ದಾವಣಗೆರೆ :
ವಸತಿ ರಹಿತರು, ಅಮಾಯಕರು ಕೆಲಸ-ಕಾರ್ಯ ಬಿಟ್ಟು, ಮನೆಗಾಗಿ ಅರ್ಜಿ ಸಲ್ಲಿಸಲು ಇನ್ನೊಬ್ಬರ ಮನೆ ಬಾಗಿಲು ಕಾಯುವಂತೆ ಮಾಡಬೇಡಿ, ಅರ್ಹ ಫಲಾನುಭವಿಗಳಿಂದ ಒಮ್ಮೆಯೇ ಅರ್ಜಿ ಪಡೆದು, ಎಲ್ಲರಿಗೂ ಸೂರು ಕಲ್ಪಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕರ ಮನೆಮುಂದೆ ಮನೆಗಾಗಿ ಅರ್ಜಿಸಲ್ಲಿಸಲು ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಹೀಗೆ ಅಮಾಯಕರು ಕೆಲಸ, ಕೂಲಿ ಬಿಟ್ಟು ಒಬ್ಬರ ಮನೆ ಮುಂದೆ ಯಾಕೆ ಹೋಗಬೇಕು? ಮನೆ ಕೊಡಲು ಜನಪ್ರತಿನಿಧಿಗಳಿಗೆ ಅಧಿಕಾರ ಇದೆಯೇ? ನಾವು ಕೆಲ ಸಲಹೆ, ಸೂಚನೆ ಕೊಡಬಹುದಷ್ಟೆ. ಇದು ಯಾರ ಅಪ್ಪನ ಮನೆಯ ಯೋಜನೆಯೂ ಅಲ್ಲ. ನಮ್ಮ (ಜನಪ್ರತಿನಿಧಿಗಳ) ಮನೆಗಳ ಬಳಿ ಜನರನ್ನು ಏಕೆ ಸುತ್ತಾಡಿಸುತ್ತೀರಿ? ಜನರಿಗೇಕೆ ತಪ್ಪು ಮಾಹಿತಿ ಕೊಡುತ್ತೀರಿ? ಸರಿಯಾದ ಮಾಹಿತಿ ಕೊಡಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ವರಿಗೂ ಸೂರು ಯೋಜನೆಯಡಿ ವಸತಿ ರಹಿತರಿಂದ ಎಷ್ಟು ಅರ್ಜಿಗಳು ಬಂದಿವೆ? ಅವರಿಗೆ ಸೂರು ಕಲ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಮನೆ ಕೋರಿ ಈ ವರೆಗೂ 24 ಸಾವಿರ ಅರ್ಜಿಗಳು ಬಂದಿದ್ದು, ಇವರಿಗೆ ಜಿ ಪ್ಲಸ್ 2 ಮಾದರಿಯಲ್ಲಿ ಮನೆ ನಿರ್ಮಿಸಿಕೊಡಲು ಈಗಾಗಲೇ 75 ಎಕರೆ ಜಮೀನು ಸಹ ಖರೀದಿಸಲಾಗಿದ್ದು, ಇನ್ನೂ 100 ಎಕರೆ ಜಮೀನು ನೋಡಿದ್ದೇವೆ ಎಂದು ಮಾಹಿತಿ ನೀಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಈ 24 ಸಾವಿರ ಜನರಿಗೆ ಸೂರು ಕಲ್ಪಿಸದ ನಂತರದಲ್ಲಿ ಯಾರೂ ಸಹ ಮನೆ ಇಲ್ಲ ಎಂಬುದಾಗಿ ಅರ್ಜಿ ಸಲ್ಲಿಸಲು ಬರಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತೊಮ್ಮೆ ಅರ್ಜಿ ಆಹ್ವಾನಿಸಿ, ಅರ್ಜಿ ಪಡೆದು ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸಬೇಕೆಂದು ಸಲಹೆ ನೀಡಿದರು.
ಮನೆ ಇದ್ದವರೆ, ಮತ್ತೂ ಮನೆಗಾಗಿ ಅರ್ಜಿ ಸಲ್ಲಿಸುವವರಿದ್ದಾರೆ. ಹಿಂದೆ ನಿರ್ಮಾಣವಾಗಿರುವ ಎಸ್.ಎಂ.ಕೃಷ್ಣ ನಗರ, ಎಸ್.ಪಿ.ಎಸ್ ನಗರ, ಎಸ್‍ಓಜಿ ಕಾಲೋನಿಯಲ್ಲಿ ಮನೆ ಇದ್ದವರೆ, ಆಶ್ರಯ ಮನೆ ಪಡೆದು ಅವುಗಳನ್ನು ಬಾಡಿಗೆಗೆ ನೀಡಿ ಬೇರೆಡೆ ನೆಲೆಸಿದ್ದಾರೆ. ಅಂತಹವರ ಯಾರೂ ಕ್ರಮ ಕೈಗೊಂಡಿಲ್ಲ. ನೀವಾದರೂ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸೂಚಿಸಿದರು.
14ನೇ ಹಣಕಾಸು ಯೋಜನೆಯಡಿ ಪಾಲಿಕೆಗೆ 25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ 15 ಕೋಟಿ ಮಾತ್ರ ಖರ್ಚಾಗಿದೆ. ಇನ್ನುಳಿದ 10 ಕೋಟಿ ಖರ್ಚು ಮಾಡುವುದು ಯಾವಾಗ? ಬಂದ ಹಣವನ್ನು ಖರ್ಚು ಮಾಡದಿದ್ದರೆ ಹೇಗೆ? ನಮಗೆ ಕೇಂದ್ರ ಸರ್ಕಾರದಿಂದ ಹಣದ ಬಗ್ಗೆ ಹಾಗೂ ಅದರಲ್ಲಿ ಕೈಗೊಳ್ಳುವ ಕಾಮಾಗಾರಿಯ ಬಗ್ಗೆ ಮಾಹಿತಿಯೇ ನೀಡಲ್ಲ. ಎಲ್ಲಾ ನೀವೇ ಮಾಡ್ಕೋತೀರಾ? ಎಂದು ಪ್ರಶ್ನಿಸಿದರು.
ಪಾಲಿಕೆಗೆ ನಗರೋತ್ಥಾನ ಯೋಜನೆಯಡಿ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಬಿಡುಗಡೆಯಾದ 100 ಕೋಟಿ ಅನುದಾನದಲ್ಲಿ ಈ ವರೆಗೂ ಎರಡು ಕಾಮಗಾರಿಗಳು ಬಾಕಿ ಇವೆ. ಸರ್ಕಾರದಿಂದ ಬರುವ ಹಣದಲ್ಲಿ ಕಾಮಗಾರಿ ಕೈಗೊಳ್ಳಲು 10 ವರ್ಷ ಬೇಕಾ? ಎಂಬ ಸಂಸದರ ಪ್ರಶ್ನೆಗೆ ಉತ್ತರಿಸಿದ ಆಯುಕ್ತ, ಪಾಲಿಕೆಯ ರಾಜನಹಳ್ಳಿ ಕುಡಿಯುವ ನೀರು ಸರಬರಾಜು ಕೇಂದ್ರದಿಂದ ಬಾತಿಯ ವರೆಗೆ ಹೈಟೆನ್ಷನ್ ಎಕ್ಸ್‍ಪ್ರೆಸ್ ಫೀಡರ್ ಲೈನ್ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಆ ಭಾಗದ ರೈತರು ಜಮೀನು ಕೊಡಲು ಒಪ್ಪಿರಲಿಲ್ಲ. ಇತ್ತೀಚೆಗೆ ಸಭೆ ಕರೆದು ಸಮಸ್ಯೆ ಬಗೆಹರಿಸಿದ್ದು, ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದರು.
ನನಗೆ ಸಭೆಯ ನೋಟೀಸ್ ಏಕೆ ನೀಡಲಿಲ್ಲ. ನಾನು ಆ ಸಮಸ್ಯೆ ಬಗೆಹರಿಸುತ್ತಿದ್ದೆ. ಯಾಕೆ ನಾನು ಪಾಲಿಕೆಗೆ ಸಂಬಂಧ ಇಲ್ಲವೇ? ನಿಮ್ಮಗಳ ಬೇಜವಾಬ್ದಾರಿಯಿಂದಲೇ ಕೆಲ ಕಾಮಗಾರಿಹಗಳು ಹಾಗೆಯೇ ಬಾಕಿ ಉಳಿದಿವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.
ಟಿವಿ ಸ್ಟೇಷನ್ ಕೆರೆ ಏರಿ ಮೇಲೆ ಜಂಗಲ್ ಸಾಕಷ್ಟು ಬೆಳೆದಿದೆ. ವಾಯು ವಿಹಾರಕ್ಕೆ ಹೋಗುವವರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಹಾಗೂ ಕೆರೆಯ ಸೌಂದರ್ಯವೂ ಹಾಳಾಗುತ್ತಿದೆ. ಆದ್ದರಿಂದ ಅಲ್ಲಿ ಸ್ವಚ್ಛತೆ ಮಾಡಿಸಿ ಎಂದು ಸೂಚಿಸಿದ ಸಂಸದರು, ಅಲ್ಲಿಯೇ ಸಮೀಪದಲ್ಲಿರುವ ಕೊಳಚೆ ನಿವಾಸಿಗಳು ತಂತಿಬೇಲಿ ಕಟ್ ಮಾಡಿ, ಗಲಿಜು ಮಾಡುತ್ತಿದ್ದಾರೆ. ಇದು ಕುಡಿಯುವ ನೀರು ಪೂರೈಸುವ ಕೆರೆ ಆಗಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ದಾವಣಗೆರೆ ಒಳ ಚರಂಡಿ ವ್ಯವಸ್ಥೆಯನ್ನು ಮೂರು ವಲಯಗಳನ್ನಾಗಿ ಗುರುತಿಸಲಾಗಿದೆ . ಇದರಲ್ಲಿ 1 ಮತ್ತು 3ನೇ ವಲಯದ ಒಳ ಚರಂಡಿ ವ್ಯವಸ್ಥೆ ಲಿಂಕೇಜ್ ಆಗಿದೆ. ಆದರೆ, 2ನೇ ವಲಯವಾದ ಜಿಲ್ಲಾಡಳಿತ ಭವನ ಇರುವ ಪ್ರದೇಶ, ಶಂಕರ್ ವಿಹಾರ್ ಬಡಾವಣೆ ಸೇರಿದಂತೆ ಇತರೆ ಪ್ರದೇಶಗಳ ಯುಜಿಡಿ ಲಿಂಕೇಜ್ ಆಗುತ್ತಿಲ್ಲ. ಹೀಗಾಗಿ ಯುಜಿಡಿ ಅಲ್ಲಲ್ಲಿ ತೆರೆದುಕೊಳ್ಳುತ್ತಿದೆ. ಆದ್ದರಿಂದ ಯುಜಿಡಿ ಪೂರ್ಣ ಲಿಂಕೇಜ್ ಮಾಡಲು ಎಷ್ಟು ಹಣ ಬೇಕೆಂಬುದರ ಬಗ್ಗೆ ಕ್ರಿಯಾ ಯೋಜನೆ ರಚಿಸಿ ತಮಗೆ ಪ್ರಾಸ್ತಾವನೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಯೋಜನಾ ನಿರ್ದೇಶಕಿ ನಜ್ಮಾ, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಅರ್ಷದ್ ಷರೀಫ್, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ರಮೇಶ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








