ಮತ್ತೆ ಸಂಪುಟ ವಿಸ್ತರಣೆ ಮುಂದಕ್ಕೆ..!

ಬೆಂಗಳೂರು

    ತಮ್ಮ ನಿಯಂತ್ರಣ ಮೀರಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ದೆಹಲಿ ಪ್ರವಾಸ ಕೈಗೊಳ್ಳುವುದು ಇನ್ನೊಂದು ವಾರ ತಡವಾಗಲಿದ್ದು, ಇದರ ಪರಿಣಾಮ ನಿರೀಕ್ಷಿತ ಮಂತ್ರಿಮಂಡಲ ವಿಸ್ತರಣೆ ಮತ್ತೆ ಮುಂದಕ್ಕೆ ಹೋಗಿದೆ.

    ಸಂಪುಟ ಸೇರಲು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕರು, ಬಿಜೆಪಿಯ ಘಟಾನುಘಟಿಗಳ ದಂಡು ಸಜ್ಜಾಗಿರುವ ಬೆಳವಣಿಗೆ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವರಿಷ್ಠರನ್ನು ಭೇಟಿ ಮಾಡಲು ಯಡಿಯೂರಪ್ಪ ಅವರಿಗೆ ಈ ವರೆಗೆ ಸಾಧ್ಯವಾಗಿಲ್ಲ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಚಿವ ಸ್ಥಾನದ ಅಭಯವನ್ನು ಯಡಿಯೂರಪ್ಪ ನೀಡಿದ್ದಾರೆ. ಪಕ್ಷದ ಹಿರಿಯ ಶಾಸಕರು ಸಹ ಮಂತ್ರಿ ಸ್ಥಾನ ಪಡೆಯಲು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿದ್ದಾರೆ. ಹೊಸಬರ ಬದಲಿಗೆ ಹಳಬರನ್ನೇ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಆರ್‍ಎಸ್‍ಎಸ್ ಮುಖಂಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಯಡಿಯೂರಪ್ಪ ಅವರಿಗೆ ಈಗಾಗಲೇ ಸೂಚಿಸಿದ್ದಾರೆ.

     ಉಮೇಶ್ ಕತ್ತಿ, ರೇಣುಕಾಚಾರ್ಯ ಸೇರಿದಂತೆ ಹಲವರು ತಮಗೆ ಸಚಿವ ಸ್ಥಾನ ನೀಡಲೇಬೇಕೆಂದು ಬಿಗಿಪಟ್ಟುಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಹಾಗೂ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯಲು ಕೇಂದ್ರದ ವರಿಷ್ಠರ ಭೇಟಿಗಾಗಿ ಈಗಾಗಲೇ ಯಡಿಯೂರಪ್ಪ ಎರಡು ಬಾರಿ ಸಮಯನಿಗದಿಪಡಿಸುವಂತೆ ಕೇಳಿದ್ದರು. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲ.

   ಪೌರತ್ವ ತಿದ್ದುಪಡಿ ವಿವಾದ, ಸಂಸತ್ ಅಧಿವೇಶನ, ಜಾರ್ಖಂಡ್ ಚುನಾವಣೆ ಕಾರಣ ವರಿಷ್ಠರು ಸಮಯ ಕೊಟ್ಟಿರಲಿಲ್ಲ. ಕೇಂದ್ರದ ನಾಯಕರ ಭೇಟಿಗೆ ಇನ್ನೂ ಸಮಯ ನಿಗದಿಯಾಗದ ಕಾರಣ ಯಡಿಯೂರಪ್ಪ ಈಗ ಮತ್ತೆ ತಮ್ಮ ದೆಹಲಿ ಭೇಟಿಯನ್ನು ಮುಂದೂಡಿದ್ದು, ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗಿದೆ.

   ಇಂದೂ ಸಹ ಯಡಿಯೂರಪ್ಪ ಅವರನ್ನು ಹುಣಸೂರಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಅಭ್ಯರ್ಥಿ ಹೆಚ್ ವಿಶ್ವನಾಥ್, ಡಾಲರ್ಸ್ ಕಾಲೋನಿಯ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಸಂಪುಟದಲ್ಲಿ ತಮಗೆ ಅವಕಾಶ ಕಲ್ಪಿಸುವ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಿದರು.

   ಚುನಾವಣೆಯಲ್ಲಿ ಗೆದ್ದವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಇನ್ನು ಸೋತವರಿಗೆ ಅವಕಾಶ ಸಿಗವ ಸಾಧ್ಯತೆಗಳು ಹೇಗೆ ಎನ್ನುವ ಚರ್ಚೆಗಳು ಬಿಜೆಪಿ ಪಡಸಾಲೆಯಲ್ಲಿ ನಡೆಯುತ್ತಿವೆ. ಸಚಿವ ಸಂಪುಟ ವಿಸ್ತರಣೆ, ಪೌರತ್ವ ತಿದ್ದುಪಡಿ ಮತ್ತಿತರ ರಾಜಕೀಯ ಬೆಳವಣಿಗೆಗಳ ನಡುವೆ ನಲುಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳವಾರದಂದು ಕುಟುಂಬ ಸಮೇತ ಕೇರಳಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಕೇರಳದಲ್ಲಿ ವಿಶೇಷ ಹೋಮ-ಹವನ ಪೂಜೆಯಲ್ಲಿ ಅವರು ನಿರತರಾಗುವ ಸಂಭವವಿದೆ.

    ಬಿಜೆಪಿ ಸರ್ಕಾರ ಇದೀಗ ಸುಭದ್ರವಾಗಿದ್ದು, ಸರ್ಕಾರಕ್ಕೆ ಯಾವುದೇ ಅಡ್ಡಿ ಆತಂಕ ಎದುರಾಗಬಾರದು ಎಂಬ ಕಾರಣಕ್ಕಾಗಿ ಕೇರಳದ ಅನಂತಪದ್ಮನಾಭ ಹಾಗೂ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇತ್ತಿಚೆಗೆ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಕುಟುಂಬ ಸಮೇತ ಯಡಿಯೂರಪ್ಪ ಶತೃಸಂಹಾರ ಯಾಗ ನಡೆಸಿದ್ದರು. ಆಗ ನಡೆದ ವಿಶೇಷ ಪೂಜೆ ಸಂದರ್ಭದಲ್ಲಿ ಕೇರಳದ ಅರ್ಚಕರು ಬಾಗಿಯಾಗಿದ್ದರು. ಡಿಸೆಂಬರ್ 26 ರ ಅಮವಾಸ್ಯೆಗೂ ಮುನ್ನ ಕೇರಳದಲ್ಲಿ ವಿಶೇಷ ಹೋಮ-ಹವನ ನಡೆಸುವಂತೆ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು. ಹೀಗಾಗಿ ಸೂರ್ಯ ಗ್ರಹಣಕ್ಕೂ ಮುನ್ನ ದೋಷ ಪರಿಹಾರಕ್ಕಾಗಿ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link