ಕರೆ ಮಾಡಿ ಸಾಕು ಮನೆಗೇ ಊಟ ಬರುತ್ತೆ….!

ಶಿರಾ

     ಮಳೆ-ಬೆಳೆಗಳ ವೈಫಲ್ಯಕ್ಕೆ ಸಿಲುಕಿ ಕೈ ತುಂಬಾ ಎಂದೂ ಕೂಡ ಬೆಳೆ-ಹಣ ಎರಡನ್ನೂ ಕಾಣದೆ ಬರದ ದವಡೆಗೆ ಸಿಲುಕಿದ ಶಿರಾ ಭಾಗದ ರೈತರ ಪಾಡೀಗ ಮೂರಾಬಟ್ಟೆಯಾಗುವ ಹಂತದಲ್ಲಿದೆ. ದೇಶಾದ್ಯಂತ ಕೊರೋನಾ ಮಹಾಮಾರಿಯ ಹಾವಳಿಯು ಜನತೆಯನ್ನು ದಂಗು ಬಡಿಸಿದೆ. ಭಾರತ ಲಾಕ್‍ಡೌನ್ ಆದಾಗಿನಿಂದ ಶಿರಾ ತಾಲ್ಲೂಕಿನ ಅದೆಷ್ಟೋ ಮಂದಿ ನಿರಾಶ್ರಿತರ ಬದುಕು ಸಂದಿಗ್ದತೆಗೆ ಸಿಲುಕಿ ನಲುಗಿ ಹೋಗಿದೆ.

     ಕ್ಷೇತ್ರದ ಅಭಿವೃದ್ಧಿಗಿಂತಲೂ ಹೆಚ್ಚಾಗಿ ಈ ಭಾಗದ ಬಹುತೇಕ ರಾಜಕಾರಣಿಗಳು ಜನತೆಯ ಓಟನ್ನು ಪಡೆದು ಗೆದ್ದು ಗದ್ದುಗೆಯಲ್ಲಿ ಕೂತು ಅಭಿವೃದ್ಧಿಯ ಮಾತುಗಳನ್ನು ಬಿಕ್ಕಳಿಸಿದ್ದನ್ನು ಬಿಟ್ಟರೆ ಬಡ ರೈತನಿಗಾಗಲಿ, ಸೂರಿಲ್ಲದ ನಿರಾಶ್ರಿತರಿಗಾಗಲಿ ಸ್ಪಂದಿಸಿದ್ದು ಮಾತ್ರ ತುಂಬಾ ಕಡಿಮೆ.

     ಅದೆಷ್ಟೋ ಮಂದಿ ಅನರ್ಹರು ಕೂಡ ಹಸಿರು ಪಡಿತರ ಚೀಟಿ ಹೊಂದಿದ್ದರೂ ಅರ್ಹರಿಗೆ ಪಡಿತರ ಚೀಟಿ ಲಭ್ಯವಿಲ್ಲದೆ ಪರಿತಪಿಸುವಂತಹ ವಾತಾವರಣ ಮಾತ್ರ ಇನ್ನೂ ಈ ಕ್ಷೇತ್ರದಲ್ಲಿ ದೂರವಾಗಿಯೆ ಇಲ್ಲ.ಕೊರೋನಾ ಎಂಬ ಮಹಾಮಾರಿ ಇಡೀ ದೇಶವನ್ನೇ ತಲ್ಲಣಿಸುವಂತಹ ಸಂದರ್ಭದಲ್ಲಿ ಈ ಮೊದಲೇ ಬರದ ದವಡೆಗೆ ಸಿಲುಕಿದ ಶಿರಾ ತಾಲ್ಲೂಕಿನ ಜನತೆಗೆ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣಗೊಂಡಿದೆ. ಹೊರಗೆ ಹೋಗೋ ಅಂಗಿಲ್ಲ, ದುಡಿದು ತರೋ ಅಂಗಿಲ್ಲ ಪರಿಸ್ಥಿತಿ ಹೀಗಿರುವಾಗ ಜೀವನದ ಬಂಡಿ ಎಳೆಯುವುದಾದರೂ ಎನಿತು…?

      ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇನ್ನೇನು ಚುನಾವಣೆ ಸಮೀಪಿಸುತ್ತಿದೆ ಅನ್ನುವಾಗ ಎದ್ದೆನೋ ಬಿದ್ದೆನೋ ಎಂಬಂತೆ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಭಾಗಗಳಿಗೆ ಬಂದು ಶಾಲಾ-ಕಾಲೇಜುಗಳಿಗೆ ನೋಟ್ ಪುಸ್ತಕ, ಶಾಲಾ ಬ್ಯಾಗ್‍ಗಳನ್ನು ಧಾರಾಳವಾಗಿ ನೀಡುತ್ತಿದ್ದ ಅನೇಕ ಮಂದಿ, ಶಿರಾ ತಾಲ್ಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಭಾವದಿಂದ ಜನ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೂ, ಅಂತಹ ಕೆಲ ಮಂದಿ ಇತ್ತ ತಲೆ ಹಾಕಿ ಮಲಗಿಲ್ಲ.

       ಶಿರಾ ಭಾಗದ ಜನತೆಯ ಬಗ್ಗೆ ಹಾಗೂ ಇಲ್ಲಿನ ಜನರ ಸಂಕಷ್ಟದ ಬಗ್ಗೆ ಸಭೆ-ಸಮಾರಂಭಗಳಲ್ಲಿ ಉದ್ದುದ್ದ ಭಾಷಣ ಬಿಗಿಯುವ ಹಾಗೂ ಇಲ್ಲಿನ ಬವಣೆಯ ಬಗ್ಗೆ ತಾಸುಗಟ್ಟಲೆ ಮಾತನಾಡುವ ಮಂದಿ ಇದೀಗ ಭಾರತ್ ಬಂದ್‍ನಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಅಗತ್ಯವಿದೆ.

      ಶಿರಾ ಜನತೆ ಕಂಡಂತೆ ಬಹುತೇಕ ಭಿಕ್ಷುಕರು, ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರು ಶಿರಾ ನಗರದ ಶಾಲಾ ಆವರಣ, ಅಂಗಡಿ-ಮುಂಗಟ್ಟುಗಳ ಬದಿಗಳಲ್ಲಿ ಮಲಗಿಕೊಂಡು ಬೆಳಗಾದರೆ ಕೂಲಿನಾಲಿ ಮಾಡುತ್ತಿದ್ದವರು, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಂಗಮಾಯ ಆಗಿಬಿಟ್ಟಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಅನೇಕ ಹಮಾಲರು, ಕೂಲಿ ಕಾರ್ಮಿಕರು, ಬೀಡಿ ಕಟ್ಟುವಿಕೆಯನ್ನೇ ಜೀವನದ ಆಸರೆ ಮಾಡಿಕೊಂಡ ಬಹುತೇಕ ಕುಟುಂಬಗಳು ಕೋವಿಡ್-19 ಪರಿಣಾಮದಿಂದ ಒಂದಿಷ್ಟು ಸಂಕಷ್ಟಕ್ಕೆ ನಿಜಕ್ಕೂ ಈಡಾಗಿವೆ.

     ರಾಜ್ಯ ಸರ್ಕಾರ ನೀಡುವ ಉಚಿತ ಪಡಿತರವೊಂದನ್ನು ಬಿಟ್ಟರೆ ಉಳಿದ್ಯಾವ ವಸ್ತುಗಳೂ ಪುಕ್ಕಟೆ ಸಿಗದ ಪರಿಣಾಮ ಬಹುತೇಕ ಕುಟುಂಬಗಳ ಜೀವನ ಗೊಂದಲದ ಗೂಡಾಗಿದೆ. ಭಾರತ್ ಲಾಕ್‍ಡೌನ್ ಇನ್ನೂ ಒಂದಷ್ಟು ದಿನಗಳವರೆಗೆ ಮುಂದುವರೆಯುವ ಸಾಧ್ಯತೆಗಳೂ ಹೆಚ್ಚಾಗಿದ್ದು, ನಿರಾಶ್ರಿತರಿಗೆ ಸ್ಪಂದÀನಾಶೀಲ ಭಾವನೆಯ ಮಂದಿಯ ಅವಶ್ಯಕತೆ ಈಗ ಬಹಳಷ್ಟಿದೆ.

      ದಿನ ಕಳೆದಂತೆ ಅನೇಕ ಮಂದಿಗೆ ಆರ್ಥಿಕ ಸಂಕಷ್ಟವುಂಟಾಗಿ ಒಪ್ಪೊತ್ತಿನ ಊಟಕ್ಕೂ ತೊಂದರೆಯಾಗಿರುವಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸಮಾಜ ಸೇವಕರು, ಕೆಲ ಸ್ವಯಂಸೇವಾ ಸಂಘಟನೆಗಳು ಮುಂದೆ ಬಂದು ಶಿರಾ ಭಾಗದ ಕೆಲವೆಡೆ ಮಾಸ್ಕ್‍ಗಳನ್ನು ನೀಡುವಂತಹ, ದಿನಸಿಗಳನ್ನು ನೀಡುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನಾರ್ಹ ಸಂಗತಿಯೇ ಸರಿ.

     ಬಹುತೇಕ ಯುವಕರು ಯಾವುದೇ ರಾಜಕೀಯ ಪ್ರವೇಶದ ಭಾವನೆಗಳನ್ನು ಇಟ್ಟುಕೊಳ್ಳದೆ ಸ್ವಯಂ ಪ್ರೇರಿತರಾಗಿ ನಿರಾಶ್ರಿತರಿಗೆ ತಿಂಡಿ, ಊಟಗಳನ್ನು ನೀಡುತ್ತಿರುವುದು ಶ್ಲಾಘನಾರ್ಹ ಸಂಗತಿಯೇ ಸರಿ. ಲಿಂಗದಹಳ್ಳಿ ಚೇತನ್ ಎಂಬ ಪತ್ರಕರ್ತರೊಬ್ಬರು ಕಡು ಬಡ ಕುಟುಂಬಗಳು, ಹಕ್ಕಿ-ಪಿಕ್ಕಿ, ಹಂದಿಜೋಗಿಗಳು ಹಾಗೂ ಹೆದ್ದಾರಿ ಬದಿಯಲ್ಲಿ ಊಟವಿಲ್ಲದೆ ತತ್ತರಿಸುತ್ತಿರುವವರಿಗೆ ಕಳೆದ ಒಂದು ವಾರದಿಂದಲೂ ಸ್ಥಳಕ್ಕೇ ಹೋಗಿ ಊಟದ ಪಾಕೆಟ್‍ಗಳನ್ನು ನೀಡುತ್ತಿದ್ದು, ಪ್ರಚಾರವನ್ನೂ ಬಯಸದೆಯೆ ಸೇವೆಯಲ್ಲಿ ತೊಡಗಿದ್ದಾರೆ.

        ಪ್ರೆಸಿಡೆನ್ಸಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಎಂ.ಚಿದಾನಂದ್‍ಗೌಡ ಲಾಕ್‍ಡೌನ್ ಆದಾಗಿನಿಂದಲೂ ಕೊರೋನಾ ಹಿನ್ನೆಲೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಶಿರಾ ನಗರದ ಆರಕ್ಷಕರು, ಆರೋಗ್ಯ ಇಲಾಖಾ ಸಿಬ್ಬಂದಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ದಿನ ನಿತ್ಯವೂ ಕಲ್ಪಿಸುತ್ತಲೆ ಬರುತ್ತಿರುವುದು ಒಂದೆಡೆಯಾದರೆ, ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್‍ಗೌಡ ಅವರ ಅಭಿಮಾನಿಗಳು ಅನೇಕ ಮಂದಿಗೆ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಜಿ.ಪಂ. ಮಾಜಿ ಸದಸ್ಯ ಸಿ.ಆರ್.ಉಮೇಶ್ ಸೇರಿದಂತೆ ಬಹುತೇಕ ಸಮಾಜ ಸೇವಕರು ಕಡು ಬಡ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ನೀಡುತ್ತಿದ್ದು, ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ.

        ಶಿರಾ ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್ ಹಾಗೂ ಅವರ ಸ್ನೇಹಿತರ ಬಳಗವೂ ಸೇರಿದಂತೆ ಸ್ವಯಂಸೇವಕ ಸಂಘ ಹಾಗೂ ಹಿಂದೂ ಜಾಗರಣಾ ವೇದಿಕೆಯು ತಾಲ್ಲೂಕಿಗೆ ಸೀಮಿತಗೊಂಡಂತೆ ಒಂದಷ್ಟು ಮಹತ್ವದ ಸಮಾಜ ಸೇವೆಗೆ ಮುಂದಾಗಿದೆ. ಈ ಸಂಘಟನೆಗಳು ನಿರಾಶ್ರಿತರಿಗೆ ವ್ಯಾಪಕವಾಗಿ ಊಟೋಪಚಾರದ ವ್ಯವಸ್ಥೆಯನ್ನು ನಿರಂತರವಾಗಿ ಕೈಗೊಂಡಿರುವುದು ಹೆಮ್ಮೆಯ ಸಂಗತಿಯೂ ಹೌದು.

        ವಿಜಯರಾಜ್ ಹಾಗೂ ಸ್ವಯಂ ಸೇವಕರ ಒಂದು ಬೃಹತ್ ತಂಡವೇ ಹಸಿದವರಿಗೆ ಅನ್ನ ನೀಡಲು ಮುಂದಾಗಿದ್ದು, ಹಸಿವಿದ್ದವರನ್ನು ಹುಡುಕಿಕೊಂಡು ಹೋಗಿ ಊಟೋಪಚಾರ ಮಾಡುವ ಪ್ರಾಮಾಣಿಕ ಸೇವೆಯಲ್ಲಿ ತೊಡಗಿದೆ. ವಿಜಯರಾಜ್ ಅವರ ಮನೆಯಲ್ಲಿ ದಿನವಿಡೀ ತಿಂಡಿ, ಊಟದ ತಯಾರಿಗಾಗಿಯೇ ತಂಡವೊಂದು ಸಿದ್ಧಗೊಂಡಿದೆ.

         ಈವರೆಗೆ ನಗರದ ಹಾಗೂ ಸಮೀಪದ ಹಳ್ಳಿಗಳ ಜನತೆಗೆ ಸ್ಥಳಕ್ಕೇ ಹೋಗಿ ಪಾಕೆಟ್‍ಗಳಲ್ಲಿ ಊಟ ನೀಡುತ್ತಿದ್ದ ವಿಜಯರಾಜ್ ಮತ್ತು ಅವರ ತಂಡ ಇದೀಗ ಗ್ರಾಮೀಣ ಪ್ರದೇಶಕ್ಕೂ ಹೋಗಿ ಊಟಕ್ಕೂ ತೊಂದರೆ ಇರುವ ಮಂದಿಗೆ ಊಟ ನೀಡಲು ಸಿದ್ಧವಿದೆ. ಹಸಿದ ಮಂದಿ ಗ್ರಾಮೀಣ ಪ್ರದೇಶದಿಂದಲೂ 9986771044 ಈ ನಂಬರ್‍ಗೆ ಕರೆ ಮಾಡಿದರೆ ಸಾಕು ಸ್ಥಳಕ್ಕೆ ನಮ್ಮದೇ ಕಾರ್ಯಕರ್ತರು ಹೋಗಿ ಊಟ ನೀಡಿ ಬರುವ ವ್ಯವಸ್ಥೆ ಕಲ್ಪಿಸಿಕೊಂಡಿದ್ದೇವೆ ಎನ್ನುವ ವಿಜಯರಾಜ್ ಅತ್ಯಂತ ಕಡು ಬಡ ಕುಟುಂಬವಾಗಲಿ, ನಿರಾಶ್ರಿತರಾಗಲಿ ಈ ದೂರವಾಣಿಗೆ ಕರೆ ಮಾಡಿದರೆ ನಾವು ಸ್ಪಂದಿಸುತ್ತೇವೆ, ನಮ್ಮ ಕಾರ್ಯಕರ್ತರು ಊಟವನ್ನು ನೀಡುತ್ತಾರೆ ಅನ್ನುತ್ತಾರೆ.

        ಒಟ್ಟಾರೆ ಶಿರಾ ನಗರವೂ ಸೇರಿದಂತೆ ತಾಲ್ಲೂಕಿನ ಬಹುಭಾಗಗಳಲ್ಲಿ ಸ್ವಯಂ ಪ್ರೇರಿತರಾಗಿ ಬಹಳಷ್ಟು ಮಂದಿ ಯುವಕರು, ಸಮಾಜ ಸೇವಕರು ಉಚಿತ ಹಾಲು, ತಿಂಡಿ, ಊಟ ಸೇರಿದಂತೆ ವ್ಯಾಪಕ ಸಹಾಯ ಹಸ್ತ ನೀಡುತ್ತಿದ್ದು, ಲಾಕ್‍ಡೌನ್ ಮುಂದುವರಿದಲ್ಲಿ ಈ ಬರದ ಬೀಡಿಗೆ ಮತ್ತಷ್ಟು ಸಹಾಯ ಹಸ್ತದ ಅವಶ್ಯಕತೆ ಸಾಕಷ್ಟಿದ್ದು ಈ ನಿಟ್ಟಿನಲ್ಲಿ ಉಳ್ಳವರು ಧಾರಾಳತನ ಮೆರೆಯಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap