ದಾನಿಗಳ ನೆರವಿನಿಂದ ಶುದ್ಧ ನೀರಿನ ಘಟಕ ಸ್ಥಾಪಿಸಿ

ದಾವಣಗೆರೆ :

   ಕುಡಿಯುವ ನೀರಿನ ಅವಶ್ಯಕತೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನ ಸಮಿತಿಗಳು ಹಾಗೂ ದಾನಿಗಳ ಸಹಾಯದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸಲಹೆ ನೀಡಿದರು.

   ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 755 ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಜಿಲ್ಲೆಯಲ್ಲಿ 1200 ಗ್ರಾಮಗಳಿದ್ದು ಇದರಲ್ಲಿ ಶೇ.50 ರಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಉಳಿದೆಡೆ ಇತರೆ ದಾನಿಗಳು, ದೇವಸ್ಥಾನಗಳ ಸಮಿತಿ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

    ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ 7 ಗ್ರಾಮಗಳಲ್ಲಿ ಮಳೆಯಿಂದಾಗಿ ಬೋರ್‍ವೆಲ್ ರೀಚಾರ್ಜ್ ಆಗಿದ್ದು, ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. ಇನ್ನು 11 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೊರೈಸಲಾಗುತ್ತಿದೆ. ಜಗಳೂರಿನಲ್ಲಿ ಹಿಂದಿನಂತೆಯೇ ಸಮಸ್ಯೆ ಮುಂದುವರೆದಿದ್ದು, 52 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 35 ಗ್ರಾಮಗಳಿಗೆ 55 ಖಾಸಗಿ ಬೋರ್‍ವೆಲ್‍ಗಳಿಂದ ನೀರು ಪೂರೈಸಲಾಗುತ್ತಿದೆ ಎಂದರು.

    ಉಸ್ತುವಾರಿ ಕಾರ್ಯದರ್ಶಿ ಮಾತನಾಡಿ, ಬರಪೀಡಿತ ಜಗಳೂರು ತಾಲ್ಲೂಕಿನಲ್ಲಿ ಎಷ್ಟು ಗೋಶಾಲೆಗಳು ನಡೆಯುತ್ತಿವೆ ಎಂದು ಕೇಳಿದಾಗ, ಎಸಿಯವರು ಪ್ರತಿಕ್ರಿಯಿಸಿ ತಾಲ್ಲೂಕಿನಲ್ಲಿ ಸ್ವಲ್ಪ ಮಳೆಯಾದ ಕಾರಣ ದನಕರುಗಳಿಗೆ ಮೇವು ದೊರೆಯುತ್ತಿದೆ. ಆದರೆ ಹಿರೆಮಲ್ಲನಹೊಳೆ ಗೋಶಾಲೆ ಮಾತ್ರ ನಿರಂತರವಾಗಿ ನಡೆಯುತ್ತಿದೆ ಎಂದರು.

   ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದಗಲ್ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಮುಂಗಾರಿನ ಆರಂಭದಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಕುಂಠಿತವಾಗಿತ್ತು. ಜುಲೈ ಮಾಹೆಯಲ್ಲಿ ಮಳೆಯಾದ್ದರಿಂದ ಶೇ.71 ರಷ್ಟು ಬಿತ್ತನೆಯಾಗಿದೆ. ಆಗಸ್ಟ್ ಮಾಹೆಯಲ್ಲಿ ಮಳೆ ಹೆಚ್ಚಾದ್ದರಿಂದ ಬೆಳೆ ಇಳುವರಿಯಲ್ಲಿ ಕುಂಠಿತವಾಗುವ ಸಾಧ್ಯತೆಯಿದ್ದು, ಶೇ.90 ರಷ್ಟು ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದರು.

    ಉಸ್ತುವಾರಿ ಕಾರ್ಯದರ್ಶಿಗಳು ಮಾತನಾಡಿ, ಹರಿಹರ ಮತ್ತು ಹೊನ್ನಾಳಿ ಭಾಗದಲ್ಲಿ ಪ್ರವಾಹದಿಂದಾಗಿ ಹಾನಿಯಾಗಿರುವ ಕಡೆಗಳಲ್ಲಿ ಪರಿಹಾರ ಕಾರ್ಯ ಹೇಗೆ ಸಾಗಿದೆ ಎಂದರು. ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಹರಿಹರ ಹಾಗೂ ಹೊನ್ನಾಳಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಕುರಿತು ತಂತ್ರಾಂಶದಲ್ಲಿ ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಈ ಕಾರ್ಯ ಪೂರ್ಣವಾದ ನಂತರ ನೆರೆ ಸಂತ್ರಸ್ಥರ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಆಗಲಿದೆ ಎಂದರು.

    ಜಿ ಪಂ ಪ್ರಭಾರ ಸಹಾಯಕ ಯೋಜನಾ ನಿರ್ದೇಶಕ ಆನಂದ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 19 ಲಕ್ಷ ಮಾನವ ದಿನಗಳ ಗುರಿಯಲ್ಲಿ ಜಗಳೂರು ತಾಲ್ಲೂಕಿಗೆ ಹೆಚ್ಚು ಮಾನವ ದಿನಗಳನ್ನು ನೀಡಲಾಗಿದೆ. 13 ಲಕ್ಷ ಮಾನವ ದಿನಗಳನ್ನು ಜಗಳೂರಿಗೆ ನೀಡಲಾಗಿದ್ದು ಇದರಲ್ಲಿ 9.54 ಲಕ್ಷ ಮಾನವ ದಿನಗಳನ್ನು ಪೂರೈಸಲಾಗಿದೆ. ಉಳಿದಂತೆ ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ 6 ಲಕ್ಷ ಮಾನವ ದಿನಗಳನ್ನು ನೀಡಲಾಗಿದೆ. ನರೇಗಾದಡಿ ಕಾರ್ಮಿಕರಿಗೆ ಜಗಳೂರು ತಾಲ್ಲೂಕಿನಲ್ಲಿ ಶೇ.51, ಚನ್ನಗಿರಿ ತಾಲ್ಲೂಕು ಶೇ. 93 ಹಾಗೂ ದಾವಣಗೆರೆ ತಾಲ್ಲೂಕು ಶೇ.97 ಕೂಲಿ ಹಣ ಪಾವತಿಸಲಾಗಿದೆ ಎಂದರು.

    ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಕ್ರಿಯಿಸಿ, ಜನರಿಗೆ ಉದ್ಯೋಗ ನೀಡುವುದು ಮುಖ್ಯವಲ್ಲ. ಅವರಿಗೆ ಸರಿಯಾದ ಸಮಯಕ್ಕೆ ಕೂಲಿ ಪಾವತಿಸುವುದು ಮುಖ್ಯ. ಆದ್ದರಿಂದ ಶೀಘ್ರವಾಗಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯನ್ನು ಯಾವ ರೀತಿಯಾಗಿ ನಡೆಸಲಾಗುತ್ತಿದೆ. ಹಾಗೂ ಅಗತ್ಯ ಪಲಾನುಭವಿಗಳಿಗೆ ರೇಷನ್ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

     ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಪಡಿತರ ಚೀಟಿ ವಿತರಣೆ ಕಾರ್ಯ ನಡೆಯುತ್ತಿದ್ದು, ಆಧಾರ್ ಲಿಂಕ್ ಮಾಡದವರ ಪಡಿತರ ಚೀಟಿಗಳನ್ನು ಅನರ್ಹಗೊಳಿಸಲಾಗಿದ್ದು. ಅಂತಹವರಿಗೆ ರೇಷನ್ ನೀಡುತ್ತಿಲ್ಲ. ಹಾಗೂ ಪಡಿತರ ಚೀಟಿಯ ಪೋರ್ಟಬಲಿಟಿಯಿಂದಾಗಿ ರಾಜ್ಯದ ಎಲ್ಲಾ ಕಡೆ ಅರ್ಹ ಪಲಾನುಭವಿಗಳು ಅಗತ್ಯವಾದ ರೇಷನ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

       ಹೊಸದಾದ ಪಡಿತರ ಚೀಟಿಯನ್ನು ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಪಡಿತರ ಚೀಟಿಯನ್ನು ದೇಶದದ್ಯಂತ ಪೋರ್ಟಬಲಿಟಿ ಮಾಡಲು ಸರ್ವೆ ನಡೆಯುತ್ತಿದೆ. ಈ ಕುರಿತು ಒಂದು ಕಾರ್ಯಾಗಾರವನ್ನು ಸಹ ನಡೆಸಲಾಗಿದೆ ಎಂದರು.
ಉಸ್ತುವಾರಿ ಕಾರ್ಯದರ್ಶಿ ಮಾತನಾಡಿ, ಜಿಲ್ಲೆಯಲ್ಲಿ ಮಾಶಾಸನ ನೀಡುವಲ್ಲಿ ಯಾವುದೇ ತೊಂದರೆ ಹಾಗೂ ವಿಳಂಭವಾಗಿದ್ದರೆ ಅದನ್ನು ಕೂಡಲೇ ಸರಿಪಡಿಸಿ ಎಂದರು. ದಾವಣಗೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಇವರೆಗೆ ಮಾಶಾಸನ ನೀಡುವಲ್ಲಿ ಯಾವುದೇ ತೊಂದರೆಗಳು ಸಂಭವಿಸಿಲ್ಲ. ಆದರೆ ನಾಲ್ಕು ತಿಂಗಳಿಂದ ಹೊಸದಾಗಿ ಮಂಜೂರಾದ ಮಾಶಾಸನಗಳು ಖಜಾನೆ-2 ತಂತ್ರಾಂಶದಲ್ಲಿ ದಾಖಲಿಸುವಾಗ ವಿಳಂಭವಾಗುತ್ತಿದೆ. ಇಂತಹ ಪ್ರಕರಣಗಳನ್ನು ದಾಖಲೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತಿದೆ ಎಂದು ತಿಳಿಸಿದರು.

     ಮಳೆಹಾನಿಯಿಂದಾಗಿ ಎಷ್ಟು ಹಾನಿಯಾಗಿದೆ ಎಂದಾಗ ಅಪರ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಜಿಲ್ಲೆಯಾದ್ಯಂತ ಒಟ್ಟು 282 ಮನೆಗಳು ಭಾಗಶಃ ಹಾನಿಯಾಗಿದ್ದು, ನಗರದಲ್ಲಿ ಮೂರು ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. ಗಂಜಿ ಕೇಂದ್ರದಲ್ಲಿ ಇರುವವರಿಗೆ ಹತ್ತು ಸಾವಿರ ಪರಿಹಾರ ನೀಡಲಾಗಿದೆ ಎಂದರು. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಲಾಮೃತ ಯೋಜನೆ, ಆರೋಗ್ಯ ಇಲಾಖೆ, ವಸತಿ ನಿಲಯಗಳ ಸಮಸ್ಯೆ ಮುಂತಾದವುಗಳ ಬಗೆಗೆ ಮಾಹಿತಿ ಪಡೆದುಕೊಂಡರು.

     ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಜಿ ಪಂ ಉಪಕಾರ್ಯದರ್ಶಿ ಜಗದೀಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಕುಂಬಾರ, ತಾಪಂ ಇಓಗಳು ಹಾಗೂ ತಹಶೀಲ್ದಾರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap