ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ನಿರಂತರ ಬರಗಾಲದ ನಡುವೆಯೂ ಕೃಷಿ, ವಾಣಿಜ್ಯ ಮತ್ತು ಕೈಗಾರಿಕ ಕ್ಷೇತ್ರಗಳಲ್ಲಿ ಹಿನ್ನಡೆಯನ್ನು ಅನುಭವಿಸಿದ್ದರೂ ಸಹ ರಾಜ್ಯಮಟ್ಟದಲ್ಲಿಯೇ ವಿಶೇಷವಾದ ಅಭಿವೃದ್ಧಿಯನ್ನು ಕಂಡ ತಾಲ್ಲೂಕು ಕ್ಷೇತ್ರವಾಗಿ ಚಳ್ಳಕೆರೆ ಕ್ಷೇತ್ರ ಹೊರ ಹೊಮ್ಮಿದ್ದು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವಿರಥ ಶ್ರಮದ ಫಲವಾಗಿ ಕೋಟಿ ಮೌಲ್ಯದ ಅನೇಕ ಕಟ್ಟಡಗಳು ನಿರ್ಮಾಣಗೊಂಡು ವರ್ಷಗಳೇ ಕಳೆಯುತ್ತಿದ್ದರೂ ರಾಜ್ಯದ ರಾಜಕೀಯ ಪರಿಸ್ಥಿತಿ ಹಿನ್ನೆಲ್ಲೆಯಲ್ಲಿ ಈ ಕಟ್ಟಡಗಳು ಇನ್ನೂ ಉದ್ಘಾಟನಾ ಭಾಗ್ಯ ಕಾಣದೇ ಇದ್ದು, ಸಾರ್ವಜನಿಕರ ಅಸಮದಾನಕ್ಕೆ ಕಾರಣವಾಗಿದೆ.
ಚಳ್ಳಕೆರೆ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಮಕ್ಕಳಿಗೆ ಉನ್ನತ್ತ ಶಿಕ್ಷಣ ದೊರೆಯಬೇಕೆಂಬ ಅಭಿಲಾಷೆಯಿಂದ ಈ ಭಾಗದ ಜನರ ಅಪೇಕ್ಷೆಯಂತೆ ನಗರದ ಬಳ್ಳಾರಿ ರಸ್ತೆಯ ಚಿತ್ರಯ್ಯನಹಟ್ಟಿ ಬಳಿಯ ಕರೇಕಲ್ ಆವರಣದ ಸುಮಾರು 100 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಭವ್ಯವಾದ ವಿಶಾಲವಾದ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು ಈಗಾಗಲೇ ನಿರ್ಮಿಸಿದ್ದು, ಕಟ್ಟಡ ಸಂಪೂರ್ಣ ಪೂರ್ಣಗೊಂಡಿದ್ದು, ಕೆಲವೊಂದು ಸಲಕರಣೆಗಳ ಹಿನ್ನೆಲೆಯಲ್ಲಿ ಇನ್ನೂ ಉದ್ಘಾಟನೆಯಾಗಿಲ್ಲ.
ಪ್ರಸ್ತುತ ಜೂನ್ 2019ರ ಶೈಕ್ಷಣಿಕ ವರ್ಷದಲ್ಲಿಯೇ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶವನ್ನು ಪ್ರಾರಂಭಿಸಿ ಹಳ್ಳಿಗಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಊರ ನೆಲದಲ್ಲಿಯೇ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿತ್ತಾದರೂ ಕಳೆದ ವರ್ಷವೇ ನಿರ್ಗಮನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆ ಮಾಡಿಸುವ ಬಗ್ಗೆ ಸಿದ್ದತೆಗಳು ನಡೆಯುತ್ತಿರುವಾಗಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಕಟ್ಟಡ ಉದ್ಘಾಟನೆಗೆ ಕಾಲ ಕೂಡಿಬರಲಿಲ್ಲ.
ತದನಂತರ ಡಿಸೆಂಬರ್ 2018ರಲ್ಲಿ ಪ್ರಸ್ತುತ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಕರೆಸಿ ಉದ್ಘಾಟನೆ ಮಾಡಿಸುವ ಯೋಜನೆ ಇತ್ತಾದರೂ ಮಾರ್ಚ್, ಏಪ್ರಿಲ್ 19ರ ಮಾಹೆಯಲ್ಲಿ ಉದ್ಘಾಟಿಸುವ ಚಿಂತನೆ ನಡೆದ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿ ಇಂಜನಿಯರಿಂಗ್ ಕಾಲೇಜು ಕಟ್ಟಡ ಉದ್ಘಾಟನೆಯಾಗಲಿಲ್ಲ. ಕಳೆದ ಸುಮಾರು ಒಂದೂವರೆ ವರ್ಷದಿಂದ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆಗೆ ಇನ್ನೂ ಸಮಯ ಕೂಡಿ ಬಂದಿಲ್ಲದ ಕಾರಣ ಈ ಕಟ್ಟಡ ಉದ್ಘಾಟನೆಯಾಗದೇ ಇಂಜಿನಿಯರಿಂಗ್ ಪ್ರವೇಶ ಬಯಸುವವರು ಇನ್ನು ಸ್ವಲ್ಪ ದಿನ ಕಾಯಬೇಕಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುಮಾರು 6.50 ಕೋಟಿ ವೆಚ್ಚದ ಮಹಿಳಾ ಮತ್ತು ಮಕ್ಕಳ ಎರಡು ಅಂತಸ್ಥಿನ ಕಟ್ಟಡ ನಿರ್ಮಾಣವಾಗಿ ವರ್ಷಗಳೇ ಉರುಳಿದರೂ ಈ ಕಟ್ಟಡವೂ ಸಹ ಉದ್ಘಾಟನೆ ಭಾಗ್ಯ ಕಾಣಲು ಸಾಧ್ಯವಾಗಿಲ್ಲ. ಕಳೆದ ಜೂನ್-ಜುಲೈ ಮಾಹೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಕರೆಸಿ ಈ ನೂತನ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವ ಉದ್ದೇಶವಿತ್ತಾದರೂ ಅದೂ ಸಹ ಈಡೇರಲಿಲ್ಲ.
ಕಾರಣ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಭೇಟಿಯ ದಿನಾಂಕ ಗೊತ್ತು ಪಡಿಸುವಲ್ಲಿ ಸಾಧ್ಯವಾಗದ ಕಾರಣ ಈ ಕಟ್ಟಡವೂ ಸಹ ಉದ್ಘಾಟನೆಯಾಗದೇ ಹಾಗೇ ನಿಂತಿದೆ. ಪ್ರತಿನಿತ್ಯ ತಾಲ್ಲೂಕಿನ ನೂರಾರು ಮಕ್ಕಳು ಮತ್ತು ಗರ್ಭಿಣಿ, ಬಾಂಣತಿಯರಿಗೆ ಚಿಕಿತ್ಸೆ ಆಸರೆಯಾಗಬೇಕಾದ ಈ ಕಟ್ಟಡ ಉದ್ಘಾಟನೆ ಕಾಣದ ಹಿನ್ನೆಲೆಯಲ್ಲಿ ಸೇವೆಗೆ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗದ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಇಲ್ಲೇ ಪ್ರಾರಂಭಿಸಬೇಕೆಂಬ ಉದ್ದೇಶದಿಂದ 9.50 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ, ಕಟ್ಟಡವನ್ನು ತಾಲ್ಲೂಕು ಕಚೇರಿ ಆವರಣದಲ್ಲಿ ನಿರ್ಮಿಸಿದ್ದು, ಈ ಕಟ್ಟಡದ ಕಾಮಗಾರಿ ಸಂಪೂರ್ಣಗೊಂಡಿದ್ದು, ಇದನ್ನು ಸಹ ಉದ್ಘಾಟಿಸಿಬೇಕಿದ್ದು, ಮುಖ್ಯಮಂತ್ರಿ ಮತ್ತು ಇತರೆ ಸಚಿವರ ಉದ್ಘಾಟನಾ ಕಾರ್ಯಕ್ರಮದ ದಿನಾಂಕ ಹೊಂದಾಣಿಕೆಯಾಗದ ಕಾರಣ ಈ ಕಟ್ಟಡದ ಉದ್ಘಾಟನೆಯೂ ಸಹ ಆಗದೆ ಸಾರ್ವಜನಿಕರು ಪ್ರತಿನಿತ್ಯ ನಗರದ ವಿವಿಧ ಭಾಗಗಳಲ್ಲಿರುವ ಕಚೇರಿಗಳಿಗೆ ಅಲೆದಾಡಬೇಕಿದೆ.
ಕ್ಷೇತ್ರದ ಶಾಸಕರು ಒಂದೇ ಕಟ್ಟಡದಲ್ಲಿ ಹಲವಾರು ಕಚೇರಿಗಳು ಕಾರ್ಯನಿರ್ವಹಿಸುವಂತಾದರೆ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದ ಈ ಕಟ್ಟಡವನ್ನು ನಿರ್ಮಿಸಿದ್ದು, ಉದ್ಘಾಟನೆ ಭಾಗ್ಯ ಕಾರಣದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರು ರಾಜಕೀಯ ಚದುರಂಗದಾಟದ ಸ್ಥಿತಿಯ ಹಿನ್ನೆಲೆಯಲ್ಲಿ ಈ ಕಟ್ಟಡವೂ ಸಹ ಇನ್ನೂ ಉದ್ಘಾಟನೆಯಾಗಿಲ್ಲ.
ಒಟ್ಟಿನಲ್ಲಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕೋಟಿ ಕೋಟಿ ಮೌಲ್ಯದ ಹಲವಾರು ಸುಸಜ್ಜಿತ ಕಟ್ಟಡಗಳು ನಿರ್ಮಾಣಗೊಂಡು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಬೇಕಿದ್ದು, ರಾಜಕೀಯ ದೊಂಬರಾಟದ ನಡುವೆ ಉದ್ಘಾಟನಾ ಕಾರ್ಯ ನಡೆಯುತ್ತಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಕೋಟಿ ಕೋಟಿ ಮೌಲ್ಯದ ಕಟ್ಟಡಗಳು ಉದ್ಘಾಟನೆಯಾಗದೇ ಕಾರ್ಯನಿರ್ವಹಿಸದೆ ತಟಸ್ಥವಾಗಿದ್ದು, ನಾಗರೀಕರಿಗೆ ಬೇಸರ ತರಿಸಿದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ನಿರ್ಮಿಸಿದ ಎಲ್ಲಾ ಕಟ್ಟಡಗಳನ್ನು ಶೀಘ್ರದಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಉದ್ಘಾಟಿಸುವ ಮೂಲಕ ಪ್ರತಿನಿತ್ಯ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ವಿಧಾಯ ಹೇಳಬೇಕಿದೆ. ಚುನಾಯಿತ ಜನಪ್ರತಿನಿಧಿಗಳು ಸಹ ಅವಶ್ಯವಿರುವ ಕಟ್ಟಡಗಳ ಉದ್ಘಾಟನೆಗೆ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕಚೇರಿ ಕಟ್ಟಡಗಳನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಿದಲ್ಲಿ ಕೋಟ್ಯಾಂತರ ಮೌಲ್ಯದ ಕಟ್ಟಡಗಳು ಪ್ರಾರಂಭವಾಗಿ ಕಾರ್ಯನಿರ್ವಹಿಸುವಂತಾದಲ್ಲಿ ಮಾತ್ರ ಜನತೆ ನೆಮ್ಮದಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೂತನ ಕಟ್ಟಡಗಳ ಉದ್ಘಾಟನೆಯನ್ನು ಶೀಘ್ರವೇ ನೆರವೇರಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ