ತುಮಕೂರು

ವಿಶೇಷ ವರದಿ :ರಾಕೇಶ್.ವಿ.
ನಗರದ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದ ಬಸ್ ಶೆಲ್ಟರ್ಅನ್ನು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಮಾಡಲಾಗಿದೆ. ಇದು ದಾಖಲೆಗಳಿಗೆ ಮಾತ್ರ ಸೀಮಿತವಾದಂತೆ ಎಲ್ಲಿಯೂ ಅಭಿವೃದ್ದಿ ಮಾಡಿದಂತೆ ಕಾಣುವುದೇ ಇಲ್ಲ.
ಹೌದು ಮಹಿಳಾ ಕಾಲೇಜು ಮುಂಭಾಗದ ಗೇಟ್ ಪಕ್ಕದಲ್ಲಿ ಒಂದರಪಕ್ಕ ಮತ್ತೊಂದು ಹೀಗೆ ಎರಡು ಬಸ್ ಶೆಲ್ಟರ್ಗಳು ಇವೆ. ಹತ್ತಿರದಲ್ಲೇ ಕಾಲೇಜುಗಳು ಇರುವುದರಿಂದ ಸಾಮಾನ್ಯವಾಗಿ ಜನಸಂದಣಿ ಇರುತ್ತದೆ. ಇಲ್ಲಿಂದ ಕುಣಿಗಲ್ ಕಡೆಗೆ, ಗುಬ್ಬಿ, ತಿಪಟೂರು ಕಡೆಗೆ ಹೋಗುವ ಬಸ್ಗಳು ಈ ಬಸ್ ಶೆಲ್ಟರ್ ಮುಂದೆಯಿಂದಲೇ ಹೋಗುವುದರಿಂದ ಇವುಗಳ ಅಭಿವೃದ್ಧಿ ಅವಶ್ಯಕವಿತ್ತು.
ಆದರೆ ಇಲ್ಲಿ ಮಾಡಲಾಗಿದೆ ಎಂಬ ಅಭಿವೃದ್ಧಿ ಯಾವ ಮೂಲೆಯಿಂದಲೂ ಕಣ್ಣಿಗೆ ಕಾಣುವುದೇ ಇಲ್ಲ. ಇದಲ್ಲದೆ ಈ ಮುಂಚೆಯೇ ತುಮಕೂರು ವಿವಿ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಮಾದರಿ ಬಸ್ ನಿಲ್ದಾಣದ ಬಳಕೆ ಹೇಗಿದೆ ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದೀಗ ಟೌನ್ಹಾಲ್ ಬಳಿ ಇರುವ ಎರಡು ಬಸ್ ಶೆಲ್ಟರ್ಗಳಲ್ಲಿ ಅಭಿವೃದ್ಧಿ ಮಾಡಲಾದ ಬಸ್ ಶೆಲ್ಟರ್ ಬಳಕೆಯಾಗದೆ ವ್ಯರ್ಥವಾಗಿ ನಿಂತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಒಂದೇ ಕಡೆ ಎರಡು ಶೆಲ್ಟರ್ಗಳು
ಸಿದ್ದಗಂಗಾ ಮಹಿಳಾ ಕಾಲೇಜು ಬಳಿ ಟೂಡಾದ ವತಿಯಿಂದ ಮಾಡಲಾದ ಬಸ್ ನಿಲ್ದಾಣ ಹಾಗೂ ಪಾಲಿಕೆಯಿಂದ ಮಾಡಲಾದ ಬಸ್ ನಿಲ್ದಾಣ ಎರಡೂ ಒಂದೆ ಕಡೆ ಇವೆ. ಈ ಎರಡರಲ್ಲಿ ಪಾಲಿಕೆಯಿಂದ ಅಭಿವೃದ್ಧಿ ಮಾಡಲಾದ ಬಸ್ ನಿಲ್ದಾಣ ಸುಸಜ್ಜಿತವಾಗಿದೆ. ಪಕ್ಕದಲ್ಲಿನ ಟೂಡಾದಿಂದ ಮಾಡಲಾದ ಬಸ್ ಶೆಲ್ಟರ್ಅನ್ನು ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಪಡಿಸಲಾಗಿದೆ.
ಯಾವ ರೀತಿಯ ಅಭಿವೃದ್ಧಿ ನಡೆದಿದೆ..?
ಎರಡೂ ಬಸ್ ಶೆಲ್ಟರ್ಗಳ ಮುಂಭಾಗದಲ್ಲಿ ಫ್ಲೋರಿಂಗ್ ವ್ಯವಸ್ಥೆ ಮಾಡಲಾಗಿದೆ. ಶೆಲ್ಟರ್ನ ಹಿಂಭಾಗದಲ್ಲಿ ಪಾಲಿಕಾರ್ಬೋನೆಟ್ ಶೀಟ್ಗಳನ್ನು ಅಳವಡಿಸಲಾಗಿದೆ. ಶೆಲ್ಟರ್ನ ಪೈಪ್ಗಳಿಗೆ ಬಣ್ಣ ಬಳಿಯಲಾಗಿದೆ. ಜಾಹಿರಾತು ಪ್ಯಾನೆಲ್ಅನ್ನು ಅಭಿವೃದ್ಧಿ ಪಡಿಸಲಾಗಿದೆ.
9 ಲಕ್ಷವೆಚ್ಚದಲ್ಲಿ ಅಭಿವೃದ್ಧಿ
ಸಿದ್ದಗಂಗಾ ಮಹಿಳಾ ಕಾಲೇಜು ಬಳಿ ಇರುವ ಬಸ್ ಶೆಲ್ಟರ್ ಸೇರಿದಂತೆ ನಗರದಲ್ಲಿ ವಿವಿಧ ಬಸ್ ಶೆಲ್ಟರ್ಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿಯ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ ಬರೊಬ್ಬರಿ 9 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ. ಆದರೆ ಕಚೇರಿಯ ಮಾಹಿತಿಯ ಪ್ರಕಾರ 7.56 ಲಕ್ಷ ರೂಗಳ ಅಂದಾಜಿಗೆ ಟೆಂಡರ್ ಪಡೆದ ಗುತ್ತಿಗೆದಾರರು 6.54 ಲಕ್ಷಕ್ಕೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಬಳಕೆಯಾಗದ ಬಸ್ ಶೆಲ್ಟರ್
ಮುಸ್ಲಿಂ ಸಮುದಾಯದ ದರ್ಗಾದ ಪಕ್ಕದಲ್ಲಿ ಆಟೋ ನಿಲ್ದಾಣ, ಅದರ ಪಕ್ಕದಲ್ಲಿ ಈಗಾಗಲೇ ಎರಡು ಬಸ್ ಶೆಲ್ಟರ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಮೊದಲಿಗಿರುವ ಪಾಲಿಕೆಯ ಬಸ್ ಶೆಲ್ಟರ್ನಲ್ಲಿ ವಿದ್ಯಾರ್ಥಿಗಳು,, ಪ್ರಯಾಣಿಕರು ಇರುವುದರಿಂದ ಬಸ್ಗಳನ್ನು ನಿಲ್ಲಿಸಲಾಗುತ್ತಿದೆ. ಅದರ ಪಕ್ಕದಲ್ಲಿನ ಟೂಡಾದ ಬಸ್ ಶೆಲ್ಟರ್ನಲ್ಲಿ ಯಾರೂ ನಿಂತುಕೊಳ್ಳುವುದೇ ಇಲ್ಲ. ಹಾಗಾಗಿ ಇದು ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿಲ್ಲ.
ವ್ಯರ್ಥವಾಗಿ ನಿಂತಿರುವ ಇ-ಟಾಯ್ಲೆಟ್
ಕಾಲೇಜು ಗೇಟ್ ಪಕ್ಕದಲ್ಲೆ ಸ್ಮಾರ್ಟ್ ಸಿಟಿಯಿಂದ 17 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಇ ಟಾಯ್ಲೆಟ್ಗಳು ಬಳಕೆಯಾಗದೆ ವ್ಯರ್ಥವಾಗಿ ನಿಂತಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಎಂದು ಎರಡು ಟಾಯ್ಲಟ್ಗಳನ್ನು ಅಳವಡಿಸಿದರಾದರೂ ಅವುಗಳು ಪ್ರಾರಂಭದಿಂದಲೂ ಬೇರೆ ಬೇರೆ ಕಾರಣಗಳಿಂದ ತೆರೆಯಲೇ ಇಲ್ಲ. ಇಂದಿಗೂ ಅವುಗಳಿಗೆ ವಿದ್ಯುತ್ ಸೌಲಭ್ಯವಿಲ್ಲದೆ ಬಳಕೆಯಾಗುತ್ತಿಲ್ಲ. ಈ ಕುರಿತ ವರದಿಯನ್ನು ಈ ಹಿಂದೆಯೇ ಪ್ರಕಟಿಸಿ ಬೆಳಕು ಚೆಲ್ಲಲಾಗಿತ್ತು. ಅದರ ಫಲವಾಗಿ ಅದನ್ನು ಸರಿಪಡಿಸಿದರಾದರೂ ಬಳಕೆಗೆ ಇನ್ನು ಅವಕಾಶ ನೀಡಿಲ್ಲ.
3 ತಿಂಗಳ ಕಾಲಾವಧಿ
ಬಸ್ ಶೆಲ್ಟರ್ನ ಅಭಿವೃದ್ಧಿ ಮಾಡಲು ಸ್ಮಾರ್ಟ್ ಸಿಟಿಯಿಂದ ಮೂರು ತಿಂಗಳು ಮಾತ್ರ ಗಡುವು ನೀಡಲಾಗಿತ್ತು. ಈ ಕಾಮಗಾರಿಯನ್ನು ನಾಗರಾಜು ಇ.ಟಿ. ಎಂಬ ಗುತ್ತಿಗೆದಾರರು ನಡೆಸಿದ್ದು, 2018ರ ಜೂನ್ 26ರಂದು ಪ್ರಾರಂಭ ಮಾಡಿ 2018ರ ಸೆಪ್ಟೆಂಬರ್ 21ಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಸ್ಮಾರ್ಟ್ ಸಿಟಿಯ ವೆಬ್ಸೈಟ್ನಲ್ಲಿ ಮಾತ್ರ 2020ರ ಜನವರಿ 08ಕ್ಕೆ 501 ದಿನಗಳು ತಡವಾಗಿದೆ ಎಂಬುದಾಗಿ ತೋರಿಸಲಾಗುತ್ತಿದ್ದು, ಇದರಿಂದ ಗೊಂದಲಗಳು ಉಂಟಾಗುತ್ತಿವೆ.
ಸ್ವಚ್ಛತೆ ಮರೀಚಿಕೆ
ಬಸ್ ಶೆಲ್ಟರ್ನ ಸ್ಥಳದಲ್ಲಿ ಮಹಾನಗರ ಪಾಲಿಕೆಯಿಂದ ಕಸವನ್ನು ಸ್ವಚ್ಛ ಮಾಡುತ್ತಿಲ್ಲ. ಬಸ್ ಶೆಲ್ಟರ್ನ ಎಡಭಾಗದ ಮೂಲೆಯಲ್ಲಿ ಕೊಳಚೆ ನೀರು ನಿಂತುಕೊಂಡು ಸ್ವಚ್ಛತೆ ಮರೀಚಿಕೆ ಆಗಿದೆ. ಇದು ಮೂತ್ರ ವಿಸರ್ಜನೆಯ ಸ್ಥಳದಂತೆ ಮಾರ್ಪಾಟಾಗಿದ್ದು, ವಿದ್ಯಾರ್ಥಿಗಳಾಗಲಿ, ಇತರೆ ಪ್ರಯಾಣಿಕರಾಗಲಿ ಈ ಭಾಗದ ಕಡೆಗೆ ನಿಲ್ಲುವುದಿಲ್ಲ. ಬಸ್ ಶೆಲ್ಟರ್ ಮುಂಭಾಗದಲ್ಲಿಯೂ ಕೂಡ ನೀರು ನಿಂತು ದುರ್ವಾಸನೆ ನಾರುತ್ತಿದೆ.
ಹೆಚ್ಚುವರಿ ಬಸ್ ನಿಲ್ದಾಣಗಳನ್ನು ಮಾಡಲು ಕೋರಿಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಗರದಲ್ಲಿ ಕೇವಲ ಬಸ್ ನಿಲುಗಡೆಗೆ ಸೂಚಿಸಲಾದ ಸ್ಥಳಗಳಲ್ಲಿ ವಿನೂತನ ಮಾದರಿಯಲ್ಲಿ ಬಸ್ ಶೆಲ್ಟರ್ಗಳನ್ನು ನಿರ್ಮಾಣ ಮಾಡಿಕೊಡುವಂತೆ ಸ್ಮಾರ್ಟ್ ಸಿಟಿ ಕಂಪನಿಗೆ ಕೋರಿಕೆ ಪತ್ರ ಬಂದಿದ್ದು, ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಬಳಿ ಚರ್ಚೆ ಮಾಡಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬುದಾಗಿ ಕಚೇರಿ ಮೂಲಗಳು ತಿಳಿಸಿವೆ.
ಪಾಲಿಕೆಯದ್ದೇ ನಿರ್ವಹಣೆ
ಬಸ್ ಶೆಲ್ಟರ್ಗಳನ್ನು ಅಭಿವೃದ್ಧಿ ಮಾಡುವಾಗಲೇ ಪಾಲಿಕೆಗೆ ಮಾಹಿತಿ ನೀಡಲಾಗುತ್ತದೆ. ಅದರ ಅಭಿವೃದ್ಧಿ ಕೆಲಸ ಮುಗಿದ ನಂತರ ಪಾಲಿಕೆಯವರು ಅದರ ನಿರ್ವಹಣೆ ನೋಡಿಕೊಳ್ಳಬೇಕು. ಶೆಲ್ಟರ್ ಮೇಲ್ಭಾಗದಲ್ಲಿ ಜಾಹಿರಾತು ಅಳವಡಿಕೆಗೆ ಟೂಡಾ ಇಲಾಖೆಗೆ ಅಧಿಕಾರವಿದ್ದು, ಟೂಡಾ ಹಾಗೂ ಪಾಲಿಕೆಯ ಜೊತೆಯಲ್ಲಿ ಸಮನ್ವಯತೆಯಲ್ಲಿ ನಿರ್ವಹಣೆ ಮಾಡಿಕೊಳ್ಳಬೇಕಿದೆ.
ಸ್ಮಾರ್ಟ್ ಸಿಟಿಯಿಂದ ಬಸ್ ಶೆಲ್ಟರ್ ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿ ಯಾವಾಗ ನೊಡಿದರೂ ಕಸ ಬಿದ್ದಿರುತ್ತದೆ. ರಸ್ತೆಯಲ್ಲಿ ಬಸ್ ಚಲಿಸದರೆ ಸಾಕು ಇಲ್ಲಿ ಧೂಳು ಏಳುತ್ತದೆ. ಇಲ್ಲಿ ಸ್ವಚ್ಛತೆಯ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ. ಅಲ್ಲದೆ ಬಸ್ ಶೆಲ್ಟರ್ ಧೂಳಿನಮಯವಾಗಿದೆ. ಇಲ್ಲಿ ನಿಂತುಕೊಂಡು ಬಸ್ಗಾಗಿ ಕಾಯುತ್ತಿದ್ದರೆ ಕಾಯಿಲೆಗೆ ತುತ್ತಾಗಬೇಕಾಗುತ್ತದೆ.
ಸುಶ್ಮಿತ, ವಿದ್ಯಾರ್ಥಿನಿ
ಸ್ಮಾರ್ಟ್ ಸಿಟಿಯಿಂದ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಯುತ್ತಿಲ್ಲ. ಒಂದು ಕಡೆ ಹಾಕಲಾದ ಎಲ್ಇಡಿ ಬೋರ್ಡ್ನಲ್ಲಿ ಯಾವುದೇ ಮಾಹಿತಿ ಬರುವುದಿಲ್ಲ. ಕೇವಲ ವೆಲ್ಕಂ ಟು ತುಮಕೂರು ಎಂಬ ಪ್ರದಗಳು ಮಾತ್ರ ಪ್ರದರ್ಶನವಾಗುತ್ತಿವೆ. ಇದರ ನಿರ್ವಹಣೆ ಮಾಡುವವರು ಯಾರೂ ಇಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಲಿ.
ನಾರಾಯಣ್, ಪ್ರಯಾಣಿಕ
ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ತುರ್ತಾಗಿ ಕೆಲ ಶೆಲ್ಟರ್ಗಳನ್ನು ಸುಂದರೀಕರಣ ಮಾಡಲಾಗಿದೆ. ಅವುಗಳನ್ನು ಅಭಿವೃದ್ಧಿ ಮಾಡಲಾಗುವುದು. ಟೂಡಾ ಹಾಗೂ ಪಾಲಿಕೆಯಿಂದ ಮಾಡಿದ್ದ ಶೆಲ್ಟರ್ಗಳ ಸ್ಥಿತಿಗತಿಗಳ ಮೇಲೆ ಅವುಗಳನ್ನು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಸದ್ಯಕ್ಕೆ ಭದ್ರಮ್ಮ ವೃತ್ತದಿಂದ ಬಟವಾಡಿವರೆಗೆ ಇರುವ ಬಸ್ ಶೆಲ್ಟರ್ಗಳನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ.
ರಶ್ಮಿ ಎಸ್.ಆರ್., ಸಹಾಯಕ ಕಾರ್ಯಪಾಲಕ ಅಭಿಯಂತರರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








