ಬೆಂಗಳೂರು
ಮೊಬೈಲ್, ನಗದು ದೋಚಲು ಪ್ರತಿರೋಧ ತೋರಿದ ಕ್ಯಾಬ್ ಚಾಲಕನಿಗೆ ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಹಾಸನದ ಅರಸೀಕೆರೆ ಮೂಲದ ಮೋಹನ್ (28) ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಅವರ ಜೊತೆಗಿದ್ದ ಸಂದೀಪ್ ಪಾರಾಗಿದ್ದಾರೆ.ಕ್ಯಾಬ್ ಚಾಲಕನಾಗಿದ್ದ ಮೋಹನ್ ನಾಗರಾವರಪಾಳ್ಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಅವರಿಗೆ ಇನ್ನು ವಿವಾಹವಾಗಿರಲಿಲ್ಲ.
ರಾತ್ರಿ 1.30ರ ವೇಳೆ ಬೈಯಪ್ಪನಹಳ್ಳಿಯ ಗೋಪಾಲಮಾಲ್ ಬಳಿ ಸ್ನೇಹಿತ ಸಂದೀಪ್ ಜತೆ ಬಾರ್‍ವೊಂದರಲ್ಲಿ ಮದ್ಯಪಾನ ಮಾಡಿ, ಊಟ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.ಮಾರ್ಗಮಧ್ಯೆ ನಾಗವಾರ ಪಾಳ್ಯದ ಬಳಿ ಅಂಗಡಿಯೊಂದರಲ್ಲಿ ಸಿಗರೇಟ್‍ಕೊಳ್ಳಲು ಹೋದಾಗ ಅಲ್ಲಿದ್ದ ನಾಲ್ವರ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಅಕ್ಕಪಕ್ಕದವರು ಸಮಾಧಾನಪಡಿಸಿದ್ದಾರೆ. ಸುಮ್ಮನಾದ ಮೋಹನ್ ಹಾಗೂ ಸಂದೀಪ್ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಸ್ವಲ್ಪದೂರ ಹೋಗುವಷ್ಟರಲ್ಲಿ ಹಿಂದಿನಿಂದ ಬಂದ ನಾಲ್ವರು ಮೋಹನ್ ಹಾಗೂ ಸಂದೀಪ್ ಬಳಿ ಇದ್ದ ಮೊಬೈಲ್, ನಗದು ದೋಚಲು ಮುಂದಾಗಿದ್ದಾರೆ. ಪ್ರತಿರೋಧ ತೋರಿದ ಮೋಹನ್‍ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೋಹನ್‍ನನ್ನು ಸಂದೀಪ್ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಕೃತ್ಯವೆಸಗಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
