ಮಾರ್ಚ್ 2ರಿಂದ ಬಜೆಟ್ ಅಧಿವೇಶನ..!

ಬೆಂಗಳೂರು

      ಸೋಮವಾರದಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದ್ದು ಆಡಳಿತ ಪಕ್ಷದ ಹಲವು ವೈಫಲ್ಯಗಳ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ನಿರ್ಧರಿಸಿದ್ದರೆ,ಬಜೆಟ್‍ಗೆ ಹಣ ಹೊಂದಿಸಲು ಪರದಾಡುತ್ತಿರುವ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪ್ರತಿ ಕೆಜಿ ಅಕ್ಕಿಗೆ ಮೂರು ರೂಪಾಯಿ ದರ ನಿಗದಿ ಮಾಡಲು ಚಿಂತನೆ ನಡೆಸಿದೆ.

     ಮಾರ್ಚ್ 2 ಹಾಗೂ 3 ರಂದು ನಡೆಯಲಿರುವ ಅಧಿವೇಶನದಲ್ಲಿ ಸಂವಿಧಾನದ ಬಗ್ಗೆಯೇ ವಿಶೇಷ ಚರ್ಚೆ ನಡೆಯಲಿದ್ದು ಈ ಚರ್ಚೆ ಯಾವ ಹಂತಕ್ಕೆ ಹೋಗಲಿದೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಆರಂಭವಾಗಿದೆ.ಎನ್‍ಆರ್‍ಸಿ,ಸಿಎಎ ಸೇರಿದಂತೆ ಹಲವು ವಿಷಯಗಳಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷಗಳು ಭಿನ್ನಮತ ಹೊಂದಿದ್ದು ಈ ಹಿನ್ನೆಲೆಯಲ್ಲಿ ಸಂವಿಧಾನದ ವಿಷಯದಲ್ಲಿ ನಡೆಯಲಿರುವ ಚರ್ಚೆ ತಾರಕಕ್ಕೇರಿದರೆ ಯಾವ್ಯಾವ ಅಂಶಗಳು ಹೊರಬೀಳಬಹುದು?ಅನ್ನುವುದು ಈ ಕುತೂಹಲ.

     ಮಾರ್ಚ್ ಐದರಂದು ಮಂಡನೆಯಾಗಲಿರುವ ಬಜೆಟ್‍ಗೆ ಹಣಕಾಸಿನ ತೀವ್ರ ಕೊರತೆ ಇರುವುದು ಸ್ಪಷ್ಟವಾಗಿದ್ದು ಇದೇ ಕಾರಣಕ್ಕಾಗಿ ಸರ್ಕಾರದ ಎಲ್ಲ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಶೇಕಡಾ ಮೂವತ್ತರಷ್ಟು ಕಡಿತಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.

     ಕೇಂದ್ರದಿಂದ ಬರಬೇಕಾದ ಬಾಕಿ ಹಣದ ಪ್ರಮಾಣ ಹದಿನಾರು ಸಾವಿರ ಕೋಟಿ ರೂಪಾಯಿಗಳಷ್ಟಿದ್ದು,ಅದೇ ಕಾಲಕ್ಕೆ ಯೋಜನಾ ಆಯೋಗ ರಾಜ್ಯಕ್ಕೆ ನಿಗದಿ ಮಾಡಿರುವ ಹಣದಲ್ಲಿ ಒಭತ್ತು ಸಾವಿರ ಕೋಟಿ ರೂಗಳನ್ನು ಕಡಿತ ಮಾಡಿದೆ.ಇದೇ ರೀತಿ ಹಲವು ಬಾಬ್ತುಗಳಲ್ಲಿ ಸರ್ಕಾರದ ಮೇಲಿನ ಹೊರೆ ಹೆಚ್ಚಾಗಿದ್ದು ಈ ಹಿಂದೆ ರಾಜ್ಯದ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್,ಜಪಾನ್‍ನ ಸಾಗರೋತ್ತರ ಬ್ಯಾಂಕ್ ಸೇರಿದಂತೆ ಹಲವು ಮೂಲಗಳಿಂದ ಪಡೆದ ಸಾಲದ ಮೇಲಿನ ಅಸಲು,ಬಡ್ಡಿ ಕಟ್ಟುವ ಸನ್ನಿವೇಶ ಎದುರಾಗಿದೆ.

     ದೊಡ್ಡ ಪ್ರಮಾಣದ ಹಣ ಈ ಸಾಲದ ಮೇಲಿನ ಅಸಲು ಹಾಗೂ ಬಡ್ಡಿಗೆ ಪಾವತಿಸಬೇಕಿದ್ದು ಇದರಿಂದಾಗಿ ಯೋಜನೇತರ ಬಾಬ್ತಿನ ಪ್ರಮಾಣ ಹೆಚ್ಚಾಗಲಿದೆ.ಬಜೆಟ್‍ನಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಯೋಜನೆ ಹಾಗೂ ವೆಚ್ಚಗಳಿಗಾಗಿ ಯೋಜನೇತರ ಬಾಬ್ತಿನಲ್ಲಿ ಹಣ ವಿಂಗಡಣೆಯಾಗಲಿದ್ದು ಯೋಜನೇತರ ವೆಚ್ಚಗಳಿಗೆ ಹಣ ಕಡಿತ ಮಾಡಬೇಕೆಂದರೂ ಹೆಚ್ಚಿನ ಪ್ರಮಾಣದ ಹಣ ಒದಗಿಸಲೇಬೇಕು.

     ಈ ಮಧ್ಯೆ ಉತ್ತರ ಕರ್ನಾಟಕದ ಜಲಪ್ರಳಯದಿಂದಾದ ನಷ್ಟವನ್ನು ಭರಿಸುವ ಕೆಲಸ ಇನ್ನೂ ಮುಗಿದಿಲ್ಲ.ಹೀಗಾಗಿ ಕುಮಾರಸ್ವಾಮಿ ಸರ್ಕಾರದಲ್ಲಿ ಮಾಡಿದ ರೈತರ ಸಾಲ ಮನ್ನಾ ಬಾನ್ತಿನ ಹಣವನ್ನು ಕಡಿತ ಮಾಡಬೇಕಾಗಿದೆ.

    ಈ ಮಧ್ಯೆ ಪಡಿತರ ಪದ್ಧತಿಯಡಿ ಜಾರಿಗೊಳಿಸಲಾಗಿರುವ ಅನ್ನಭಾಗ್ಯ ಯೋಜನೆಯಡಿ ಒದಗಿಸುತ್ತಿರುವ ಅಕ್ಕಿಯನ್ನು ಉಚಿತವಾಗಿ ನೀಡುವ ಬದಲು ಪ್ರತಿ ಕೆಜಿಗೆ ಮೂರು ರೂಪಾಯಿ ದರ ವಿಧಿಸಬೇಕು ಎಂಬ ಪ್ರಸ್ತಾವ ಈಗಾಗಲೇ ಆಹಾರ ಇಲಾಖೆಯಿಂದ ಮುಖ್ಯಮಂತ್ರಿಗಳಿಗೆ ತಲುಪಿದೆ.

      ಸರ್ಕಾರದ ಹಣಕಾಸು ಪರಿಸ್ಥಿತಿ ಕಷ್ಟದಲ್ಲಿರುವಾಗ ಅನ್ನಭಾಗ್ಯ ಯೋಜನೆಯಡಿ ಒದಗಿಸುತ್ತಿರುವ ಪ್ರತಿ ಕೆಜಿ ಅಕ್ಕಿಗೆ ಕನಿಷ್ಟ ಮೂರು ರೂಪಾಯಿ ಬೆಲೆ ನಿಗದಿ ಮಾಡೋಣ.ಇದರಿಂದಾಗಿ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಹಣ ದಕ್ಕುತ್ತದೆ.ಬಜೆಟ್‍ನಲ್ಲಿ ಕೊರತೆಯಾಗುವ ಹಣವನ್ನು ಹೊಂದಿಸಲು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿಯ ಮೇಲೆ ದರ ನಿಗದಿ ಮಾಡುವುದು ಸಮಸ್ಯೆಯೇನಲ್ಲ.ಕೆಜಿ ಅಕ್ಕಿಗೆ ಮೂರು ರೂಪಾಯಿ ಕೊಡುವ ಶಕ್ತಿ ಜನರಿಗಿದೆ.

     ಅದೇ ರೀತಿ ಮುಂದಿನ ದಿನಗಳಲ್ಲಿ ಅನರ್ಹ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಿ ಇನ್ನೂ ದೊಡ್ಡ ಪ್ರಮಾಣದ ಹಣ ಉಳಿಸುವುದಾಗಿ ಆಹಾರ ಇಲಾಖೆ ಮುಖ್ಯಮಂತ್ರಿಗಳಿಗೆ ವಿವರಿಸಿದ್ದು ಈ ಹಿನ್ನೆಲೆಯಲ್ಲಿ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.ಇದೇ ರೀತಿ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸವಿವರವಾಗಿ ಚರ್ಚಿಸಲು ಪ್ರತಿಪಕ್ಷಗಳು ಸಜ್ಜಾಗಿವೆ ಎಂದು ಮೂಲಗಳು ಹೇಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap