ಶಿರಾ
ಜೀವಕೋಶದಲ್ಲಿ ಇದ್ದಕಿದ್ದ ಹಾಗೆಯೆ ಹೆಚ್ಚು ಬೆಳವಣಿಗೆಯಾಗಿ ಗಡ್ಡೆ ರೂಪ ಪಡೆದರೆ ನಿರ್ಲಕ್ಷ್ಯವಹಿಸ ಬಾರದು. ಅಂತಹ ಗಡ್ಡೆ ರಕ್ತನಾಳಗಳ ಮೂಲಕ ದೇಹವನ್ನು ಆವರಿಸಿಕೊಳ್ಳುವ ಸಾಧ್ಯತೆ ಇದ್ದು, ಕ್ಯಾನ್ಸರ್‍ನಂತಹ ಮಾರಕ ಕಾಯಿಲೆಯ ಸ್ವರೂಪ ಪಡೆಯಬಹುದಾದ ಮುನ್ಸೂಚನೆಯಾಗಿದೆ. ಕ್ಯಾನ್ಸರ್ ಕಾಯಿಲೆ ಬಂದರೆ ಭಯ ಪಡುವ ಅವಶ್ಯಕತೆ ಇಲ್ಲ.
ಪ್ರಾಥಮಿಕ ಹಂತದಲ್ಲಿಯೆ ಸೂಕ್ತ ಚಿಕಿತ್ಸೆ ರೋಗ ಗುಣಮುಖವಾಗಲಿದೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಮೋಹನ್‍ದಾಸ್ ಹೇಳಿದರು. ಅವರು ಶಿರಾ ತಾಲ್ಲೂಕಿನ ಗಡಿಗ್ರಾಮ ದ್ವಾರನಕುಂಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ಕಾಯಿಲೆ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಮಾತನಾಡಿದರು.
ದೇಶದಲ್ಲಿ 11 ಲಕ್ಷ ಕ್ಯಾನ್ಸರ್ ರೋಗಿಗಳಿದ್ದಾರೆ. 2018 ರ ಸರ್ವೇ ಪ್ರಕಾರ ರಾಜ್ಯದಲ್ಲಿ 9180 ಜನ ಪುರುಷರಲ್ಲಿ ಹಾಗೂ 9860 ಜನ ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಸರಳ ಜೀವನದ ಆಹಾರ ಪದ್ದತಿ ಜೊತೆಗೆ, ತಂಬಾಕು ಸೇವನೆ ತ್ಯಜಿಸಿದರೆ ಕ್ಯಾನ್ಸರ್ ನಿಯಂತ್ರಣ ಸಾಧ್ಯ. ನಾನು ಮತ್ತು ನನ್ನಿಂದಲೇ ರೋಗ ನಿಯಂತ್ರಣ ಎಂಬ ಘೋಷಣೆಯೊಂದಿಗೆ, ಕ್ಯಾನ್ಸರ್ ಹತ್ತಿರ ಸುಳಿಯದಂತೆ ಮಾಡುವುದು ಪ್ರತಿಯೊಬ್ಬರ ನಾಗರಿಕರ ಜವಾಬ್ದಾರಿಯಾಗಬೇಕೆಂದರು.
ಡಾ.ನಾಗರಾಜ ಪಾಟೀಲ್ ಮಾತನಾಡಿ, ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತದೆ. 35 ರಿಂದ 50 ವರ್ಷದ ಮಹಿಳೆಯರಲ್ಲಿ ಇಂತಹ ಕಾಯಿಲೆ ಹೆಚ್ಚು. ಸ್ತನಗಳಲ್ಲಿ ಗಡ್ಡೆ ಕಂಡರೆ, ಇಲ್ಲವೇ ರಕ್ತ ಸ್ರಾವ ಹೆಚ್ಚಾಗಿದ್ದರೆ ಅಂತಹ ಮಹಿಳೆಯರು ನಿರ್ಲಕ್ಷ್ಯವಹಿಸದೆ, ಮುಜುಗರ ಪಡದೆ ವೈದ್ಯರಲ್ಲಿ ತಪಾಸಣೆಗೆ ಒಳಪಡಬೇಕೆಂದರು.
ಕೆ.ಜೆ.ತಿಮ್ಮರಾಜು ಮಾತನಾಡಿ ತಂಬಾಕು ಸೇವನೆಯಿಂದ ಪುರುಷರಲ್ಲಿ ಹೆಚ್ಚು ಬಾಯಿ ಕ್ಯಾನ್ಸರ್ ಕಂಡು ಬರುತ್ತದೆ. ಬಾಯಿಯಲ್ಲಿ ಹುಣ್ಣುಗಳಾಗಿ ವಾಸಿಯಾಗದೆ ಹೆಚ್ಚು ದಿನ ಇದ್ದರೆ, ಅಂತಹ ಹುಣ್ಣು ಕ್ಯಾನ್ಸರ್ ಗಡ್ಡೆಗಳಾಗಿ ಪರಿವರ್ತನೆಯಾಗುತ್ತವೆ. ತಂಬಾಕು, ಬೀಡಿ, ಸಿಗರೇಟ್ ಸೇವನೆ ತ್ಯಜಿಸುವ ಮೂಲಕ ಆರೋಗ್ಯ ಕಾಪಾಡಿ ಕೊಳ್ಳಬೇಕಿದೆ ಎಂದರು.ಗ್ರಾಪಂ ಸದಸ್ಯ ತಿಪ್ಪೇಶ್‍ಗೌಡ, ಶಿಕ್ಷಕರಾದ ಮಹಾಲಿಂಗಯ್ಯ, ಶ್ರೀರಾಮಯ್ಯ, ಆರೋಗ್ಯ ಇಲಾಖೆಯ ನರಸಿಂಹಮೂರ್ತಿ, ತಿಮ್ಮರಾಜು, ಕಿಶೋರ್ ಅಹಮದ್, ಮಂಜುನಾಥ ಸ್ವಾಮಿ ಸೇರಿದಂತೆ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
