ಚಿತ್ರದುರ್ಗ
ಬಿಜೆಪಿ ಚುನಾವಣೆ ಮುನ್ನ ಅಖಂಡ ಭಾರತ ಎಂದು ಹೇಳಿತ್ತು. ಅಧಿಕಾರಕ್ಕೆ ಬಂದ ಮೇಲೆ ಅಖಂಡ ಭಾರತ ಮರೆತಂತಿದೆ. ಬಿಜೆಪಿ ಜನರ ದಿಕ್ಕು ತಪ್ಪಿಸುವ ಮತ್ತು ಅಭಿವೃದ್ದಿ ಕೆಲಸಗಳನ್ನು ಮಾಡಲಾಗದೆ ತಪ್ಪನ್ನು ಮರೆಮಾಚಲು ಸಿಎಎ ಬಗ್ಗೆ ಜನರಲ್ಲಿ ಗೊಂದಲ ಮೂಡಿಸಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಲವಾಸಿಗಳು ಯಾವ ದಾಖಲೆಗಳನ್ನು ಇಟ್ಟುಕೊಳ್ಳಬೇಕೆಂಬ ಬಗ್ಗೆ ಮೊದಲು ರಕ್ಷಣಾ ಸಚಿವರು ಹೇಳಿಕೆ ನೀಡಬೇಕು. ಜನರಲ್ಲಿ ಸಾಕಷ್ಟು ಗೊಂದಲ ಇದೆ. ಕೇವಲ ಮುಸ್ಲಿಂರಿಗೆ ಮಾತ್ರವಲ್ಲದೆ ಎಲ್ಲಾ ವರ್ಗದವರಿಗೂ ತೊಂದರೆಯಾಗಲಿದೆ. ಈಗ ಸಿಎಎ ಪರವಾಗಿ ಬೀದಿಗಿಳಿದಿರುವವರು ಮುಂದೆ ಪೌರತ್ವ ಪಡೆಯಲು ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಏಕೆಂದರೆ ಪಾಪ ಅವರಿಗೆ ಇನ್ನೂ ಇದರ ಬಗ್ಗೆ ಅರ್ಥವಾಗಿಲ್ಲ. ಮುಂದೆ ಪೌರತ್ವ ಸಿಗದೆ ಪರದಾಡುವ ಕಾಲ ದೂರವಿಲ್ಲ ಎಂದರು.
ಅಕ್ರಮವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಪ್‍ಫಾನಿಸ್ತಾನಿಯಿಂದ ಬಂದವರನ್ನು ದೇಶದಿಂದ ಹೊರಕ್ಕೆ ಕಳುಹಿಸಿದರೆ ಅಭ್ಯಂತರವಿಲ್ಲ. ನಮ್ಮ ಆತಂಕ ಮೂಲ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಇದರ ಬಗ್ಗೆ ಸ್ಪಷ್ಟವಾದ ಸರ್ಕಾರದ ನಿಲುವು ತಿಳಿಸಬೇಕು ಎಂದು ಆಗ್ರಹಿಸಿದ ಖಾದರ್ ಅಸ್ಸಾಂನಲ್ಲಿ ಮೊದಲು ಸಂಪೂರ್ಣವಾಗಿ ಸಿಎಎ ಜಾರಿಗೊಳಿಸಿ ನಂತರ ಇತರೆ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಿ. ಮೂಲವಾಸಿಗಳಿಗೆ ಯಾವುದೇ ತೊಂದರೆಯಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪೇಜಾವರ ಶ್ರೀ ಸೇರಿ ಅನೇಕರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ಸ್ವಾಗತರ್ಹವಾಗಿದೆ. ಆದರೆ ಅವರಿಗೆ ನೀಡಲಾಗಿದ್ದು ಅವರ ಬಳಿ ಮೂಲವಾಸಿಗಳೆಂಬುದಕ್ಕೆ ದಾಖಲೆ ಇಲ್ಲದಿದ್ದರೆ ಏನು ಮಾಡುತ್ತಿರಿ? ಯಾವ ದಾಖಲೆ ಇರಬೇಕೆಂಬುದನ್ನು ಮೊದಲು ಹೇಳಲಿ. ಅಸ್ಸಾಂನಲ್ಲಿ ಸಿಎಎ ಜಾರಿಗೊಳಿಸಿಲ್ಲ. ಅಲ್ಲಿಗೆ ಪ್ರಧಾನಿ ಮೋದಿ ವಿಮಾನದಲ್ಲಿ ಹೋಗಿ ಇಳಿಯಲು ಹೆದರುತ್ತಿದ್ದಾರೆ. ಅಂದಮೇಲೆ ಅಲ್ಲಿಯೇ ಸಂಪೂರ್ಣ ಅನುಷ್ಠಾನಗೊಳಿಸದೆ ಇತರೆ ರಾಜ್ಯಗಳಲ್ಲಿ ಜಾರಿಗೊಳಿಸುವುದು ಸರಿಅಲ್ಲ. ಅಸ್ಸಾಂ ರಾಜ್ಯದಲ್ಲಿ ಎಷ್ಟು ಜನರಿಗೆ ಪೌರತ್ವ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.
ಕರ್ನಾಟಕದಲ್ಲಿ ಸರ್ಕಾರ ಇದೆಯೇ ಅಥವಾ ಇಲ್ಲವೆ ಎನಿಸುತ್ತಿದೆ. ಅಭಿವೃದ್ದಿ ಮರಿಚೀಕೆಯಾಗಿ ಹುಡುಕಿದರೂ ಸಿಗುವುದಿಲ್ಲ. ಆಡಳಿತ ಸಂಪೂರ್ಣ ಕುಸಿದಿದೆ. ಪಿಂಚಣಿ ಸಿಗದೆ ಜನರು ಪರದಾಡುತ್ತಿದ್ದಾರೆ. ಬಿಜೆಪಿ ರಾಜಕೀಯ ಗೊಂದಲದಿಂದಾಗಿ ಅಭಿವೃದ್ದಿ ಕೆಲಸಗಳು ಸ್ಥಗಿತಗೊಂಡಿದೆ. ಸಿಎಎ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು. ಕಾಂಗ್ರೆಸ್ ಡಿಕ್ಷನರಿಯಲ್ಲಿ ಮೂಲ ಕಾಂಗ್ರೆಸ್ಸಿಗರು ವಲಸೆ ಕಾಂಗ್ರೆಸಿಗರು ಎಂಬ ಪದ ಇಲ್ಲ. ಎಲ್ಲರ ಅಭಿಪ್ರಾಯವನ್ನು ಕ್ರೂಡೀರಕರಿಸಿ ಹೈಕಮಾಂಡ್ ಉತ್ತಮವಾದ ತೀರ್ಮಾನ ಕೈಗೊಳ್ಳಲಿದ್ದು ಅದಕ್ಕೆ ಎಲ್ಲರೂ ತಲೆಭಾಗುತ್ತವೆ. ತಾವು ಇನ್ನೂ 20 ವರ್ಷವಾದ ಮೇಲೆ ಕೆಪಿಸಿಸಿ ಅಧ್ಯಕ್ಷರಾಗುವ ಬಗ್ಗೆ ವಿಚಾರ ಮಾಡುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನಕಾರ್ಯದರ್ಶಿ ಸಿ.ಶಿವುಯಾದವ್, ಬಿ.ಟಿ.ಜಗದೀಶ್ ಖಾಸೀಂ ಆಲಿ, ಅಲ್ಲಾಭಕ್ಷಿ, ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
