ಸಿಎಎ ಜಾರಿ ಮೂರ್ಖತನದ ಪರಮಾವಧಿ: ರವಿ ವರ್ಮಕುಮಾರ್

ಬೆಂಗಳೂರು

   ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯು ಮೂರ್ಖತನದ ಪರಮಾವಧಿವಾಗಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಗಂಡಾಂತರವನ್ನೇ ಸೃಷ್ಟಿಸಲಿರುವ ಕಾಯ್ದೆಯನ್ನು ಕೇಂದ್ರ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕೆಂದು ಎಂದು ಮಾಜಿ ಅಡ್ವೊಕೇಟ್ ಜನರಲ್ ರವಿ ವರ್ಮಕುಮಾರ್ ಅವರು ಆಗ್ರಹಿಸಿದರು.

   ಧರ್ಮದ ಆಧಾರದ ಮೇಲೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಲವಂತವಾಗಿ ಹೇರುವುದು ಅವಿವೇಕತನ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಣಕಿಸಿದಂತಾಗುತ್ತದೆ ಎಲ್ಲವನ್ನೂ ಕಿತ್ತುಕೊಳ್ಳುವುದಿಲ್ಲ ಎನ್ನುತ್ತಲೇ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ತರಲಾಗಿದೆ ಎಂದು ದೂರಿದರು.

   ಕೇಂದ್ರ ಸರ್ಕಾರ, ರಹಸ್ಯ ಕಾರ್ಯಾಚರಣೆ ನಡೆಸಿ, ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆಯನ್ನು ಪಡೆದುಕೊಂಡಿದೆ. ಸಾರ್ವಜನಿಕ ಚರ್ಚೆಯನ್ನು ನಡೆಸದೆ, ಸಂವಿಧಾನಕ್ಕೆ ದೊಡ್ಡ ಅಪಚಾರ ಎಸಗಿದೆ. ಆದಷ್ಟು ಬೇಗ ಇದಕ್ಕೆ ಚಟ್ಟ ಕಟ್ಟಬೇಕಿದೆ ಎಂದು ಅವರು ಹೇಳಿದರು.

    ನಗರದ ಗಾಂಧಿಭವನದಲ್ಲಿ ಎಐಡಿಎಸ್‍ಒ ಸಂಘಟನೆ, ಎನ್‍ಆರ್‍ಸಿ ಮತ್ತು ಸಿಎಎಯನ್ನು ವಿರೋಧಿಸಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಾಯ್ದೆಯಿಂದಾಗಿ ನೆರೆ ರಾಷ್ಟ್ರಗಳಾದ ಕುವೈತ್, ದುಬೈ, ಸೌದಿ ಅರೇಬಿಯಾ, ರಾಷ್ಟ್ರಗಳಲ್ಲಿರುವ ಬಹುಸಂಖ್ಯಾತ ಹಿಂದೂಗಳಿಗೆ ದೊಡ್ಡ ಅಪಾಯವನ್ನೇ ಉಂಟುಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಎಲ್ಲರೂ ಸಂವಿಧಾನದ ಶಿಶುಗಳು. ಇದನ್ನು ಅರಿತು ಹಿಂದೂಗಳಿಗೆ ಅಪಾಯ ತಂದೊಡ್ಡುವ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು.ಪೌರತ್ವ ತಿದ್ದುಪಡಿ ಕಾಯ್ದೆ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಬಹುದು. ಭ್ರಷ್ಟ ಅಧಿಕಾರಿಗಳು ಯಾರನ್ನು ಬೇಕಾದರೂ ಅನುಮಾನಿಸಬಹುದು, ಸೆರೆಮನೆಗೆ ತಳ್ಳಬಹುದು ಎಂದು ಹೇಳಿದರು.
ದೇಶದಲ್ಲಿ ಇವತ್ತಿಗೂ ಕಾಡು-ಮೇಡುಗಳಲ್ಲಿ ವಾಸಿಸುತ್ತಿರುವ ಜನರಿಗೆ ಧರ್ಮವೇ ಇಲ್ಲ, ಅವರು ಚಂದ್ರ, ಸೂರ್ಯ, ನದಿ, ಪ್ರಕೃತಿಯನ್ನೇ ಆರಾಧಿಸುತ್ತಾರೆ.

      ಅವರಿಗೆ ಯಾವ ಧರ್ಮವೂ ಇಲ್ಲ. ಹಾಗಾದರೆ, ಅವರು ಯಾರು? ಎಂದು ಪ್ರಶ್ನಿಸಿದರು.ಯಾರೇ ಆಗಲಿ, ಒಂದು ಧರ್ಮದ ಪರವಾಗಿ ವಕಾಲತ್ತು ವಹಿಸುವಂತಿಲ್ಲ, ಸಂವಿಧಾನ ಎಲ್ಲಿಯವರೆಗೆ ಅಸ್ತಿತ್ವದಲ್ಲಿರುತ್ತದೆಯೋ ಅಲ್ಲಿಯವರೆವಿಗೂ ಸಾಧ್ಯವಿಲ್ಲ ಎಂದು ಹೇಳಿದ ರವಿವರ್ಮ ಕುಮಾರ್ ಅವರು, ಒಂದು ಧರ್ಮಕ್ಕೆ ಬೆಣ್ಣೆ, ಇನ್ನೊಂದು ಧರ್ಮಕ್ಕೆ ಸುಣ್ಣ ಹಾಕುವ ತಾರತಮ್ಯ ಎಸಗಬಾರದು ಎಂದು ಹೇಳಿದರು.

       ಧರ್ಮದ ಆಧಾರದ ಮೇಲೆ ಜನರನ್ನು ಎಣಿಕೆ ಮಾಡುವುದು ಸರ್ಕಾರದ ಕೆಲಸವಲ್ಲ, ಸರ್ಕಾರ ಇಂತಹದ್ದಕ್ಕೆಲ್ಲಾ ಆದೇಶ ಮಾಡಬಾರದು. ಇದೇ ಜಾತ್ಯತೀತತೆ ಎಂದು ಹೇಳಿದರು.ಸಮಾರಂಭದಲ್ಲಿ ಸಿಯಾಸತ್ ಪತ್ರಿಕೆ ವ್ಯವಸ್ಥಾಪಕ ನಿರ್ದೇಶಕ ಜಾಹಿರ್ ಉದ್ದೀನ್, ಆಲಿಖಾನ್, ಅಂಕಣಕಾರ ಕೆ.ಸಿ. ರಘು, ಎಐಡಿಎಸ್‍ಒ ಸಮಿತಿ ಅಧ್ಯಕ್ಷ ವಿ.ಎನ್. ರಾಜಶೇಖರ್ ಅವರು ಮಾತನಾಡಿದರು. ರಾಜ್ಯ ಸಮಿತಿಯ ಕಾರ್ಯದರ್ಶಿ ಅಜಯ್ ಕಾಮತ್ ಅವರು, ಪ್ರಾಸ್ತಾವಿಕ ಭಾಷಣ ಮಾಡಿ, ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು.ಸಮಿತಿಯ ಅಧ್ಯಕ್ಷೆ ಕೆ.ಎಸ್. ಅಶ್ವಿನಿ, ಕಾರ್ಯದರ್ಶಿ ಕೆ. ಉಮಾ ಅವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link