ತುಮಕೂರು
ವಿಶೇಷ ವರದಿ : ಆರ್.ಎಸ್.ಅಯ್ಯರ್
ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ” ಬಹುತೇಕ ಭರ್ತಿಯಾಗುವ ಹಂತ ತಲುಪಿದೆಯೆಂಬ ಖುಷಿಯ ಸಮಾಚಾರ ಲಭಿಸಿದೆ. ಇನ್ನು ಕೇವಲ ಒಂದು ಮೀಟರ್‍ನಷ್ಟು ನೀರು ತುಂಬಿದರೆ ಜಲಸಂಗ್ರಹಾಗಾರ ಪೂರ್ಣಗೊಳ್ಳಲಿದೆ. ಇದರೊಂದಿಗೆ ಕಳೆದ ಕೆಲ ತಿಂಗಳುಗಳಿಂದ ತುಮಕೂರು ನಗರದ ಜನರಲ್ಲಿದ್ದ ನಿರೀಕ್ಷೆಯೊಂದು ಈಡೇರಲಿದೆ.
“ಮೂಲತಃ ಈ ಜಲಸಂಗ್ರಹಾಗಾರದ ಸಾಮರ್ಥ್ಯ 240 ಎಂ.ಸಿ.ಎï.ಟಿ.ಯಷ್ಟಿದೆ. ತೀರಾ ಇತ್ತೀಚೆಗೆ ಇಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದ ಪರಿಣಾಮ ಸಂಗ್ರಹ ಸಾಮಥ್ರ್ಯ ಇನ್ನೂ 44 ಎಂ.ಸಿ.ಎï.ಟಿ.ಯಷ್ಟು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದೆ. ಇವೆರಡೂ ಸೇರಿದರೆ ಒಟ್ಟು 284 ಎಂ.ಸಿ.ಎï.ಟಿ.ಯಷ್ಟಾಗಲಿದೆ. ಪ್ರಸ್ತುತ ಜಲಸಂಗ್ರಹಾಗಾರದಲ್ಲಿ ಒಟ್ಟಾರೆ 227 ಎಂ.ಸಿ.ಎï.ಟಿ.ಯಷ್ಟು ಹೇಮಾವತಿ ನೀರು ಸಂಗ್ರಹವಾಗಿದೆ” ಎನ್ನುತ್ತಿವೆ ಮೂಲಗಳು.
ತಾತ್ಕಾಲಿಕವಾಗಿ ನೀರು ಸ್ಥಗಿತ
ಈ ಮಧ್ಯ ಕಳೆದ ಮೂರು ದಿನಗಳ ಹಿಂದೆ ನಾಲೆಯಿಂದ ಹೇಮಾವತಿ ನೀರನ್ನು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಯೆಂದೂ, ಆದರೆ ಸುಮಾರು ಒಂದು ವಾರದ ಬಳಿಕ ನೀರಿನ ಪೂರೈಕೆ ಮತ್ತೆ ಆರಂಭವಾಗಲಿದೆಯೆಂಬ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪರಿಶೀಲಿಸಿದಾಗ, ತಾಂತ್ರಿಕ ಕಾರಣದಿಂದ ಕೈಗೊಂಡ ತಾತ್ಕಾಲಿಕ ಕ್ರಮ ಎಂಬುದು ಸ್ಪಷ್ಟಪಟ್ಟಿದೆ.
ಕಳೆದ ಹಲವು ದಿನಗಳಿಂದ ಹೇಮಾವತಿ ನಾಲೆಯ ಮೂಲಕ ಹೇಮಾವತಿ ನೀರು ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹರಿದುಬರುತ್ತಿದೆ. ನಡುವೆ ಕೆಲ ಕಾಲ ನೀರನ್ನು ಸ್ಥಗಿತಗೊಳಿಸಿ ಕುಣಿಗಲ್ ಕಡೆಗೆ ನೀರನ್ನು ಹರಿಸಲಾಗಿತ್ತು. ಬಳಿಕ ಮತ್ತೆ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರನ್ನು ಸರಬರಾಜು ಮಾಡುತ್ತಿದ್ದು, ಇದೀಗ ಭರ್ತಿಯಾಗುವ ಹಂತ ತಲುಪಿದೆ. ಆದರೆ ಪ್ರಸ್ತುತ ತಾಂತ್ರಿಕ ಕಾರಣದಿಂದ ಕಳೆದ ಮೂರು ದಿನಗಳ ಹಿಂದೆ ತಾತ್ಕಾಲಿಕವಾಗಿ ನಾಲೆಯಿಂದ ಹೇಮಾವತಿ ನೀರು ಪೂರೈಕೆಯನ್ನು ನಿಲುಗಡೆಗೊಳಿಸಲಾಗಿದೆ. ಇದಕ್ಕಾಗಿ ಆತಂಕಪಡುವ ಅಗತ್ಯವಿಲ್ಲ. ಮುಂದಿನ ವಾರ ಮತ್ತೆ ನೀರು ಪೂರೈಕೆ ಆರಂಭವಾಗಲಿದೆ” ಎನ್ನಲಾಗುತ್ತಿದೆ.
ಹೇಮಾವತಿ ನೀರಿನಿಂದ ತುಮಕೂರು ನಗರದ ಅಮಾನಿಕೆರೆಯನ್ನು ಭರ್ತಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳು ಈಗಾಗಲೇ ಆರಂಭವಾಗಿದ್ದು, ಭರದಿಂದ ಸಾಗಿವೆ. ಅದಕ್ಕಾಗಿ ಬುಗುಡನಹಳ್ಳಿ ಜಲಸಂಗ್ರಹಾ ಗಾರದಲ್ಲಿ ಬುಗುಡನಹಳ್ಳಿ ಜಾಕ್ವೆಲ್ ಮತ್ತು ಕುಪ್ಪೂರು ಜಾಕ್ವೆಲ್‍ನ ಮಧ್ಯ ಭಾಗದಲ್ಲಿ ಹೊಸದಾಗಿ ಮತ್ತೊಂದು ಜಾಕ್ವೆಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಈಗ ಜಲಸಂಗ್ರಹಾಗಾರದಲ್ಲಿ ತುಂಬುತ್ತಿರುವ ನೀರಿನಿಂದ ಈ ಹೊಸ ಜಾಕ್ವೆಲ್ ಕಾಮಗಾರಿಗೆ ಸ್ವಲ್ಪ ಅಡಚಣೆ ಆಗುತ್ತದೆಂಬ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಂದು ವಾರದಲ್ಲಿ ಈ ಕಾಮಗಾರಿ ಪೂರ್ಣವಾಗಲಿದ್ದು, ಬಳಿಕ ನೀರಿನ ಪೂರೈಕೆ ಪುನರಾರಂಭವಾಗಲಿದೆ. ನಂತರ ಜಲಸಂಗ್ರಹಾಗಾರ ಭರ್ತಿ ಆಗುವವರೆಗೂ ನಾಲೆಯಲ್ಲಿ ನೀರು ಹರಿದುಬರಲಿದೆ” ಎಂದು ಮೂಲಗಳು ವಿವರಿಸುತ್ತಿವೆ.
ಹೆಬ್ಬಾಕ ಕೆರೆಯಲ್ಲಿ ನೀರು
ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಹೆಬ್ಬಾಕ ಕೆರೆಗೆ ನೀರನ್ನು ನಿರಂತರವಾಗಿ ಪಂಪ್ ಮಾಡಲಾಗುತ್ತಿದೆ. ಹೇಮಾವತಿ ನೀರನ್ನು ಹೆಚ್ಚುವರಿಯಾಗಿ ಸಂಗ್ರಹಿಸಿಡುವ ಕಾರಣದಿಂದ ಹೆಬ್ಬಾಕ ಕೆರೆಯನ್ನು ತುಂಬಿಸಲಾಗುತ್ತಿದೆ. ಪ್ರಸ್ತುತ ಹೆಬ್ಬಾಕ ಕೆರೆಯಲ್ಲಿ 120 ಎಂ.ಸಿ.ಎï.ಟಿ.ಯಷ್ಟು ನೀರಿದೆ. ಇದು ಭರ್ತಿಯಾಗಲು ಇನ್ನೂ 70 ಎಂ.ಸಿ.ಎï.ಟಿ.ಯಷ್ಟು ನೀರನ್ನು ತುಂಬಿಸಬೇಕಿದೆ. ಆ ಪ್ರಕ್ರಿಯೆ ಮುಂದುವರೆದಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಹೆಬ್ಬಾಕ ಕೆರೆ ಭರ್ತಿ ಆಗುವ ನಿರೀಕ್ಷೆ ಇದೆ.
“ಸಾಮಾನ್ಯವಾಗಿ ಹೆಬ್ಬಾಕ ಕೆರೆಗೆ ಹರಿಸಿದ ನೀರು ಬೇಗ ಇಂಗಿಹೋಗುತ್ತಿತ್ತು. ಆದರೆ ಈ ಬಾರಿ ಹಾಗಾಗದು. ಕಾರಣ ಇತ್ತೀಚೆಗೆ ಚೆನ್ನಾಗಿ ಮಳೆ ಬಂದಿದೆ. ಎಲ್ಲೆಡೆ ಭೂಮಿಯಲ್ಲಿ ತೇವಾಂಶ ಇದೆ. ಆದ್ದರಿಂದ ಹೆಬ್ಬಾಕ ಕೆರೆಯಲ್ಲಿ ನೀರು ಹೆಚ್ಚಾಗಿ ಇಂಗಿಹೋಗಲಾರದು” ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಮೈದಾಳ ಕೆರೆ ನೀರು
ಇದಲ್ಲದೆ ನಗರಕ್ಕೆ ಮತ್ತೊಂದು ನೀರಿನ ಮೂಲವಾದ ಮೈದಾಳ ಕೆರೆಯಲ್ಲೂ ಇತ್ತೀಚಿನ ಮಳೆಯಿಂದ ನೀರು ಹರಿದುಬಂದಿದ್ದು, ಕೆರೆಯು ಭರ್ತಿಯಾಗುವ ಹಂತ ತಲುಪಿದೆ. ಮೈದಾಳ ಕೆರೆಯಿಂದ ನಗರದ ವಿದ್ಯಾನಗರದ ವಾಟರ್‍ವಕ್ರ್ಸ್‍ಗೆ ನೀರನ್ನು ಪಂಪ್ ಮಾಡಿ, ಅಲ್ಲಿ ಶುದ್ಧೀಕರಿಸಿ, ಪೈಪ್‍ಲೈನ್ ಮೂಲಕ ವಿವಿಧ ಬಡಾವಣೆಗಳಿಗೆ ಹರಿಸುವ ವ್ಯವಸ್ಥೆ ಮೊದಲಿನಿಂದಲೂ ಇದೆ. ಪ್ರಸ್ತುತ ಹೇಮಾವತಿ ನೀರು ಲಭ್ಯವಿರುವುದರಿಂದ ಈ ವ್ಯವಸ್ಥೆಯನ್ನು ಹಾಗೆಯೇ ಬಿಡುವಂತಿಲ್ಲ.
ಕಾರಣ ಯಂತ್ರೋಪಕರಣಗಳು, ಪೈಪ್‍ಲೈನ್‍ನಲ್ಲಿ ತೊಡಕಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ವಾರಕ್ಕೊಂದಾ ವರ್ತಿಯಂತೆ ಮೈದಾಳ ಕೆರೆಯ ನೀರನ್ನು ಪಂಪ್ ಮಾಡಿಕೊಂಡು, ಬಳಸಿಕೊಳ್ಳಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.