ದಾವಣಗೆರೆ :
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರುಗಳಿಂದ ರಾಗಿ, ಭತ್ತ ಹಾಗೂ ಬಿಳಿ ಜೋಳ ಖರೀದಿಸಲು ಜಿಲ್ಲೆಯಲ್ಲಿ ಡಿ.26ರಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಯಾವುದಕ್ಕೆ ಎಷ್ಟು ಬೆಲೆ:
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸಂಜೆ ನಡೆದ ಟಾಸ್ಕ್‍ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಭತ್ತ ಕ್ವಿಂಟಾಲ್‍ಗೆ 1815ರಿಂದ 1835 ರೂ. ಹಾಗೂ ರಾಗಿ 3150 ರೂ. ಬೆಂಬಲ ಬೆಲೆಯನ್ನು ನಿಗದಿಪಡಿಸಿಲಾಗಿದೆ ಎಂದರು.
3 ದಿನದಲ್ಲಿ ಹಣ ಜಮೆ:
ಒಬ್ಬ ರೈತ 40 ಕ್ವಿಂಟಾಲ್ ವರೆಗೆ ಭತ್ತವನ್ನು ಹಾಗೂ 75 ಕ್ವಿಂಟಾಲ್‍ವರೆಗೆ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದಾಗಿದೆ. ಇಲಾಖೆಯ ಅಧಿಕಾರಿಗಳು ಈ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸಿ, ಕೃಷಿ ಉತ್ಪನ್ನಗಳನ್ನೂ ಖರೀದಿ ಕೇಂದ್ರಕ್ಕೆ ನೀಡಿದ 3 ದಿನಗಳ ಒಳಗೆ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ಹೇಳಿದರು.
ಮನೆ ಬಾಗಿಲಲ್ಲಿ ಭತ್ತ ಖರೀದಿ:
ರೈತರು ಪಹಣಿಯೊಂದಿಗೆ ಆಗಮಿಸಿ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ಡಿ.26 ರಿಂದ 2020ರ ಜನವರಿ 10 ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದ್ದು, ರೈತರ ಬಯೋಮಿಟ್ರಿಕ್ ತೆಗೆದುಕೊಳ್ಳಲಾಗುವುದು. ಭತ್ತ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯ ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದು, ರೈತರು ಮಾದರಿ (ಸ್ಯಾಂಪಲ್)ಗಳನ್ನು ಮಾತ್ರ ಈ ಕೇಂದ್ರಗಳಲ್ಲಿ ನೀಡಬೇಕು. ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಹಲ್ಲಿಂಗ್ ವ್ಯವಸ್ಥೆ ಇರುವ ಅಕ್ಕಿ ಗಿರಣಿ ಮಾಲೀಕರು ನೇರವಾಗಿ ರೈತರ ಮನೆಗಳಿಗೆ ಹೋಗಿ ಭತ್ತ ಖರೀದಿಸಲಿದ್ದು, ಈ ಅಕ್ಕಿ ಗಿರಣಿ ಮಾಲೀಕರು ಡಿ.30 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ರಾಗಿ ಸಂಗ್ರಹಿಸುವ ಗುರಿ:
ರಾಗಿ ಖರೀದಿ ಕೇಂದ್ರಗಳನ್ನು ಜಗಳೂರು, ಹೊನ್ನಾಳಿ, ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗುವುದು. ಈ ಬಾರಿ 13,925 ಟನ್ ಸಂಗ್ರಹ ನಿರೀಕ್ಷೆ ಇದ್ದು, ಕಳೆದ ಬಾರಿ 14060 ಟನ್ ಖರೀದಿ ಮಾಡಲಾಗಿತ್ತು. ಇಲ್ಲಿ ಖರೀದಿಸುವ ರಾಗಿಯನ್ನು ಪಡಿತರ ವ್ಯವಸ್ಥೆ ಮೂಲಕ ವಿತರಣೆ ಮಾಡಲಾಗುವುದು. ಹಾಗೂ ಖರೀದಿಸಿ ರಾಗಿ ಜಿಲ್ಲೆಯಲ್ಲಿರುವ ವಿವಿಧ ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡಲಾಗುವುದು ಎಂದರು.
ಸೌಲಭ್ಯ ಒದಗಿಸಿ:
ಖರೀದಿ ಕೇಂದ್ರಗಳಲ್ಲಿ ತೂಕ, ಗುಣಮಟ್ಟದಲ್ಲಿ ರೈತರಿಗೆ ಯಾವುದೇ ಮೋಸವಾಗಬಾರದು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ರೇಷ್ಮೆ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದು ಎಂದು ಸೂಚನೆ ನೀಡಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರು ಉತ್ತಮ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಜಿಲ್ಲೆಯ ಯಾವುದೇ ಖರೀದಿ ಕೇಂದ್ರಗಳಿಗೆ ನೀಡಬಹುದಾ ಗಿದೆ. ರಾಗಿಯನ್ನು ರಾಜ್ಯ ಉಗ್ರಾಣ ನಿಗಮದವರು ಸಂಗ್ರಹಿಸಿ ಇಡಲಿದ್ದಾರೆ. ಸುಮಾರು 31000 ಟನ್‍ಗಳಷ್ಟ ಧಾನ್ಯ ಸಂಗ್ರಹಿಸುವ ಉಗ್ರಾಣಗಳು ಜಿಲ್ಲೆಯಲ್ಲಿ ಇವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೆಎಫ್‍ಸಿಎಸ್‍ಸಿ ರಾಜ್ಯ ವ್ಯವಸ್ಥಾಪಕ ಜವಳಿ, ಕೆಎಫ್‍ಸಿಎಸ್‍ಸಿ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ, ಎಪಿಎಂಸಿ ಸಹಾಯಕ ನಿರ್ದೇಶಕರ ಸೋಮಶೇಖರ್, ಕೃಷಿ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಎಪಿಎಂಸಿ ಕಾರ್ಯದರ್ಶಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
