ಸಿಎಎ ಅಸಲಿಯತ್ತು ಕೆಲವರಿಗೆ ಈಗ ಅರಿವಾಗುತ್ತಿದೆ : ಗುಲಾಂ ನಬಿ ಆಜಾದ್

ಬೆಂಗಳೂರು

     ಪ್ರತಿಪಕ್ಷಗಳಿಗೆ ರಾಜ್ಯ ಸಭೆಯಲ್ಲಿ ಬಹುಮತ ಇದ್ದರೂ ಕೆಲವು ಪ್ರಾದೇಶಿಕ ಪಕ್ಷಗಳು ಸಿಎಬಿ ಕಾಯ್ದೆಗೆ ಬೆಂಬಲಿಸಿದ್ದವು. ಆದರೆ ಈಗ ಅವರಿಗೆ ವಾಸ್ತವ ಅರಿವಾಗಿದೆ. ಅವರು ಈಗ ಈ ಕಾಯ್ದೆ ಬೆಂಬಲಿಸಬಾರದು ಎನ್ನುತ್ತಿದ್ದಾರೆ. ಬಿಹಾರದ ನಿತಿಶ್ ಕುಮಾರ್ ಈ ಕಾಯಿದೆಯನ್ನು ಬೆಂಬಲಿಸಬಾರದಿತ್ತು ಎಂದು ಈಗ ಹೇಳುತ್ತಿದ್ದಾರೆ. ಐದಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಪರವಾಗಿ ಇದ್ದಿದ್ದರೆ ಪೌರತ್ವ ತಿದ್ದುಪಡಿ ಕಾಯಿದೆಯನ್ನು ರಾಜ್ಯಸಭೆಯಲ್ಲಿ ಸೋಲಿಸುತ್ತಿದ್ದೆವು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಗುಲಾಮ್‍ನಬಿ ಆಜಾದ್ ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಈಗ ಎಲ್ಲರಿಗೂ ಗೊತ್ತಾಗಿದೆ. ಕಳೆದ ಒಂದು ದಶಕದಿಂದ ಎಲ್ಲ ಸಮಾಜ, ಜಾತಿ, ದೇಶದ ಎಲ್ಲ ಭಾಗದ ಜನರು ಜಾಗೃತರಾಗುತ್ತಿದ್ದಾರೆ. ಮಂಗಳೂರಿನಲ್ಲಿ ಇಬ್ಬರು ಅಮಾಯಕ ಯುವಕರು ಪೋಲೀಸರ ಗೋಲಿಬಾರಿಗೆ ಬಲಿಯಾದರು. ಆಸ್ಸಾಂನಲ್ಲಿ ಐವರು ಅಮಾಯಕರು ಬಲಿಯಾದರು.

    ಅವರಲ್ಲಿ ಮುಸ್ಲಿಂ ಒಬ್ಬರು ಮಾತ್ರ. ಕೇವಲ ಮುಸ್ಲಿಂ ಸಮುದಾಯ ಮತ್ತು ಇದನ್ನು ವಿರೋಧಿಸಿಲ್ಲ. ಎಲ್ಲ ವರ್ಗದ ಜನರು ವಿರೋಧಿಸಿದ್ದಾರೆ. ಸಂಸತ್ತಿನಲ್ಲಿ ಬಹುಮತ ಇಲ್ಲದಿದ್ದರೂ ಬಹುತೇಕ ರಾಜಕೀಯ ಪಕ್ಷಗಳು ವಿರೋಧಿಸಿವೆ ಎಂದು ಹೇಳಿದರು.

   ದೇಶದಲ್ಲಿ 370ನೇ ಕಾಯ್ದೆ ರದ್ದು ಪಡಿಸಿದಾಗಿನಿಂದ ವಿಶ್ವಮಟ್ಟದಲ್ಲಿ ನಮ್ಮ ದೇಶದ ಬಗ್ಗೆ ವಿಶ್ವದಲ್ಲಿ ಕೆಟ್ಟ ಹೆಸರು ಬರುತ್ತಿದೆ. ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಸಣ್ಣ ಪುಟ್ಟ ರಾಷ್ಟ್ರಗಳು ಭಾರತದ ನಿರ್ಧಾರಗಳ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಧೇಯಕಗಳು ಬಹುತೇಕ ಜನ ವಿರೋಧಿ ಹಾಗೂ ವಿವಾದಾತ್ಮಕವಾಗಿವೆ. ಇದರಿಂದ ದೇಶದಲ್ಲಿ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಯಾಗುತ್ತಿವೆ ಎಂದು ಆರೋಪಿಸಿದರು.

    ನೋಟು ಅಮಾನ್ಯೀಕರಣದಿಂದ ನೂರಾರು ಕಂಪನಿಗಳು ಬಾಗಿಲು ಮುಚ್ಚಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳನ್ನು ಪ್ರಧಾನಿ ವಿದೇಶ ಸುತ್ತುವುದರಲ್ಲಿಯೇ ಸಮಯ ಕಳೆದರು. ತಮ್ಮ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುವುದಕ್ಕಾಗಿಯೇ ಹೆಚ್ಚು ಪ್ರಯತ್ನ ನಡೆಸಿದ್ದಾರೆ ಎಂದು ಟೀಕಿಸಿದರು.

    2014 ರ ಚುನಾವಣೆಯಲ್ಲಿ ನೀಡಿದ ಯಾವುದೇ ಭರವಸೆಗಳು ಈಡೇರಿಸಲಿಲ್ಲ. ದೇಶದ ಬಹುತೇಕ ಜನರು ಅನಕ್ಷರಸ್ಥರು ಹಾಗೂ ಬಡವರಿದ್ದಾರೆ. ಅವರು ಪ್ರತಿ ವ್ಯಕ್ತಿಯ ಖಾತೆಗೆ 15 ಲಕ್ಷ ರೂ. ಹಣ ಹಾಕುವ ಭರವಸೆ ನೀಡಿದ್ದರು. ಇದನ್ನು ನಂಬಿ ಜನರು ಮತ ಹಾಕಿದ್ದರು. ನಂತರ ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೋಡಿದ್ದರು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಹೀಗಾಗಿ ಎಲ್ಲರೂ ಮತ ಹಾಕಿದ್ದರು ಆದರೆ ಇವು ಯಾವುವೂ ಈಡೇರಿಲ್ಲ ಎಂದು ನಬಿ ಹೇಳಿದರು.

    ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಎಲ್ಲೆಡೆ ಸಿಎಎ ಕಾಯ್ದೆಯಿಮದ ಅಶಾಂತಿ ಮೂಡಿದೆ. ಕೇಂದ್ರ ಸರ್ಕಾರ ಕಾಯಿದೆ ಬಿಲ್‍ಗಳನ್ನು ಜಾರಿ ಮಾಡುವಾಗ ವಿಪಕ್ಷಗಳ ಜೊತೆ ಚರ್ಚಿಸುವುದಾಗಲೀ, ಸಮಾಲೋಚಿಸುವುದಾಗಲೀ ಮಾಡುತ್ತಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ಇದೇ ವಿಷಯವಾಗಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ಏನೂ ತಪ್ಪುಮಾಡದ ನೂರಾರು ವಿದ್ಯಾರ್ಥಿಗಳ ಬಂಧನವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

   ಕೇಂದ್ರದ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಕೇವಲ ಮುಸ್ಲಿಂರಷ್ಟೇ ಅಲ್ಲದೇ ಹಿಂದೂ, ಕ್ರೈಸ್ತ ಸೇರಿದಂತೆ ಎಲ್ಲಾ ಧರ್ಮದವರು ಪ್ರತಿಭಟಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.ಕಾಶ್ಮೀರದಲ್ಲಿ 370 ವಿಶೇಷ ಕಾಯಿದೆ ರದ್ದು ಮಾಡಿ ಅಲ್ಲಿ ಅತಂತ್ರ ಸೃಷ್ಟಿ ಮಾಡಲಾಗಿದೆ. ಈಗ ಇದೇ ರೀತಿ ಪೌರತ್ವ ತಿದ್ದುಪಡಿ ಕಾಯ್ದೆ ಹೇರಿ ಎಲ್ಲರ ಬದುಕನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಕೇಂದ್ರ ಮಾಡುತ್ತಿದೆ. ನೋಟು ಅಮಾನ್ಯೀಕರಣ, ಆರ್ಥಿಕತೆಯ ಹಿನ್ನಡೆ, ಕೈಗಾರಿಕೆಗಳ ಸ್ಥಗಿತ ಸೇರಿದಂತೆ ಒಂದಲ್ಲ ಒಂದು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಲೇ ಇದ್ದಾರೆ, ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಒನ್ ಇಂಡಿಯಾ ಎಂದು ಹೇಳಿ ಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. 2014 ರ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.

   ಬಿಜೆಪಿಯವರು ಇಡೀ ದೇಶವನ್ನು ಧರ್ಮದ ಹೆಸರಿನಲ್ಲಿ ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಆರ್ಟಿಕಲ್ 370 ಕಾಯ್ದೆಯನ್ನು ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆ ಹಿನ್ನೆಲೆ ಇಟ್ಟುಕೊಂಡು ರದ್ದು ಪಡಿಸಿದರು. ಅಲ್ಲಿ ಎರಡೂ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರು. ದೇಶದ ಜನರು ಅವರ ಕಾರ್ಯಸೂಚಿ ಏನು ಎಂಬುದರ ಬಗ್ಗೆ ಅರ್ಥ ಮಾಡಿಕೊಂಡಿದ್ದಾರೆ. ಜಾರ್ಖಂಡ್ ಹಾಗೂ ದೆಹಲಿ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಎಬಿ ಜಾರಿಗೆ ತಂದರು. ಆದರೆ ಜಾರ್ಖಂಡ್ ಜನರು ಬಿಜೆಪಿಯನ್ನು ತಿರಸ್ಕರಿಸಿದರು ಎಂದು ಹೇಳಿದರು.

   ದೇಶಕ್ಕೆ ವಿದೇಶಿ ಬಂಡವಾಳ ಬರುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ರೈತರ ಸಮಸ್ಯೆ ಬಗ್ಗೆ ಚರ್ಚಿಸುತಿಲ್ಲ. ಜಿಡಿಪಿ ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರದ ಯಾವುದೇ ಸಚಿವರು ಈ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿ ಬಾರಿಯು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನ ಡೆಡ್ ಹಾರ್ಸ್ ಅದರ ಬಗ್ಗೆ ಮಾತನಾಡುತ್ತಾರೆ. ಕಾಶ್ಮೀರಿ ಪೆÇಲೀಸರೇ ಪಾಕಿಸ್ತಾನವನ್ನು ಮುಗಿಸುತ್ತಾರೆ.

      ಪ್ರಧಾನಿ ಪಾಕಿಸ್ತಾನವನ್ನು ಭಾರತದ ಸಮ ಎಂದು ಭಾವಿಸುವುದು ಭಾರತಕ್ಕೆ ಅವಮಾನ ಮಾಡಿದಂತೆ. ಪಾಕಿಸ್ತಾನದ ಬಗ್ಗೆ ಚರ್ಚೆ ಮಾಡುವಷ್ಟು ಭಾರತ ದುರ್ಬಲವಲ್ಲ. ನಮ್ಮ ಅಕ್ಕ ಪಕ್ಕ ಬೇರೆ ಬಲಿಷ್ಠ ದೇಶಗಳಿವೆ. ಪಾಕಿಸ್ತಾನದ ಬಗ್ಗೆ ಮಾತನಾಡುವುದು ಭಾರತೀಯರಿಗೆ ಅವಮಾನ ಮಾಡಿದಂತೆ ಎಂದು ನಬಿ ಅಭಿಪ್ರಾಯಪಟ್ಟರು.

    ನಮ್ಮ ಅಕ್ಕ ಪಕ್ಕ ಧರ್ಮದ ಆಧಾರದ ಮೇಲೆ ರಚನೆಯಾಗಿರುವ ಮೂರು ರಾಷ್ಟ್ರಗಳಿವೆ. ಅವುಗಳ ಜೊತೆಗೆ ಶ್ರೀಲಂಕಾ, ಮಯನ್ಮಾರ, ಭೂತಾನ್, ನೇಪಾಳ ಕೂಡ ಇವೆ. ಶ್ರೀಲಂಕಾ ಕೂಡ ಧರ್ಮದ ಆಧಾರದಲ್ಲಿ ರಚನೆಯಾದ ದೇಶ. ಶ್ರೀಲಂಕಾದಿಂದ ನಿರಾಶ್ರಿತರಾದ ಹಿಂದೂಗಳಿಗೆ ಏಕೆ ಅವಕಾಶವಿಲ್ಲ. ಭೂತಾನ್ ನ ಕ್ರಿಶ್ಚಿಯನ್ನರಿಗೆ ಏಕೆ ಅವಕಾಶವಿಲ್ಲ ? ಈ ಬಗ್ಗೆ ಕೇಂದ್ರ ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಗುಲಾಂ ನಬಿ ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಎನ್ ಆರ್ ಸಿ ಬಗ್ಗೆ ಕಾಂಗ್ರೆಸ್ ಜನರಲ್ಲಿ ಪಿತೂರಿ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ. ಅವರ ಪ್ರಣಾಳಿಕೆಯಲ್ಲಿ ಯೇ ಸಿಎಎ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಮಿತ್ ಶಾ ಸಿಎಎ ನಂತರ ಎನ್ ಆರ್ ಸಿ ಬರುತ್ತದೆ ಎಂದು ಹೇಳಿದ್ದಾರೆ.

     ಕೇಂದ್ರದ ನಿರ್ಧಾರವನ್ನು ಕೇವಲ ಕಾಂಗ್ರೆಸ್ ವಿರೋಧ ಮಾಡುತ್ತಿಲ್ಲ. ದೇಶದ ಜನರೇ ಜಾತಿ ಧರ್ಮ ಮೀರಿ ವಿರೋಧಿಸುತ್ತಿದ್ದಾರೆ. ನಾವು ದೇಶದ ಜನರೊಂದಿಗೆ ಇದ್ದೇವೆ. ಕಾಂಗ್ರೆಸ್ ಯಾವುದೇ ಪಕ್ಷದ ರಾಷ್ಟ್ರದ ನಿರಾಶ್ರಿತರಿಗೆ ಪೌರತ್ವ ನೀಡಲು ವಿರೋಧಿಸಿಲ್ಲ. ಈಗ ಬಿಜೆಪಿ ಧರ್ಮದ ಆಧಾರಲ್ಲಿ ಮಾಡಿರುವುದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.ಬಿಜೆಪಿಯವರಿಗೆ ಇಷ್ಟು ದೊಡ್ಡ ದೇಶವನ್ನು ಆಳಿದ ಅನುಭವ ಇಲ್ಲ. ಅವರು ಕೆಲವು ರಾಜ್ಯಗಳನ್ನು ಬೇರೆ ರೀತಿಯ ಬೆದರಿಕೆ ಹಾಕಿಕೊಂಡು ಆಳುತ್ತಿರಬಹುದು. ಆದರೆ , ಭಾರತವನ್ನು ಅದೇ ರೀತಿ ಆಳಲು ಬಯಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದರು.

     ಧರ್ಮ-ಧರ್ಮಗಳ ನಡುವೆ ಸಂಘರ್ಷ ಮೂಡಿಸಲಾಗುತ್ತಿದೆ. ದೇಶದಲ್ಲಿ ಸಂವಿಧಾನ ಕೆಡಿಸಿ ಸಾಮರಸ್ಯ ಹಾಳುಮಾಡಲಾಗುತ್ತಿದೆ. ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ಸಿಎಎ , ಎನ್‍ಆರ್‍ಸಿ ಬಗ್ಗೆ ಕಾಂಗ್ರೆಸ್ ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ಜನರಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಮೋದಿ ಆರೋಪಿಸಿದ್ದಾರೆ. ಆದರೆ ಈ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link