ಚಿತ್ರದುರ್ಗ;
ವಿಳಂಬ ಮಾಡದೇ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಆಗ್ರಹಿಸಿ ಎಐಡಿಯುಓ ಸಂಘಟನೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ವರ್ಷದ ಬಸ್‍ಪಾಸ್ ಕಡ್ಡಾಯ ಮಾಡದೇ, ಕಾಲೇಜಿನ ಶುಲ್ಕ ಕಟ್ಟಿದ ರಶೀದಿ/ಗುರುತಿನ ಚೀಟಿಯೊಂದಿಗೆ ಓಡಾಡಲು ವ್ಯವಸ್ಥೆ ಕಲ್ಪಿಸಿಕೊಡಬೇಕು. ಬಸ್‍ಪಾಸ್ ಶುಲ್ಕ ಏರಿಕೆಯ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಬೇಕು ಹಾಗೂ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಬಸ್‍ಪಾಸ್ ವಿತರಿಸಬೇಕು ಎಂದು ಒತ್ತಾಯಿಸಿದರು
ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್ ರವಿಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ಶಾಲಾ ಕಾಲೇಜು ರಾಜ್ಯವ್ಯಾಪಿ ಮೇ ತಿಂಗಳಿನಲ್ಲೇ ಪ್ರಾರಂಭವಾಗಿವೆ. ವಿದ್ಯಾರ್ಥಿಗಳಿಗೆ ಸುಗಮವಾಗಿ ತರಗತಿಗಳಿಗೆ ಹಾಜರಾಗಲು ಬಸ್‍ಪಾಸ್ ಅತ್ಯಗತ್ಯವಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ಇನ್ನೂ ಬಸ್‍ಪಾಸ್ ದೊರಕದೆ ಪ್ರತಿದಿನ ವಿದ್ಯಾರ್ಥಿಗಳು ಬಸ್ ಟಿಕೇಟ್‍ಗೆ ಅಧಿಕ ಹಣ ವ್ಯಯಿಸಿ ಪ್ರಯಾಣಿಸುವಂತಾಗಿದೆ. ಬಡ ವಿದ್ಯಾರ್ಥಿಗಳು ಇನ್ನು ತರಗತಿಗಳಿಗೆ ಬರುತ್ತಿಲ್ಲ. ಇವರ ಪಾಲಕರಿಗೆ ಶಾಲಾ-ಕಾಲೇಜು ಶುಲ್ಕ ಕಟ್ಟಿ ಬಸ್‍ಪಾಸ್‍ಗೆ ಸಾವಿರ ರೂಪಾಯಿ ಪಾವತಿಸುವುದೇ ಹೊರೆಯಾಗಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆ ಪಾಸ್‍ನ್ನು ತಿಂಗಳುಗಟ್ಟಲೇ ತಡಮಾಡಿ ಕೊಟ್ಟೆರೆ ಪಾಸ್ ದರದ ಎರಡರಷ್ಟು ಹಣ ಈ ಒಂದು ತಿಂಗಳಲ್ಲೇ ಟಿಕೇಟ್‍ಗೆ ವ್ಯಯಿಸುವಂತಾಗಿದೆ.
ಬಸ್‍ಪಾಸ್ ಇನ್ನೂ ಮುದ್ರಣವಾಗದಿರುವುದು ಆಶ್ಚರ್ಯ ಹುಟ್ಟಿಸುತ್ತಿದೆ. ಕೇವಲ ಈ ಸಾರಿ ಅಷ್ಟೇ ಅಲ್ಲದೇ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಈ ಸಮಸ್ಯೆ ಮರುಕಳಿಸುತ್ತಿದೆ. ಮೇ ತಿಂಗಳಲ್ಲೇ ಶಾಲಾ ಕಾಲೇಜುಗಳನ್ನು ಆರಂಭಿಸುವಂತೆ ಆದೇಶ ಹೊರಡಿಸುವ ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೇ ಕೇವಲ ನಾಮಕಾವಸ್ಥೆಗೆ ಆದೇಶ ಹೊರಡಿಸಿದೆಯೇ ಎಂಬ ಪ್ರಶ್ನೆಯು ಉದ್ಭವಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
