ಅಹಂಕಾರದಿಂದ ಜೀವನ ಅಧಃಪತನ: ನಟೇಶ್

ದಾವಣಗೆರೆ:

     ಜ್ಞಾನವರ್ಧನೆಯಲ್ಲಿ ಅಹಂಕಾರ ಬಂದರೆ, ಜೀವನವು ಅಧಃಪತನವಾಗಲಿದೆ ಎಂದು ಶಿವಮೊಗ್ಗದ ಚಿಂತಕ ಜಿ.ಎಸ್.ನಟೇಶ್ ತಿಳಿಸಿದರು.
ತಾಲ್ಲೂಕಿನ ನೀಲಾನಹಳ್ಳಿಯ ಮಂದಾರ ವಿದ್ಯಾಸಂಸ್ಥೆ ಹಾಗೂ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ವಿನಯ, ವಿಧೇಯತೆ, ಸಂಸ್ಕಾರ, ಸಂಸ್ಕತಿ ಮಕ್ಕಳ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ ಎಂದರು.

      ಇಂತಹ ಕಾರ್ಯಕ್ರಮಗಳು ಕನ್ನಡ ಭಾಷಾ ಪರಂಪರೆ ಮನಮುಟ್ಟಿ ಭಾಷಾಭಿವೃದ್ಧಿಗೆ ಪೂರಕವಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ನಮ್ಮ ರಾಮಾಯಣ ಮಹಾಭಾರತ ಮಹಾಕಾವ್ಯಗಳ ಶತೃಗಳನ್ನು ಪ್ರೀತಿಸುವ ಸಂದೇಶ ನಮ್ಮ ಜೀವನಕ್ಕೆ ಆದರ್ಶ, ಮಕ್ಕಳು ವಿದ್ಯಾಭ್ಯಾಸದಲ್ಲಿ ಹ ಕಾ ರ ಗ ಕಾ ರ ಗಳ ಉಚ್ಛಾರಣೆ ಕರಾರುವಕ್ಕಾಗಿ ಮಾಡಿದರೆ ಶಬ್ದಪ್ರಯೋಗಗಳು ಸುಲಲಿತವಾಗುತ್ತದೆ. ಭಾಷೆಯನ್ನು ಪ್ರೀತಿಸಿ ವ್ಯಾಸಂಗ ಮಾಡಿದರೆ ಮಾತ್ರ ಅದು ಸಿದ್ಧಿಯಾಗುತ್ತದೆ ಎಂದರು.

      ವಿಶ್ವದ ಎಲ್ಲಾ ಭಾಷೆ ಕಲಿಯಿರಿ. ಆದರೆ ಕನ್ನಡ ಭಾಷೆ ಪ್ರೀತಿಸಿ, ಕಲಿಯಿರಿ. ಕಲಿಸಿರಿ. ಉದರ ಪೋಷಣೆಗಾಗಿ ಬೇರೆ ಭಾಷೆ ಕಲಿಯುವುದು ತಪ್ಪಲ್ಲ. ಮಾತೃಭಾಷೆ ಒತ್ತಡ, ಒತ್ತಾಯದ ಹೇರಿಕೆ ಅಗತ್ಯವಿಲ್ಲ. ಅದು ಮನದಾಳದಿಂದ ಬಂದರೆ ಅದರ ಘನತೆ ಗೌರವ ಹೆಚ್ಚುತ್ತದೆ ಎಂದು ನುಡಿದರು.

       ಸಮಾರಂಭವನ್ನು ಉದ್ಘಾಟಿಸಿದ ಮಂದಾರ ವಿದ್ಯಾಸಂಸ್ಥೆ ಪ್ರಾಚಾರ್ಯ ಎ. ಪೊನ್ನಯ್ಯಚೌದರಿ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಜತೆಯಲ್ಲಿ ಇಂತಹ ಕನ್ನಡ ಕಾರ್ಯಕ್ರಮ, ಉಪನ್ಯಾಸಗಳು ಅವರ ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂದರು.

         ಅಧ್ಯಕ್ಷತೆ ವಹಿಸಿದ ಪರಿಷತ್‍ನ ಅಧ್ಯಕ್ಷ  ಬಿ.ವಾಮದೇವಪ್ಪ ಮಾತನಾಡಿ, ಫಲವತ್ತಾದ ಭೂಮಿಯಲ್ಲಿ ಉತ್ತಮ ತಳಿಯ ಬೀಜವನ್ನು ಬಿತ್ತಿ, ಉತ್ತಮ ಫಲವನ್ನು ನಿರೀಕ್ಷಿಸುವು ಎಷ್ಟು ಔಚಿತ್ಯವೋ ಅಷ್ಟೇ ಔಚಿತ್ಯತೆಯನ್ನು ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ದತ್ತಿ ಉಪನ್ಯಾಸ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ವಿದ್ಯಾರ್ಥಿ ಯುವ ಪ್ರತಿಭೆಗಳಲ್ಲಿ ಬೆಳೆಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಆದ್ಯ ಕರ್ತವ್ಯವೆಂದು ಭಾವಿಸಿ ಈ ಬೆಳೆಯುವ ಪ್ರತಿಭೆಗಳಲ್ಲಿ ನಾಡು-ನುಡಿಯ ಭವ್ಯತೆಯನ್ನು ಹಾಗೂ ಸಾಹಿತ್ಯಾಭಿಮಾನವನ್ನು ಬೆಳೆಸುವುದು ಇದರ ಉದ್ದೇಶವೆಂದು ತಿಳಿಸಿದರು. ಕನ್ನಡ ನಾಡು-ನುಡಿಯನ್ನು ಉಳಿಸುವುದು, ಬೆಳೆಸುವುದು ಇಂದಿನ ಯುವಪೀಳಿಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದರು.

        ಕಲಾಕುಂಚ ಸಾಂಸ್ಕತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪರಿಷತ್ತಿನ ಮಹಿಳಾ ಗೌರವ ಕಾರ್ಯದರ್ಶಿ ಎಸ್.ಎಂ. ಮಲ್ಲಮ್ಮ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಚಂದನ ಮತ್ತು ಸಂಗಡಿಗರ ನಾಡಗೀತೆ ಹಾಡಿದರು. ಉಪನ್ಯಾಸಕ ಬಸವರಾಜ ಎಂ.ಬಿ ಸ್ವಾಗತಿಸಿದರು. ಉಪನ್ಯಾಸಕ ಶಿವಕುಮಾರ್ ಎಂ. ನಿರೂಪಿಸಿ, ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link