ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಕರೆ

ಗುಬ್ಬಿ

      ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಮಹಿಳೆಯರಿಗಾಗಿಯೆ ಇರುವ ವಿಶೇಷ ಕಾನೂನುಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಫೈರೋಜ್ ಹೆಚ್.ಉಕ್ಕಲಿಯವರು ತಿಳಿಸಿದರು.

       ತಾಲ್ಲೂಕಿನ ನಿಟ್ಟೂರಿನ ಶ್ರೀ ಗುಹೇಶ್ವರ ಸ್ವಾಮಿ ದೇವಾಲಯದ ಸಮುದಾಯಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಭಿಯೋಜನಾ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ರಥ ಮತ್ತು ಜನತಾ ಸಂಚಾರಿ ನ್ಯಾಯಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸಬಲೀಕರಣವಾಗಬೇಕು, ಇದು ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು ಸರಿಯಾದ ರೀತಿಯಲ್ಲಿ ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು. ನಿಮಗೆ ಅನ್ಯಾಯವಾಗುತ್ತಿದ್ದರೆ ಅಥವಾ ಯಾರಿಂದಾದರೂ ಸಮಸ್ಯೆ ಇದ್ದಲ್ಲಿ ಕಾನೂನು ಅಗತ್ಯತೆ ಪಡೆಯುವಂತೆ ತಿಳಿಸಿದರು.

      ನಮ್ಮ ಕಾನೂನುಗಳ ಬಗ್ಗೆ ಪರಿಪೂರ್ಣವಾದ ಮಾಹಿತಿ ತಿಳಿದುಕೊಂಡಾಗ ಮಾತ್ರ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಲ್ಲಿ ಕಾನೂನುಗಳ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಾನೂನುಗಳ ಬಗ್ಗೆ ಸಮರ್ಪಕವಾದ ಮಾಹಿತಿಗಳನ್ನು ತಿಳಿದುಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಂತೆ ಕರೆನೀಡಿದರು.

      ಮಹಿಳಾ ಸಂರಕ್ಷಣಾಧಿಕಾರಿ ಅಂಬಿಕಾ ಮಾತನಾಡಿ ಮಹಿಳೆಯರ ದೌರ್ಜನ್ಯಕ್ಕೆ ಒಳಪಟ್ಟಂತಹ ಸಂದರ್ಭದಲ್ಲಿ ಭಯ ಬೀಳದೆ ಕಾನೂನು ಬಳಕೆ ಮಾಡಿಕೊಳ್ಳಿ. ನಮ್ಮ ಬಳಿ ಹಣವಿಲ್ಲ ಹೇಗೆ ಅಲ್ಲಿಗೆ ಹೋಗುವುದು ಎಂದು ಚಿಂತೆ ಬಿಟ್ಟು ಉಚಿತ ಕಾನೂನು ಸೇವಾ ಕೇಂದ್ರದ ವತಿಯಿಂದ ಉಚಿತ ವಕೀಲರ ನೇಮಕ ಮಾಡಿಕೊಳ್ಳುವ ಅವಕಾಶವಿರುತ್ತದೆ ಅದರ ಸದುಪಯೋಗಪಡೆದುಕೊಳ್ಳಿ. ನಮ್ಮ ಕಚೇರಿಗೆ ಆಗಮಿಸಿದರೆ ಎಲ್ಲಾ ರೀತಿಯ ಅನುಕೂಲವನ್ನು ಹಾಗೂ ಕಾನೂನು ಸೇವೆಯನ್ನು ಸಹ ಒದಗಿಸಲಾಗುತ್ತದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರಾಘವೇಂದ್ರಶೆಟ್ಟಿಗಾರ್, ಸಹಾಯಕ ಸರಕಾರಿ ಅಭಿಯೋಜಕ ಮುನಿರಾಜು, ವಕೀಲರಾದ ಪ್ರಮೀಳಾ, ಪುಷ್ಪಾವತಿ, ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ ಷಡಕ್ಷರಿ, ಅಂಗನವಾಡಿ ಮೇಲ್ವಿಚಾರಕಿ ಹುಚ್ಚರಂಗಮ್ಮ ಮುಂತಾದವರು ಭಾಗವಹಿಸಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap