ಸಂಪುಟ ವಿಸ್ತರಣೆಗೂ ಅಡ್ಡಿಯಾದ ಪೌರತ್ವ ತಿದ್ದುಪಡಿ ಕಾಯ್ದೆ

ಬೆಂಗಳೂರು

       ದೇಶದ ಬಹುತೇಕ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ವ ಕಾಯ್ದೆ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತವಾಗುವವರೆಗೆ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸದಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.

     ಪಕ್ಷದ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ರಾಷ್ಟ್ರೀಯ ಪೌರತ್ವ ಕಾಯ್ದೆ ಕುರಿತ ವಿವಾದ ದೇಶದ ಹಲವು ರಾಜ್ಯಗಳಲ್ಲಿ ಭುಗಿಲೆದ್ದಿದ್ದು ಇದನ್ನು ನಿಯಂತ್ರಿಸುವವರೆಗೆ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸುವ ಅಗತ್ಯವಿಲ್ಲವೆಂದು ಅಮಿತ್ ಷಾ ಹೇಳಿದ್ದಾರೆ ಎಂದಿವೆ.

     ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ವಿಸ್ತರಿಸಲು ಧನುರ್ಮಾಸದ ನೆಪ ಹೇಳುತ್ತಿದ್ದು ಅಷ್ಟರಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಇಲ್ಲದಿದ್ದರೆ ವಿಧಾನಮಂಡಲ ಅಧಿವೇಶನದ ನಂತರ ನಡೆಯುತ್ತದೆ ಎಂಬುದು ಮೂಲಗಳ ವಿವರಣೆ.

     ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿ, ಆನಂತರ ಉಪಚುನಾವಣೆಯಲ್ಲಿ ಗೆದ್ದವರಿಗೆ ಮಂತ್ರಿಗಿರಿ ನೀಡಬೇಕು ಎಂಬ ಯಡಿಯೂರಪ್ಪ ಅವರ ಪ್ರಪೋಸಲ್‍ಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ. ಆದರೆ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಇವರಿಗೆ ಅವಕಾಶ ನೀಡುವಾಗ ಪಕ್ಷದ ಮೂರ್ನಾಲ್ಕು ಮಂದಿಗೂ ಮಂತ್ರಿಗಿರಿ ನೀಡಬೇಕು ಎಂಬ ಪ್ರಪೋಸಲ್ ನ್ನು ಹೈಕಮಾಂಡ್ ತಳ್ಳಿ ಹಾಕಿದೆ.ಮುಂದಿನ ಕಂತಿನಲ್ಲಿ ಬೇರೆ ಪಕ್ಷಗಳಿಂದ ಬಂದು, ಗೆದ್ದ ಅನರ್ಹರಿಗೆ ಮಂತ್ರಿಗಿರಿ ನೀಡಿ. ನಮ್ಮವರು ಈಗಲೆ ತರಾತುರಿ ಮಾಡುವುದು ಬೇಡ ಎಂದು ಅಮಿತ್ ಷಾ ಹೇಳಿದ್ದಾರೆ.

    ಅಮಿತ್ ಷಾ ಈ ಮಾತು ಹೇಳುವುದರ ಹಿಂದೆ ಪಕ್ಷದಲ್ಲಿ ಮಂತ್ರಿಗಿರಿಗಾಗಿ ನಡೆಯುತ್ತಿರುವ ಸಂಘರ್ಷ ಹೆಚ್ಚಾಗದಿರಲಿ ಎಂಬ ಉದ್ದೇಶವಿದೆ ಎಂಬುದು ಮೂಲಗಳು ನೀಡುತ್ತಿರುವ ಸದ್ಯದ ಮಾಹಿತಿ.ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಅವರಂತಹ ಪ್ರಮುಖರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ಉದ್ದೇಶ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇತ್ತಾದರೂ ಮಂತ್ರಿಗಳಾಗಲು ಆ ನಾಯಕರು ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ ಎಂಬುದು ಇದೇ ಮೂಲಗಳು ನೀಡಿರುವ ಮಾಹಿತಿ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ