಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ಹೇಳಿವೆ.

     ಈ ಆದಾಯ ಕೊರತೆಯನ್ನು ತುಂಬಿಕೊಂಡು ಮುಂದಿನ ಬಜೆಟ್‍ಗೆ ಸಂಪನ್ಮೂಲ ಕ್ರೂಢೀಕರಣ ದೊಡ್ಡ ಸವಾಲಾಗಿ ಪರಿಣಮಿಸಿದೆ.ಮುಖ್ಯಮಂತ್ರಿ ಯಡಿಯೂರಪ್ಪನವರು 2 ದಿನಗಳ ಹಿಂದೆ ಪ್ರಧಾನಿ ನರೇಂದ್ರಮೋದಿಯವರು ಉಪಚುನಾವಣೆಯ ಗೆಲುವಿನ ಬಗ್ಗೆ ಅಭಿನಂದನೆ ಹೇಳಲು ದೂರವಾಣಿ ಕರೆ ಮಾಡಿದ್ದ ಸಂದರ್ಭದಲ್ಲಿ ಜಿ.ಎಸ್.ಟಿ. ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದಾರೆ. ಹಾಗೆಯೇ ಕೇಂದ್ರಕ್ಕೂ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಕಾರಾತ್ಮಕವಾಗಿ ಸ್ಪಂದಿಸಿ ಆದಷ್ಟು ಶೀಘ್ರ ಜಿ.ಎಸ್.ಟಿ. ಪರಿಹಾರ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.

     ಈ ಎಲ್ಲದರ ನಡುವೆಯೇ ಬಜೆಟ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ತಯಾರಿ ನಡೆಸಿದ್ದಾರೆ.ಈ ಬಾರಿ ಮೋಟಾರು ವಾಹನ ತೆರಿಗೆ ಮತ್ತು ಮುದ್ರಾಂಕ ನೋಂದಣಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದೆ. ನವೆಂಬರ್ ವರೆಗೆ ಎಲ್ಲ ಬಾಬ್ತಿನಿಂದ ಸುಮಾರು 47,692 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. 2020 ಮಾರ್ಚ್ ಹಣಕಾಸು ಅಂತ್ಯಕ್ಕೆ ಒಟ್ಟು 76046 ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿದೆ. ಈ ಆದಾಯ ಸಂಗ್ರಹ ಗುರಿ ಸಾಧಿಸುವ ವಿಶ್ವಾಸವನ್ನು ಆರ್ಥಿಕ ಇಲಾಖೆ ಹೊಂದಿದೆ.

     ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಾರಿ ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಲಿದ್ದಾರೆ. ಈ ಹಿಂದೆ 2008 ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದರು. ನಂತರ ಬಂದ ಸಿದ್ದರಾಮಯ್ಯ ಸರ್ಕಾರ ರೈತರ ಬಜೆಟ್‍ನ್ನು ತೆಗೆದು ಹಾಕಿ ಒಂದೇ ಬಜೆಟ್ ಮಂಡಿಸಿತ್ತು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸುವ ತೀರ್ಮಾನ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap